ವಿಪಕ್ಷಗಳ ನೆಗೆಟಿವ್ ರಾಜಕಾರಣಕ್ಕೆ ಬಲಿಯಾಗಬೇಡಿ: ಪ್ರಧಾನಿ ಮೋದಿಯವರ ಇಂಧನ ಉಳಿತಾಯ ಕರೆಗೆ ಯುಪಿ ಸಿಎಂ ಯೋಗಿ ಸಾಥ್! Yogi Adityanath

ವಿಪಕ್ಷಗಳ ನೆಗೆಟಿವ್ ರಾಜಕಾರಣಕ್ಕೆ ಬಲಿಯಾಗಬೇಡಿ: ಪ್ರಧಾನಿ ಮೋದಿಯವರ ಇಂಧನ ಉಳಿತಾಯ ಕರೆಗೆ ಯುಪಿ ಸಿಎಂ ಯೋಗಿ ಸಾಥ್!
ವಿಪಕ್ಷಗಳ ನೆಗೆಟಿವ್ ರಾಜಕಾರಣಕ್ಕೆ ಬಲಿಯಾಗಬೇಡಿ: ಪ್ರಧಾನಿ ಮೋದಿಯವರ ಇಂಧನ ಉಳಿತಾಯ ಕರೆಗೆ ಯುಪಿ ಸಿಎಂ ಯೋಗಿ ಸಾಥ್!
Published on
ಲಖನೌ: ಜಾಗತಿಕವಾಗಿ ತಲೆದೂರಿರುವ ಆರ್ಥಿಕ ಸಂಕಷ್ಟ ಮತ್ತು ಇಂಧನ ಬಿಕ್ಕಟ್ಟಿನ ನಡುವೆ ದೇಶದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಬೆಂಬಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಜನತೆಗೆ ಕರೆ ನೀಡಿದ್ದಾರೆ. ವಿರೋಧ ಪಕ್ಷಗಳು ಹರಡುತ್ತಿರುವ ನಕಾರಾತ್ಮಕ ರಾಜಕಾರಣ ಮತ್ತು ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ 208 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಯೋಗಿ, ಇಂದಿನ ಜಾಗತಿಕ ಸ್ಥಿತಿಗತಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತು ಇಂಧನ ಬಿಕ್ಕಟ್ಟು

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಯೋಗಿ ವಿವರಿಸಿದ್ದಾರೆ. ತೈಲ ಪೂರೈಕೆಯ ಅಡಚಣೆಯಿಂದಾಗಿ ದೇಶವು ಪ್ರತಿದಿನ ಗಣನೀಯ ನಷ್ಟವನ್ನು ಅನುಭವಿಸುತ್ತಿದೆ. ಈ ನಷ್ಟದ ಹೊರೆ ಅಂತಿಮವಾಗಿ ನಾಗರಿಕರ ಮೇಲೆ ಬೀಳುತ್ತದೆ. ಆದ್ದರಿಂದ ಸಂಕಷ್ಟದ ಸಮಯದಲ್ಲಿ ಸರ್ಕಾರದೊಂದಿಗೆ ನಿಲ್ಲುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ವಿಶ್ವದ ಅನೇಕ ದೇಶಗಳಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ, ಆದರೆ ಭಾರತದಲ್ಲಿ ಅವುಗಳನ್ನು ಸಾಪೇಕ್ಷವಾಗಿ ನಿಯಂತ್ರಣದಲ್ಲಿಡಲಾಗಿದೆ. ಈ ಸಾಧನೆಯನ್ನು ಮರೆಮಾಚಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಯುಪಿ ಸಿಎಂ ದೂರಿದ್ದಾರೆ.

ಮೋದಿ ಕರೆಗೆ ಓಗೊಡಿ: ಯೋಗಿ ಮನವಿ

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಯಲ್ಲಿ ಮಾಡಿಕೊಂಡಿದ್ದ ಮನವಿಯನ್ನು ಯೋಗಿ ಪುನರುಚ್ಚರಿಸಿದರು.
ಇಂಧನ ಬಳಕೆ ಇಳಿಸಿ: ಅನಗತ್ಯವಾಗಿ ಇಂಧನ ಬಳಸುವುದನ್ನು ಕಡಿಮೆ ಮಾಡಿ.
ಸಾರ್ವಜನಿಕ ಸಾರಿಗೆ ಬಳಸಿ: ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ.
ಎಲೆಕ್ಟ್ರಿಕ್ ವಾಹನಗಳ ಬಳಕೆ: ಪರಿಸರ ಸ್ನೇಹಿ ಮತ್ತು ಆರ್ಥಿಕವಾದ ಇ-ಮೊಬಿಲಿಟಿಯನ್ನು ಅಳವಡಿಸಿಕೊಳ್ಳಿ.
ಅನಗತ್ಯ ವೆಚ್ಚಗಳಿಗೆ ಬ್ರೇಕ್: ವಿದೇಶಿ ಪ್ರವಾಸ ಮತ್ತು ಚಿನ್ನದ ಖರೀದಿಗಳಂತಹ ಅನಗತ್ಯ ವೆಚ್ಚಗಳನ್ನು ಸದ್ಯಕ್ಕೆ ಮುಂದೂಡಿ.

ರೈತರು ಮತ್ತು ವರ್ತಕರಿಗೆ ವಿಶೇಷ ಸೂಚನೆ

ಕೃಷಿ ಕ್ಷೇತ್ರದ ಬಗ್ಗೆ ಮಾತನಾಡಿದ ಸಿಎಂ ಯೋಗಿ, ರೈತರಿಗೆ ಸಕಾಲದಲ್ಲಿ ಮತ್ತು ಪರ್ಯಾಪ್ತ ಪ್ರಮಾಣದಲ್ಲಿ ಗೊಬ್ಬರ ಪೂರೈಕೆಯಾಗಬೇಕು. ಸ್ಥಳೀಯ ವಿತರಣಾ ವ್ಯವಸ್ಥೆಯು ನ್ಯಾಯಯುತವಾಗಿ ಮತ್ತು ದಕ್ಷವಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಂತೆಯೇ, ಚಿನ್ನದ ಆಮದು ಹೆಚ್ಚಿಸುವುದರಿಂದ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ, ಆಮದಿನ ಮೇಲೆ ಅವಲಂಬಿತವಾಗುವ ಬದಲು ಮನೆಗಳಲ್ಲಿ ಲಭ್ಯವಿರುವ ಚಿನ್ನವನ್ನು ಮರುಬಳಕೆ ಮಾಡುವತ್ತ ಗಮನಹರಿಸುವಂತೆ ಜ್ಯುವೆಲ್ಲರ್ಸ್ ಮತ್ತು ಬುಲಿಯನ್ ಡೀಲರ್‌ಗಳಿಗೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net