500 ರೂ. ಬೆಲೆಯ ಪಾತ್ರೆ ಕೇವಲ 100 ರೂ.ಗೆ ಮಾರಾಟ: ಕಡಿಮೆ ಅಂತ ಖರೀದಿಸಿದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..! Aluminum Utensils

500 ರೂ. ಬೆಲೆಯ ಪಾತ್ರೆ ಕೇವಲ 100 ರೂ.ಗೆ ಮಾರಾಟ: ಕಡಿಮೆ ಅಂತ ಖರೀದಿಸಿದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..! Aluminum Utensils
500 ರೂ. ಬೆಲೆಯ ಪಾತ್ರೆ ಕೇವಲ 100 ರೂ.ಗೆ ಮಾರಾಟ: ಕಡಿಮೆ ಅಂತ ಖರೀದಿಸಿದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..! Aluminum Utensils
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ವಯನಾಡಿನಲ್ಲಿ ಪತ್ತೆಯಾಯಿತು ನಕಲಿ ಪಾತ್ರೆಗಳ ಮಾರಾಟ ಜಾಲ
  • ಕೇವಲ ನೂರು ರೂಪಾಯಿಗೆ ಕಳಪೆ ಅಲ್ಯೂಮಿನಿಯಂ ಪಾತ್ರೆ ಮಾರುತ್ತಿದ್ದ ಖದೀಮರು
  • ಮನೆಮನೆಗೆ ತೆರಳಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್
  • ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಕಳಪೆ ಗುಣಮಟ್ಟದ ವಸ್ತುಗಳು
ತಿರುವನಂತಪುರಂ: ಉತ್ತರ ಪ್ರದೇಶ ಮೂಲದ ವ್ಯಕ್ತಿಗಳು ನಕಲಿ ಹಾಗೂ ಕಳಪೆ ಗುಣಮಟ್ಟದ ಅಲ್ಯೂಮಿನಿಯಂ ಪಾತ್ರೆಗಳನ್ನು ( Aluminum Utensils ) ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಜಾಲವೊಂದು ಪತ್ತೆಯಾಗಿದೆ. ಕೇರಳದ ವಯನಾಡು ಜಿಲ್ಲೆಯ ಮುಟ್ಟಿಲ್​ ಪಂಚಾಯತ್ ವ್ಯಾಪ್ತಿಯ ವರಿಯಡ್ ಪ್ರದೇಶದಲ್ಲಿ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸಾಮಾನ್ಯ ಮಾರುಕಟ್ಟೆಯಲ್ಲಿ 400 ರಿಂದ 500 ರೂ. ಬೆಲೆಬಾಳುವ ಗುಣಮಟ್ಟದ ಪಾತ್ರೆಗಳನ್ನು ಇವರು ಕೇವಲ 100 ರೂಪಾಯಿಗೆ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದರು. ಈ ನಕಲಿ ಪಾತ್ರೆಗಳ ಅಲ್ಯೂಮಿನಿಯಂ ಲೇಪನವು ಕೈಯಿಂದ ಉಜ್ಜಿದರೂ ಕರಗಿ ಕೈಗೆ ಅಂಟಿಕೊಳ್ಳುವಷ್ಟು ಕಳಪೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಪಾತ್ರೆಗಳಲ್ಲಿ ನೀರನ್ನು ಕಾಯಿಸಿ ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ದೇಹದೊಳಗೆ ಸೇರಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ನೀಡಿದೆ.
ಮುಟ್ಟಿಲ್​ ಪಂಚಾಯತ್‌ನ ವರಿಯಡ್ ಪ್ರದೇಶದಲ್ಲಿ 10 ರಿಂದ 20 ಉತ್ತರ ಪ್ರದೇಶದ ಜನರು ಒಂದು ಗೋದಾಮನ್ನು ಬಾಡಿಗೆಗೆ ಪಡೆದು ಈ ದಂಧೆ ನಡೆಸುತ್ತಿದ್ದರು. ಹರಿಯಾಣ ನೋಂದಣಿ ಸಂಖ್ಯೆಯ ಬೈಕ್‌ಗಳಲ್ಲಿ ಈ ನಕಲಿ ಪಾತ್ರೆಗಳನ್ನು ತುಂಬಿಕೊಂಡು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿ ಮನೆಮನೆಗೆ ತಿರುಗಿ ಮಾರಾಟ ಮಾಡುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಆ ಗೋದಾಮನ್ನು ಸೀಜ್ ಮಾಡಿದ್ದಾರೆ.
ಈ ವಂಚಕರ ಗ್ಯಾಂಗ್ ಯಾರಿಗೆಲ್ಲ ಪಾತ್ರೆಗಳನ್ನು ಮಾರಾಟ ಮಾಡಿದೆ ಎಂಬುದರ ಕುರಿತು ಪಂಚಾಯತ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಸಾರ್ವಜನಿಕರಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೇನೆಂಗಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದೂರು ಬಂದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಆ ಪ್ರದೇಶದಲ್ಲಿ ಈ ರೀತಿಯ ಪಾತ್ರೆಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸರು ಉತ್ತರ ಪ್ರದೇಶದ ಆ ಗ್ಯಾಂಗ್ ಅನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರೂ, ಯಾರೂ ದೂರು ನೀಡದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೇನೆಂಗಾಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಗ್ಗದ ಬೆಲೆಗೆ ಸಿಗುತ್ತದೆ ಎಂದು ಕಳಪೆ ವಸ್ತುಗಳನ್ನು ಖರೀದಿಸುವ ಮುನ್ನ ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net