ರಾಜೀನಾಮೆ ನೀಡಿದ್ದು ಬಿಜೆಪಿಯ ಧರ್ಮೇಂದ್ರ ಪ್ರಧಾನ್, ಆದ್ರೆ ಪಂಜಾಬ್ ಆಪ್​ ಸಚಿವರಿಗೆ ಸಂಕಷ್ಟ; ಇಲ್ಲಿದೆ ಅಸಲಿ ಕಾರಣ! | Punjab Ministers

Punjab Ministers
Punjab Ministers
Published on
ಚಂಡೀಗಢ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಪಂಜಾಬ್‌ನಲ್ಲಿ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ನಡೆದಿವೆ ಎನ್ನಲಾದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಪಕ್ಷಗಳು ಪಂಜಾಬ್‌ನ ಶಿಕ್ಷಣ ಸಚಿವ (Punjab Ministers) ಹರ್ಜೋತ್ ಸಿಂಗ್ ಬೈನ್ಸ್ ಹಾಗೂ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿವೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯು ಪಂಜಾಬ್‌ನಲ್ಲೂ ಹೊಣೆಗಾರಿಕೆಯನ್ನು ನಿಗದಿಪಡಿಸುವ ಒತ್ತಡವನ್ನು ಹೆಚ್ಚಿಸಿದೆ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ವಾದಿಸಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜ್ಯದ ಹಲವಾರು ನೇಮಕಾತಿ ಪರೀಕ್ಷೆಗಳು ಹಾಗೂ ಮಂಡಳಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ವಿಪಕ್ಷಗಳು ಆರೋಪಿಸಿದ್ದು, ಆದಾಗ್ಯೂ, ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಕರಣವನ್ನೂ ತನಿಖೆಗೊಳಪಡಿಸಿ, ತಪ್ಪು ಎಸಗಿರುವುದು ಸಾಬೀತಾದ ಕಡೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ (AAP) ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ, ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳು ನೀಡುತ್ತಿರುವ ಹೊಸ ಬೇಡಿಕೆಗೆ ಆಪ್​ ನಿರ್ದಿಷ್ಟವಾಗಿ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ಅದೇ ಸೂತ್ರ ಪಂಜಾಬ್‌ನಲ್ಲೂ ಅನ್ವಯವಾಗಲಿ!...

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿದ್ದು, ಇದನ್ನು ವಿದ್ಯಾರ್ಥಿಗಳ ಸುದೀರ್ಘ ಕ್ರಾಂತಿಕಾರಿ ಹೋರಾಟಕ್ಕೆ ಸಿಕ್ಕ ಜಯ ಎಂದು ಕರೆದಿದ್ದಾರೆ. ಆಪ್​ ಸರ್ಕಾರದ ಅವಧಿಯಲ್ಲಿ ನೇಮಕಾತಿ ಪರೀಕ್ಷೆಗಳು ಮತ್ತು 12ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಸೇರಿದಂತೆ ಹಲವಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಕೂಡ ಇದರ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪೊಲೀಸರ ಲಾಠಿಚಾರ್ಜ್ ಹಾಗೂ ಕಠಿಣ ಕ್ರಮಗಳನ್ನು ಎದುರಿಸಬೇಕಾಯಿತು ಎಂದು ವಾರಿಂಗ್ ಆರೋಪಿಸಿದ್ದು, ಆಡಳಿತ ಪಕ್ಷವು ಹೊಣೆಗಾರಿಕೆ ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದರೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು ಎಂದು ಆಪ್​ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹಿಂದೆ ನೀಡಿದ್ದ ಹೇಳಿಕೆಯನ್ನು ನೆನಪಿಸಿದ ವಾರಿಂಗ್, ಅದೇ ಸೂತ್ರವನ್ನು ಈಗ ಪಂಜಾಬ್‌ನಲ್ಲೂ ಅನ್ವಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕರು ಹೇಳಿದ್ದೇನು..?

ಮತ್ತೊಂದೆಡೆ, ಪಂಜಾಬ್ ಸರ್ಕಾರದ ಮೇಲಿನ ದಾಳಿಯನ್ನು ಬಿಜೆಪಿ ಕೂಡ ತೀವ್ರಗೊಳಿಸಿದ್ದು, ನೀಟ್ ವಿವಾದಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಬೆಂಬಲಿಸಿದ್ದ ಆಪ್​ ನಾಯಕರು, ಪಂಜಾಬ್‌ನಲ್ಲಿ ನಡೆದಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ದೆಹಲಿ ಸರ್ಕಾರದ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪ್ರಶ್ನಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಂಜಾಬ್ ಸರ್ಕಾರವನ್ನು ಆಗ್ರಹಿಸಿರುವ ಅವರು, ಶಿಕ್ಷಣ ಸಚಿವ ಬೈನ್ಸ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
ಶಿರೋಮಣಿ ಅಕಾಲಿದಳ ಕೂಡ ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿದೆ. ಪಂಜಾಬ್ ಸರ್ಕಾರವು ಪರೀಕ್ಷಾ ವ್ಯವಸ್ಥೆಯ ಪವಿತ್ರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಆರೋಪಿಸಿದ್ದಾರೆ. ಆಪ್​ ಸರ್ಕಾರದ ಆಡಳಿತದಲ್ಲಿ ಸಸತವಾಗಿ ಪರೀಕ್ಷಾ ಹಗರಣಗಳು ನಡೆಯುತ್ತಿವೆ ಎಂದು ಕಿಡಿಕಾರಿರುವ ಅವರು, ಸಚಿವರಾದ ಬೈನ್ಸ್ ಮತ್ತು ಬಲ್ಬೀರ್ ಸಿಂಗ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಆದಾಗ್ಯೂ, ಪ್ರತಿಯೊಂದು ಪರೀಕ್ಷಾ ಅಕ್ರಮವನ್ನೂ ನೇರವಾಗಿ ಸಚಿವರ ಹೊಣೆಗಾರಿಕೆಗೆ ಜೋಡಿಸುವುದು ಸರಿಯಾದ ಕ್ರಮವಲ್ಲ ಎಂದು ಆಮ್​ ಆದ್ಮಿ ನಾಯಕರು ಈ ಹಿಂದೆ ವಾದಿಸಿದ್ದರು. ತಪ್ಪು ನಡೆದಿದೆ ಎಂಬ ಆಧಾರಗಳು ಸಿಕ್ಕಲ್ಲೆಲ್ಲಾ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಿದೆ ಎಂದು ಸಮರ್ಥಿಸಿಕೊಂಡಿದ್ದರು. ಜೊತೆಗೆ, ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ಬಲಪಡಿಸುವುದು ಹಾಗೂ ಪರೀಕ್ಷಾ ಭದ್ರತೆಯನ್ನು ಹೆಚ್ಚಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರವು ನೀಟ್ ವಿವಾದವನ್ನು ನಿರ್ವಹಿಸಿದ ರೀತಿಗೂ ಮತ್ತು ಪಂಜಾಬ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳಿಗೆ ಆಪ್​ ಸರ್ಕಾರ ನೀಡುತ್ತಿರುವ ಪ್ರತಿಕ್ರಿಯೆಗೂ ಹೋಲಿಕೆ ಮಾಡುತ್ತಿರುವ ಪ್ರತಿಪಕ್ಷಗಳು, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ತಾಲೀಮು ನಡೆಸುತ್ತಿರುವಾಗಲೇ ಈ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಸ್‌ಎಡಿ ಪಕ್ಷಗಳು ಭಗವಂತ್ ಮಾನ್ ನೇತೃತ್ವದ ಸರ್ಕಾರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದ್ದರೂ, ಬೈನ್ಸ್ ಮತ್ತು ಸಿಂಗ್ ರಾಜೀನಾಮೆ ಬೇಡಿಕೆಗೆ ಆಪ್​ ಇದುವರೆಗೆ ಯಾವುದೇ ವಿವರವಾದ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಮುಂಬರುವ ಚುನಾವಣೆಯವರೆಗೆ ಈ ವಿಷಯವು ರಾಜ್ಯ ರಾಜಕೀಯದಲ್ಲಿ ಪ್ರಮುಖ ಚರ್ಚಾ ವಸ್ತುವಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net