ಮನೆಗೆ ಬೀಗ ಹಾಕಿ ಶೂ ಅಥವಾ ಬೇರೆ ಎಲ್ಲಾದ್ರೂ ಕೀ ಇಡ್ತೀರಾ? ಹಾಗಾದ್ರೆ ಈ ಘಟನೆ ನಿಮಗೆ​ ಎಚ್ಚರಿಕೆ ಗಂಟೆ! Keys

ಮನೆಗೆ ಬೀಗ ಹಾಕಿ ಶೂ ಅಥವಾ ಬೇರೆ ಎಲ್ಲಾದ್ರೂ ಕೀ ಇಡ್ತೀರಾ? ಹಾಗಾದ್ರೆ ಈ ಘಟನೆ ನಿಮಗೆ​ ಎಚ್ಚರಿಕೆ ಗಂಟೆ! Keys
ಮನೆಗೆ ಬೀಗ ಹಾಕಿ ಶೂ ಅಥವಾ ಬೇರೆ ಎಲ್ಲಾದ್ರೂ ಕೀ ಇಡ್ತೀರಾ? ಹಾಗಾದ್ರೆ ಈ ಘಟನೆ ನಿಮಗೆ​ ಎಚ್ಚರಿಕೆ ಗಂಟೆ! Keys
Published on

ಪ್ರಮುಖ ಮುಖ್ಯಾಂಶಗಳು

  • ನಮ್ಮ ಭಾರತೀಯರಲ್ಲಿ ಬಹುತೇಕ ಮಂದಿಗೆ ಒಂದು ಸಾಮಾನ್ಯ ಅಭ್ಯಾಸವಿದೆ
  • ಮನೆ ಬಾಗಿಲಿಗೆ ಬೀಗ ಹಾಕಿ ಕೀ ಅನ್ನು ಶೂ ಅಥವಾ ಎಲ್ಲಾದರೂ ಇಟ್ಟು ಹೋಗುತ್ತಾರೆ
  • ಮನೆಯ ಇತರೆ ಸದಸ್ಯರು ಬಂದಾಗ ಅವರಿಗೆ ಸಹಾಯವಾಗಲಿ ಅಂತಾ ಕೀ ಅನ್ನು ಬಚ್ಚಿಡುತ್ತಾರೆ
  • ಇದರಿಂದ ಏನಾಗಬಹುದು ಅನ್ನೋದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ಎಚ್ಚರಿಕೆ ಗಂಟೆ
ಪಾಲಕ್ಕಾಡ್: ನಮ್ಮ ಭಾರತೀಯರಲ್ಲಿ ಬಹುತೇಕ ಮಂದಿ ಮನೆ ಬಾಗಿಲಿಗೆ ಬೀಗ ಹಾಕಿ, ಕೀ ( Keys ) ಅನ್ನು ಶೂ ಒಳಗಡೆ, ಹೂವಿನ ಕುಂಡದ ಒಳಗೆ ಅಥವಾ ಮನೆಯ ಹೊರಗೆ ಯಾವುದೋ ಒಂದು ಸ್ಥಳದಲ್ಲಿ ಇಟ್ಟು ಹೋಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಮನೆಯ ಇತರೆ ಸದಸ್ಯರು ಬಂದಾಗ ಅವರಿಗೆ ಸಹಾಯವಾಗಲಿ ಅಂತಾ ಕೀ ಅನ್ನು ಬಚ್ಚಿಡುತ್ತಾರೆ. ಆದರೆ, ಈ ರೀತಿ ಬಚ್ಚಿಡುವುದನ್ನು ಯಾರಾದರೂ ನೋಡಿಕೊಂಡರೆ ಏನಾಗಬಹುದು ಅನ್ನೋದಕ್ಕೆ ಕೇರಳದ ಪಾಲಕ್ಕಾಡ್​ನಲ್ಲಿ ನಡೆದ ಈ ಘಟನೆ ಎಚ್ಚರಿಕೆ ಗಂಟೆಯಾಗಿದೆ.
ಪಾಲಕ್ಕಾಡ್‌ನ ತರೂರ್‌ನ ಪಣತ್‌ನಲ್ಲಿರುವ ಪಿ.ಕೆ. ಜಾಯ್ ಅವರ ಮನೆಯಿಂದ ನಿನ್ನೆ (ಮಾರ್ಚ್​ 31) ಮಧ್ಯಾಹ್ನ 90,000 ರೂ. ನಗದು ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ.
ಕೋಣೆಯ ಒಳಗಿನ ಗೋಡೆಯ ಪಕ್ಕದ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನ ಮತ್ತು ಹಣ ನಾಪತ್ತೆಯಾಗಿದೆ. ಕಳ್ಳತನ ನಡೆದ ಸಮಯದಲ್ಲಿ, ಜಾಯ್ ಅವರ ಪತ್ನಿ ಚೇಳಕ್ಕರದಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಹೋಗಿದ್ದರು. ಹೋಗುವಾಗ ಮನೆಗೆ ಬೀಗ ಹಾಕಿ, ಕೀಲಿಯನ್ನು ಮನೆಯ ಮುಂದಿದ್ದ ಶೂಗಳ ಒಳಗೆ ಹಾಕಿ ಹೋಗಿದ್ದರು.
ಚರ್ಚ್​ನಲ್ಲಿ ಪಾರ್ಥನೆ ಮುಗಿಸಿ, ವಾಪಸ್​ ಮನೆಗೆ ಬಂದು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿತು. ಆದರೆ, ಕೀಲಿ ಮಾತ್ರ ಇನ್ನೂ ಶೂ ಒಳಗೆ ಇತ್ತು. ಇದರಿಂದ ಆಘಾತಗೊಂಡ ಜಾಯ್​ ಅವರ ಪತ್ನಿ, ಕೂಡಲೇ ಮನೆಯ ಒಳಗಡೆ ಹೋಗಿ, ಕಪಾಟನ್ನು ಪರಿಶೀಲಿಸಿದಾಗ, ಹಣ ಮತ್ತು ಚಿನ್ನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕಳ್ಳತನ ಮಾಡಿದ ನಂತರ ಖದೀಮ್​ ಕೀಲಿಯನ್ನು ಮೊದಲಿದ್ದ ಜಾಗದಲ್ಲೇ ಇಟ್ಟು ಪರಾರಿಯಾಗಿದ್ದಾನೆ.
ಜಾಯ್ ಅವರ ಪತ್ನಿ ಪ್ರತಿ ಮಂಗಳವಾರ ಚೇಳಕ್ಕರದಲ್ಲಿರುವ ಚರ್ಚ್‌ಗೆ ಹೋಗುತ್ತಾರೆ. ಮನೆ ಬಿಟ್ಟು ಎಲ್ಲೇ ಹೋದರು ಬೀಗ ಹಾಕಿ, ಕೀ ಅನ್ನು ಶೂ ಒಳಗೆ ಇಟ್ಟು ಹೋಗುವ ಅಭ್ಯಾಸವಿದೆ. ಆದರೆ, ಈ ಅಭ್ಯಾಸವನ್ನು ಗಮನಿಸಿದ ಖದೀಮ ಸರಿಯಾದ ಸಮಯವನ್ನು ನೋಡಿ ಹಣ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾನೆ.
ಜಾಯ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಆಲತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಪರೀಕ್ಷೆ ನಡೆಸಿದ್ದಾರೆ. ಈ ಪ್ರಕರಣವನ್ನು ಪರಿಶೀಲಿಸಲು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಇಂದು ಆಗಮಿಸಲಿದ್ದು, ಖದೀಮನನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net