ದೋಸ್ತಿ ಬೆನ್ನಿಗೆ ಗುದ್ದಿದರಾ ರಾಹುಲ್? ಬಂಗಾಳದಲ್ಲಿ ಬಿಜೆಪಿ ಬಲಿಷ್ಠವಾಗಲು ಮಮತಾ ಅವರೇ ಕಾರಣವಾ? ದೀದಿ ವಿರುದ್ಧ ವಿಪಕ್ಷ ನಾಯಕನ ಕೆಂಗಣ್ಣು! Rahul Gandhi

ದೋಸ್ತಿ ಬೆನ್ನಿಗೆ ಗುದ್ದಿದರಾ ರಾಹುಲ್? ಬಂಗಾಳದಲ್ಲಿ ಬಿಜೆಪಿ ಬಲಿಷ್ಠವಾಗಲು ಮಮತಾ ಅವರೇ ಕಾರಣವಾ? ದೀದಿ ವಿರುದ್ಧ ವಿಪಕ್ಷ ನಾಯಕನ ಕೆಂಗಣ್ಣು!
ದೋಸ್ತಿ ಬೆನ್ನಿಗೆ ಗುದ್ದಿದರಾ ರಾಹುಲ್? ಬಂಗಾಳದಲ್ಲಿ ಬಿಜೆಪಿ ಬಲಿಷ್ಠವಾಗಲು ಮಮತಾ ಅವರೇ ಕಾರಣವಾ? ದೀದಿ ವಿರುದ್ಧ ವಿಪಕ್ಷ ನಾಯಕನ ಕೆಂಗಣ್ಣು!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ನಡುವೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಳೆವಣಿಗೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಧ್ರುವೀಕರಣದ ರಾಜಕಾರಣವೇ ಮೂಲ ಕಾರಣ ಎಂದು ವಿಪಕ್ಷ ನಾಯಕ​ ಗಂಭೀರವಾಗಿ ಆರೋಪಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾಲುದಾರರಾಗಿರುವ ಟಿಎಂಸಿ ವಿರುದ್ಧ ರಾಹುಲ್ ಗಾಂಧಿರ ಈ ವಾಗ್ದಾಳಿ, ಮೈತ್ರಿಕೂಟದ ಒಳಗಿನ ಒಳಜಗಳವನ್ನು ಬಹಿರಂಗಪಡಿಸಿದೆ.

ಮಮತಾ ಸರ್ಕಾರದ ವೈಫಲ್ಯಗಳೇ ಬಿಜೆಪಿಗೆ ಅಡಿಪಾಯ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಒಂದು ವೇಳೆ ಮಮತಾ ಬ್ಯಾನರ್ಜಿ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರೆ ಹಾಗೂ ಬಂಗಾಳದ ಸಮಾಜವನ್ನು ಧ್ರುವೀಕರಣ ಮಾಡದಿದ್ದರೆ, ಬಿಜೆಪಿಗೆ ಇಲ್ಲಿ ಕಾಲಿಡಲು ಜಾಗವಿರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಬಂಗಾಳದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ಎಡರಂಗದ ಭದ್ರಕೋಟೆಯಾಗಿದ್ದ ನೆಲದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಬೆಳೆದಿರುವುದಕ್ಕೆ ಟಿಎಂಸಿಯ ವೋಟ್ ಬ್ಯಾಂಕ್ ರಾಜಕಾರಣವೇ ಹೊಣೆ ಎಂದು ವಿಪಕ್ಷ ನಾಯಕ ವಿಶ್ಲೇಷಿಸಿದ್ದಾರೆ.
ಮುಂದುವರೆದು ಮಾತನಾಡಿದ ರಾಹುಲ್​, ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಆರೋಪಗಳು ಬಿಜೆಪಿಗೆ ಲಾಭ ಮಾಡಿಕೊಟ್ಟಿವೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಸರ್ಕಾರ ವಿಫಲವಾದಾಗ, ಆ ಶೂನ್ಯವನ್ನು ಬಿಜೆಪಿ ತುಂಬಲು ಪ್ರಯತ್ನಿಸುತ್ತಿದೆ ಎಂಬುದು ಕಾಂಗ್ರೆಸ್​ ನಾಯಕನ ವಾದವಾಗಿದೆ.

ಇದು ಕೇವಲ ಚುನಾವಣೆ ಅಲ್ಲ, ಸೈದ್ಧಾಂತಿಕ ಹೋರಾಟ

ಈ ಬಾರಿಯ ಚುನಾವಣೆಯನ್ನು ರಾಹುಲ್ ಗಾಂಧಿ ಕೇವಲ ಅಧಿಕಾರಕ್ಕಾಗಿ ನಡೆಯುವ ಸ್ಪರ್ಧೆ ಎನ್ನದೆ, ಇದೊಂದು ಸೈದ್ಧಾಂತಿಕ ಯುದ್ಧ ಎಂದು ಬಣ್ಣಿಸಿದ್ದಾರೆ. ಒಂದೆಡೆ ದೇಶದ ಸಂವಿಧಾನ ಮತ್ತು ವೈವಿಧ್ಯತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಬಿಜೆಪಿ ಇದ್ದರೆ, ಇನ್ನೊಂದೆಡೆ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಹೋರಾಡುತ್ತಿರುವ ಕಾಂಗ್ರೆಸ್ ಇದೆ ಎಂದರು.
ಬಿಜೆಪಿಯ ಒಂದೇ ರಾಷ್ಟ್ರ, ಒಂದೇ ಭಾಷೆ, ಒಂದೇ ಧರ್ಮ ಎಂಬ ಸಿದ್ಧಾಂತವು ಭಾರತದ ಬಹುತ್ವಕ್ಕೆ ಮಾರಕವಾಗಿದೆ. ಬಂಗಾಳದ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ರಕ್ಷಿಸುವ ಏಕೈಕ ಶಕ್ತಿ ಕಾಂಗ್ರೆಸ್ ಎಂದು ರಾಹುಲ್​ ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರೀತಿಯ ಮೂಲಕ ದ್ವೇಷವನ್ನು ಸೋಲಿಸುವುದೇ ಕಾಂಗ್ರೆಸ್‌ನ ಅಂತಿಮ ಗುರಿ ಎಂದು ಪುನರುಚ್ಚರಿಸಿದ್ದಾರೆ.

ಏಕಕಾಲದಲ್ಲಿ ಬಿಜೆಪಿ ಮತ್ತು ಟಿಎಂಸಿ ಗುರಿ

ರಾಹುಲ್ ಗಾಂಧಿಯ ಭಾಷಣದ ಗಮನಾರ್ಹ ಅಂಶವೆಂದರೆ ಅವರು ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ಸಮಾನವಾಗಿ ಟೀಕಿಸಿದ್ದು.
ಬಿಜೆಪಿ ವಿರುದ್ಧ: ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯ ಆರೋಪವಾಗಿದೆ.
ಟಿಎಂಸಿ ವಿರುದ್ಧ: ರಾಜಕೀಯ ಅಸ್ಥಿರತೆ ಮತ್ತು ಧಾರ್ಮಿಕ ಧ್ರುವೀಕರಣದ ಮೂಲಕ ಬಿಜೆಪಿಗೆ ದಾರಿ ಮಾಡಿಕೊಟ್ಟ ಆರೋಪವಾಗಿದೆ.
ಈ ಇಬ್ಬರು ಪ್ರತಿಸ್ಪರ್ಧಿಗಳ ನಡುವೆ ಸಿಲುಕಿರುವ ಬಂಗಾಳದ ಜನತೆಗೆ ಕಾಂಗ್ರೆಸ್ ಒಂದು ಸಶಕ್ತ ಮತ್ತು ಸುರಕ್ಷಿತ ಪರ್ಯಾಯ ಎಂದು ರಾಹುಲ್ ಕರೆ ನೀಡಿದ್ದಾರೆ.

ಮೈತ್ರಿಕೂಟದಲ್ಲಿ ಬಿರುಕು..?

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ರಚನೆಯಾಗಿರುವ ಇಂಡಿಯಾ ಮೈತ್ರಿಕೂಟದಲ್ಲಿ ಮಮತಾ ಮತ್ತು ಕಾಂಗ್ರೆಸ್ ಪರಸ್ಪರ ಕೈಜೋಡಿಸಿವೆ. ಆದರೆ, ಬಂಗಾಳದ ಸ್ಥಳೀಯ ಮಟ್ಟದಲ್ಲಿ ಈ ಎರಡೂ ಪಕ್ಷಗಳ ನಡುವೆ ನಡೆಯುತ್ತಿರುವ ಕೆಸರೆರಚಾಟವು ಮತದಾರರಲ್ಲಿ ಗೊಂದಲ ಮೂಡಿಸಿದೆ. ರಾಹುಲ್ ಅವರ ಈ ಹೇಳಿಕೆಯು ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ, ಇದು ಮುಂದಿನ ಹಂತದ ಚುನಾವಣೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮತದಾರರಿಗೆ ಕರೆ

ಏಪ್ರಿಲ್ 29ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೂ ಮುನ್ನ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಂಗಾಳದ ಸುಭದ್ರ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ. ದ್ವೇಷದ ರಾಜಕಾರಣವನ್ನು ದೂರವಿಟ್ಟು, ಅಭಿವೃದ್ಧಿ ಮತ್ತು ಏಕತೆಯ ರಾಜಕಾರಣಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು,(ಏಜೆನ್ಸೀಸ್).
ಪಶ್ಚಿಮ ಬಂಗಾಳದ ಚುನಾವಣಾ ಕಣವು ಈಗ ತ್ರಿಕೋನ ಸ್ಪರ್ಧೆಯಿಂದ ಕೂಡಿದ್ದು, ರಾಹುಲ್ ಗಾಂಧಿ ಅವರ ಈ ಕಿಡಿ ಹೊತ್ತಿಸುವ ಹೇಳಿಕೆಗಳು ಮತದಾನದ ಪ್ರಮಾಣ ಮತ್ತು ಜನರ ನಿರ್ಧಾರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ನಿರೀಕ್ಷೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net