ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ತೊಲಗಲಿ-Shivarajkumar

ನಟ ಶಿವರಾಜ್‌ಕುಮಾರ್
ನಟ ಶಿವರಾಜ್‌ಕುಮಾರ್
Published on
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯವನ್ನು ಹೋಗಲಾಡಿಸಬೇಕು. ಕಲಾವಿದರಿಗೆ ಹೆಚ್ಚಿನ ಅವಕಾಶ, ಸಂಭಾವನೆ ಸಿಗುವಂತಾಗಬೇಕು ಎಂದು ನಟ ಶಿವರಾಜ್‌ಕುಮಾರ್ ಪ್ರತಿಪಾದಿಸಿದ್ದಾರೆ.
ಎಸ್.ಪಿ.ವರದರಾಜುಬಳಗ, ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಎಸ್. ಪಿ.ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ಭಾಷೆಯಿಂದ ಬಂದವರಿಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಂಭಾವನೆ ನೀಡಲಾಗುತ್ತಿದೆ. ಆದರೆ, ನಮ್ಮವರಿಗೆ ಸೂಕ್ತ ಸಂಭಾವನೆ ನೀಡುತ್ತಿಲ್ಲ. ಚಿತ್ರರಂಗದಲ್ಲಿನ ಗುಂಪುಗಾರಿಕೆ ತೊಲಗಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುವಂತಾಗಬೇಕು. ಈ ಮೂಲಕ ಕಲಾವಿದರು ಕೂಡ ಜೀವನ ಕಟ್ಟಿಕೊಳ್ಳಬೇಕು. ನಮ್ಮ ತಂದೆ ವರನಟ ಡಾ.ರಾಜ್‌ಕುಮಾರ್ ಕೂಡ ಇದನ್ನೇ ಹೇಳಿದ್ದರು. ನನ್ನ ಸಿನಿಮಾದಲ್ಲಿ ಅವಕಾಶ, ಸೂಕ್ತ ಸಂಭಾವನೆ ನೀಡುತ್ತಿದ್ದೇನೆ ಎಂದು ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ರಾಜ್‌ಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ಸಹೋದರ ವರದರಾಜು. ರಾಜ್‌ಕುಮಾರ್, ಪಾರ್ವತಮ್ಮ ಹಾಗೂ ವರದರಾಜು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜ್‌ಕುಮಾರ್ ಅವರದ್ದು ಭಾವ ಪ್ರಧಾನ ವ್ಯಕ್ತಿತ್ವವಾದರೆ, ವರದರಾಜು ಅವರದ್ದು ಬುದ್ಧಿ ಪ್ರಧಾನ ವ್ಯಕ್ತಿತ್ವವಾಗಿತ್ತು. ಪಾರ್ವತಮ್ಮ ಅವರು ಆರ್ಥಿಕ ಭದ್ರತೆ ಒದಗಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಭೂಮಿ ಕಲಾವಿದೆ ಪುಪ್ಪಮಾಲಾ ಎ.ಅಣ್ಣಿಗೇರಿ, ಚಿತ್ರನಿರ್ದೇಶಕ ಬಿ.ಗುರುರಾಜು ಅವರಿಗೆ ಎಸ್. ಪಿ.ವರದರಾಜು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಾಯಕಿ ಮಂಜುಳ ನಾಗರಾಜ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಟರಾದ ರಾಘವೇಂದ್ರ ರಾಜ್‌ಕುಮಾರ್, ರಾಮಕೃಷ್ಣ, ನಟಿಯರಾದ ಅಂಬಿಕಾ, ಗೀತಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net