ದುಬೈ, ಅಬುಧಾಬಿ ಭಸ್ಮ? ಇರಾನ್ ಯುದ್ಧಕ್ಕೆ ಹೋದರೆ ಸರ್ವನಾಶ ಗ್ಯಾರಂಟಿ! ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಿಂದ ಯುಎಇಗೆ ನಡುಕ! Jeffrey Sachs

ದುಬೈ, ಅಬುಧಾಬಿ ಭಸ್ಮ? ಇರಾನ್ ಯುದ್ಧಕ್ಕೆ ಹೋದರೆ ಸರ್ವನಾಶ ಗ್ಯಾರಂಟಿ! ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಿಂದ ಯುಎಇಗೆ ನಡುಕ!
ದುಬೈ, ಅಬುಧಾಬಿ ಭಸ್ಮ? ಇರಾನ್ ಯುದ್ಧಕ್ಕೆ ಹೋದರೆ ಸರ್ವನಾಶ ಗ್ಯಾರಂಟಿ! ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಿಂದ ಯುಎಇಗೆ ನಡುಕ!
Published on
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸುತ್ತಿರುವ ಬೆನ್ನಲ್ಲೇ, ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್(Jeffrey Sachs) ಅವರು ಯುನೈಟೆಡ್ ಅರಬ್ ಎಮಿರೇಟ್ಸ್​ಗೆ ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ANI ಜತೆ ಮಾತನಾಡಿದ ಜೆಫ್ರಿ, ಯುಎಇ ಈ ಯುದ್ಧಕ್ಕೆ ಪ್ರವೇಶಿಸಿದರೆ ದುಬೈ ಮತ್ತು ಅಬುಧಾಬಿಯಂತಹ ವಿಶ್ವದ ಅತ್ಯಾಧುನಿಕ ನಗರಗಳು ಕ್ಷಣಾರ್ಧದಲ್ಲಿ ಸ್ಫೋಟಗೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜೊತೆ ಕೈಜೋಡಿಸಿ ಇರಾನ್ ವಿರುದ್ಧ ನಿಲ್ಲುವುದು ಯುಎಇ ಪಾಲಿಗೆ ಆತ್ಮಹತ್ಯಾತ್ಮಕ ನಿರ್ಧಾರವಾಗಲಿದೆ ಎಂದು ವಿಶ್ಲೇಷಿಸಿದ್ದಾರೆ.

ಪ್ರವಾಸಿ ತಾಣಗಳೇ ಇರಾನ್‌ನ ಗುರಿ?

ಮುಂದುವರೆದು ಮಾತನಾಡಿದ ಜೆಫ್ರಿ ಸ್ಯಾಚ್ಸ್, ಯುಎಇ ಆಡಳಿತವು ಅತ್ಯಂತ ಅಪಾಯಕಾರಿ ಮತ್ತು ಅಸಂಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ. ದುಬೈ ಮತ್ತು ಅಬುಧಾಬಿ ನಗರಗಳು ಜಾಗತಿಕ ಪ್ರವಾಸೋದ್ಯಮ ಮತ್ತು ಹಣಕಾಸು ಕೇಂದ್ರಗಳಾಗಿ ಬೆಳೆದಿವೆಯೇ ಹೊರತು, ಅವು ಶಸ್ತ್ರಸಜ್ಜಿತ ಮಿಲಿಟರಿ ವಲಯಗಳಲ್ಲ. ಇವು ಶ್ರೀಮಂತರು ಪಾರ್ಟಿ ಮಾಡಲು ಮತ್ತು ಹಣ ಹೂಡಿಕೆ ಮಾಡಲು ಬರುವ ರೆಸಾರ್ಟ್ ಪ್ರದೇಶಗಳು. ಒಂದು ವೇಳೆ ಯುದ್ಧ ಆರಂಭವಾದರೆ, ಇರಾನ್‌ನ ಕ್ಷಿಪಣಿಗಳಿಂದ ಈ ನಗರಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ನಗರಗಳೇ ಹಾರಿಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಸ್ನೇಹ ಮಾರಕ: ಕಿಸಿಂಜರ್ ಮಾತು ನೆನಪಿಸಿದ ಸ್ಯಾಚ್ಸ್

ಯುಎಇ ಹಳೆಯ ಅಮೆರಿಕನ್ ರಕ್ಷಣಾ ನೀತಿಯನ್ನು ನಂಬಿ ಮೋಸಹೋಗುತ್ತಿದೆ ಎಂದು ಸ್ಯಾಚ್ಸ್ ವಾದಿಸಿದ್ದಾರೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಅವರ ಪ್ರಸಿದ್ಧ ಮಾತನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕಕ್ಕೆ ಶತ್ರುವಾಗುವುದು ಅಪಾಯಕಾರಿ, ಆದರೆ ಅಮೆರಿಕದ ಗೆಳೆಯನಾಗುವುದು ಪ್ರಾಣಕ್ಕೆ ಸಂಚಕಾರ ತರಬಲ್ಲದು ಎಂದು ಎಚ್ಚರಿದ್ದರು.
ಗಲ್ಫ್ ರಾಷ್ಟ್ರಗಳು ಇಸ್ರೇಲ್ ಜೊತೆ ಮಾಡಿಕೊಂಡಿರುವ ಅಬ್ರಹಾಂ ಒಪ್ಪಂದವು ವಿನಾಶಕ್ಕೆ ಆಹ್ವಾನ ನೀಡಿದಂತಿದೆ. ಅಮೆರಿಕದ ಮಿಲಿಟರಿ ನೆಲೆಗಳು ನಮ್ಮ ಮಣ್ಣಿನಲ್ಲಿವೆ, ಅವರು ನಮ್ಮನ್ನು ರಕ್ಷಿಸುತ್ತಾರೆ ಎಂದು ಯುಎಇ ನಂಬಿಕೊಂಡಿದೆ. ಆದರೆ ಇದು ದೊಡ್ಡ ತಪ್ಪು ಲೆಕ್ಕಾಚಾರವಾಗಿದೆ. ಅಮೆರಿಕದ ರಕ್ಷಣೆ ನಂಬಿ ಇರಾನ್ ಎಂಬ ಬಲಿಷ್ಠ ರಾಷ್ಟ್ರದ ವಿರುದ್ಧ ನಿಲ್ಲುವುದು ಮೂರ್ಖತನ ಎಂದು ಜೆಫ್ರಿ ಸ್ಯಾಚ್ಸ್ ಹೇಳಿದ್ದಾರೆ.

ಇರಾನ್‌ನಿಂದಲೂ ನೇರ ಬೆದರಿಕೆ

ಜೆಫ್ರಿ ಸ್ಯಾಚ್ಸ್ ಅವರ ಈ ಎಚ್ಚರಿಕೆ ಇರಾನ್ ಇತ್ತೀಚೆಗೆ ನೀಡಿದ ಬೆದರಿಕೆಗೆ ಪೂರಕವಾಗಿದೆ. ಮಾರ್ಚ್ 20 ರಂದು ಇರಾನ್ ವಿದೇಶಾಂಗ ಸಚಿವಾಲಯವು ಅರಬ್ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಿತ್ತು. ನಿಮ್ಮ ಮಣ್ಣಿನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಇರಾನ್ ವಿರುದ್ಧ ದಾಳಿ ಮಾಡಲು ಬಳಸಲು ಬಿಡಬೇಡಿ. ಒಂದು ವೇಳೆ ಅಮೆರಿಕ ಅಥವಾ ಇಸ್ರೇಲ್ ನಿಮ್ಮ ಭೂಪ್ರದೇಶವನ್ನು ಬಳಸಿ ಇರಾನ್ ಮೇಲೆ ದಾಳಿ ನಡೆಸಿದರೆ, ಆ ದಾಳಿಗೆ ನೀವೇ ಹೊಣೆಯಾಗಬೇಕಾಗುತ್ತದೆ ಮತ್ತು ಇರಾನ್ ಪ್ರತಿಯಾಗಿ ನಿಮ್ಮ ಮೇಲೆಯೇ ದಾಳಿ ನಡೆಸಲಿದೆ ಎಂದು ಇರಾನ್ ಎಚ್ಚರಿಸಿದೆ.

ಹಣದ ಹೊಳೆ ಹರಿಸುತ್ತಿರುವ ಯುಎಇ

ಇಷ್ಟೆಲ್ಲಾ ಅಪಾಯಗಳಿದ್ದರೂ ಯುಎಇ ಅಮೆರಿಕದ ಹೂಡಿಕೆಯಲ್ಲಿ ಟ್ರಿಲಿಯನ್ ಡಾಲರ್ ಹಣವನ್ನು ಸುರಿಯುತ್ತಿದೆ. ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಸ್ಯಾಚ್ಸ್, ನಿನ್ನೆ ತಾನೇ ನೀವು ಇರಾನ್ ಅನ್ನು ದುಷ್ಟ ಎಂದು ಕರೆದು ಅಮೆರಿಕಕ್ಕೆ ಬೆಂಬಲ ಘೋಷಿಸಿದ್ದೀರಿ. ಇಷ್ಟು ನಾಜೂಕಿನ ಪರಿಸ್ಥಿತಿಯಲ್ಲಿ ಸೋಲುವ ಕುದುರೆಯ ಮೇಲೆ ನೀವು ಪಣ ಕಟ್ಟುತ್ತಿದ್ದೀರಿ. ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ವಾಸ್ತವವನ್ನು ಅರ್ಥಮಾಡಿಕೊಳ್ಳಿ ಎಂದು ಜೆಫ್ರಿ ಸ್ಯಾಚ್ಸ್ ಸಲಹೆ ನೀಡಿದ್ದಾರೆ.

ಯುದ್ಧದ ಆರ್ಥಿಕ ಪರಿಣಾಮ ಮತ್ತು ಆತಂಕ

ಪ್ರಸ್ತುತ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದು, ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ. ದುಬೈ ಮತ್ತು ಅಬುಧಾಬಿಯಂತಹ ನಗರಗಳು ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದರೂ, ಇರಾನ್‌ನ ಸತತ ದಾಳಿಯನ್ನು ತಡೆಯುವ ಸಾಮರ್ಥ್ಯ ಅವುಗಳಿಗಿಲ್ಲ. ತೈಲ ಮಾರುಕಟ್ಟೆ ಈಗಾಗಲೇ ಕುಸಿದಿದ್ದು, ಜಾಗತಿಕ ಪೂರೈಕೆ ಜಾಲ ಸಂಕಷ್ಟದಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಪರವಾಗಿ ಯುಎಇ ಯುದ್ಧಕ್ಕೆ ಇಳಿದರೆ, ಕಳೆದ 50 ವರ್ಷಗಳಲ್ಲಿ ಅದು ಗಳಿಸಿದ ಆರ್ಥಿಕ ಯಶಸ್ಸು ಮಣ್ಣುಪಾಲಾಗುವ ಭೀತಿ ಎದುರಾಗಿದೆ.
ಒಟ್ಟಾರೆಯಾಗಿ, ಜೆಫ್ರಿ ಸ್ಯಾಚ್ಸ್ ಅವರ ಮಾತುಗಳು ಯುಎಇ ನಾಯಕತ್ವಕ್ಕೆ ದೊಡ್ಡ ಎಚ್ಚರಿಕೆಯಾಗಿದ್ದು, ಮಿಲಿಟರಿ ಶಕ್ತಿ ಪ್ರದರ್ಶನಕ್ಕಿಂತ ರಾಷ್ಟ್ರೀಯ ಭದ್ರತೆ ಮತ್ತು ತಟಸ್ಥ ನೀತಿಗೆ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net