ಅರಾಘ್ಚಿಗೆ ಸಾವು ಬರಲಿ! ಅಮೆರಿಕ ಜತೆಗಿನ ಶಾಂತಿ ಒಪ್ಪಂದಕ್ಕೆ ಇರಾನ್‌ನಲ್ಲೇ ಭಾರಿ ವಿರೋಧ! ಸ್ವಂತ ವಿದೇಶಾಂಗ ಸಚಿವನ ವಿರುದ್ಧವೇ ಜನಾಕ್ರೋಶ! Protest against Araghchi in Iran

ಅರಾಘ್ಚಿಗೆ ಸಾವು ಬರಲಿ! ಅಮೆರಿಕ ಜತೆಗಿನ ಶಾಂತಿ ಒಪ್ಪಂದಕ್ಕೆ ಇರಾನ್‌ನಲ್ಲೇ ಭಾರಿ ವಿರೋಧ! ಸ್ವಂತ ವಿದೇಶಾಂಗ ಸಚಿವನ ವಿರುದ್ಧವೇ ಜನಾಕ್ರೋಶ!
ಅರಾಘ್ಚಿಗೆ ಸಾವು ಬರಲಿ! ಅಮೆರಿಕ ಜತೆಗಿನ ಶಾಂತಿ ಒಪ್ಪಂದಕ್ಕೆ ಇರಾನ್‌ನಲ್ಲೇ ಭಾರಿ ವಿರೋಧ! ಸ್ವಂತ ವಿದೇಶಾಂಗ ಸಚಿವನ ವಿರುದ್ಧವೇ ಜನಾಕ್ರೋಶ!
Published on
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿರುವ ಭೀಕರ ಸಂಘರ್ಷಕ್ಕೆ ಪೂರ್ಣವಿರಾಮ ಇಡಲು ಇರಾನ್ ಮತ್ತು ಅಮೆರಿಕ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗುತ್ತಿವೆ. ಆದರೆ, ಈ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯ ಬೆನ್ನಲ್ಲೇ ಇರಾನ್ ದೇಶದೊಳಗೆ ಭಾರಿ ಆಂತರಿಕ ದಂಗೆ ಭುಗಿಲೆದ್ದಿದೆ. ಅಮೆರಿಕ ಎದುರು ಇರಾನ್ ಮಣಿದಿದೆ ಎಂದು ಆಕ್ರೋಶಗೊಂಡಿರುವ ನೂರಾರು ಪ್ರತಿಭಟನಾಕಾರರು ತಮ್ಮದೇ ದೇಶದ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ(Protest against Araghchi in Iran) ವಿರುದ್ಧ ಬೀದಿಗಿಳಿದು ಭೀಕರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಇರಾನ್‌ನ ಪ್ರಮುಖ ನಗರವಾದ ಮಶ್ಹಾದ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಾದೇಶಿಕ ಕಚೇರಿಯ ಮುಂಭಾಗ ಜಮಾಯಿಸಿದ ನೂರಾರು ನಾಗರಿಕರು ಮತ್ತು ತೀವ್ರಗಾಮಿಗಳು, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿರುದ್ಧ ಅರಾಘ್ಚಿಗೆ ಸಾವು ಬರಲಿ ಎಂದು ಗಂಟಲು ಹರಿದುಕೊಳ್ಳುತ್ತಾ ಘೋಷಣೆಗಳನ್ನು ಕೂಗಿದ್ದಾರೆ. ಇರಾನ್‌ನ ಹಿತಾಸಕ್ತಿಗಳನ್ನು ಅಮೆರಿಕಕ್ಕೆ ಅಡವಿಟ್ಟಿರುವ ಅರಾಘ್ಚಿ ಒಬ್ಬ ಗೌರವವಿಲ್ಲದ ಸಂಧಾನಕಾರ ಮತ್ತು ದೇಶದ್ರೋಹಿ ನುಸುಳುಕೋರ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಇರಾನ್ ಅಮೆರಿಕಕ್ಕೆ ಶರಣಾಯಿತೇ? ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವೇನು?

ಅಮೆರಿಕ ಜೊತೆ ತೆರೆಮರೆಯಲ್ಲಿ ಸತತ ಮಾತುಕತೆ ನಡೆಸಿರುವ ಇರಾನ್‌ನ ಸಂಧಾನಕಾರರ ತಂಡವು ಅಮೆರಿಕದ ಒತ್ತಡಕ್ಕೆ ತಲೆಬಾಗಿ ಅತಿಯಾದ ರಿಯಾಯಿತಿಗಳನ್ನು ಹಾಗೂ ಶರಣಾಗತಿಯ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂಬುದು ಇರಾನ್ ಜನತೆಯ ಪ್ರಮುಖ ಆಪಾದನೆಯಾಗಿದೆ. ಸದ್ಯ ಸಿದ್ಧವಾಗುತ್ತಿರುವ ಶಾಂತಿ ಒಪ್ಪಂದದ ಕರಡು ಪ್ರತಿಗಳು ಇರಾನ್‌ನ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಕೇವಲ ಹೆಸರಿಗೊಂದು ಶಾಂತಿ ಒಪ್ಪಂದ ಮಾಡಿಕೊಳ್ಳಲು ಇರಾನ್ ಸರ್ಕಾರ ಅಮೆರಿಕಕ್ಕೆ ಅತಿಯಾಗಿ ತಗ್ಗಿಬಗ್ಗ ನಡೆಯುತ್ತಿದೆ ಎಂದು ದೇಶದ ಜನತೆ ಕೆರಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶಗಳು ಒಪ್ಪಂದದ ತುತ್ತತುದಿಗೆ ತಲುಪಿರುವ ಇಂತಹ ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ಕ್ಷಣದಲ್ಲೇ ಈ ಭೀಕರ ಪ್ರತಿಭಟನೆಗಳು ನಡೆದಿರುವುದು ಇರಾನ್ ಸರ್ಕಾರಕ್ಕೆ ಜಾಗತಿಕವಾಗಿ ಭಾರಿ ಮುಜುಗರ ತಂದಿಟ್ಟಿದೆ.

'ಹೊರ್ಮುಜ್ ಜಲಸಂಧಿ' ನಿಯಂತ್ರಣ ಬದಲಾಗಲಿದೆಯೇ?

ಈ ಎಲ್ಲಾ ಗದ್ದಲಗಳ ನಡುವೆ ಇರಾನ್‌ನ ಇಂಟೆಲಿಜೆನ್ಸ್ ಮತ್ತು ಸ್ಟ್ರ್ಯಾಟಜಿಕ್ ವಲಯದಲ್ಲೂ ಭಾರಿ ಗೊಂದಲಗಳು ಸೃಷ್ಟಿಯಾಗಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಇತ್ತೀಚೆಗೆ ಇರಾನ್ ಸರ್ಕಾರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ, ಅಮೆರಿಕದೊಂದಿಗೆ ಮಾಡಿಕೊಳ್ಳಲಿರುವ ಸಂಭಾವ್ಯ ಒಪ್ಪಂದವು ಜಾಗತಿಕವಾಗಿ ಅತ್ಯಂತ ಕಾರ್ಯತಂತ್ರದ ಸಮುದ್ರ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಭವಿಷ್ಯದ ಆಡಳಿತ ಶೈಲಿಯನ್ನು ಬದಲಾಯಿಸಬಹುದು ಎಂದು ಸುಳಿವು ನೀಡಿದ್ದಾರೆ.
ಇತ್ತೀಚಿನ ಯುದ್ಧದ ಸಮಯದಲ್ಲಿ ಇರಾನ್ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯು ಹೇರಿದ್ದ ಎಲ್ಲಾ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಮುಂಬರುವ ಒಪ್ಪಂದದ ಅಡಿಯಲ್ಲಿ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಅರಾಘ್ಚಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ಪ್ರಭಾವಿ ಪಾತ್ರವನ್ನು ಮುಂದುವರಿಸಲಿದ್ದು, ಇದು ಟೆಹ್ರಾನ್‌ನ ಪ್ರಮುಖ ಶಕ್ತಿಯಾಗಿಯೇ ಉಳಿಯಲಿದೆ ಎಂದು ಅವರು ಜನತೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.

ಒಪ್ಪಂದದ ದಿನಾಂಕದ ಬಗ್ಗೆ ಗೊಂದಲ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್!

ಇರಾನ್ ಮತ್ತು ಅಮೆರಿಕ ನಡುವಿನ ಈ ಶಾಂತಿ ಒಪ್ಪಂದದ ಸಸ್ಪೆನ್ಸ್ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದ ಮತ್ತಷ್ಟು ತೀವ್ರಗೊಂಡಿತ್ತು. ಉಭಯ ದೇಶಗಳ ನಡುವಿನ ಒಪ್ಪಂದವು ಅಂತಿಮ ಹಂತಕ್ಕೆ ಬಂದಿದ್ದು, ಭಾನುವಾರವೇ ಅದಕ್ಕೆ ಅಧಿಕೃತವಾಗಿ ಸಹಿ ಬೀಳಲಿದೆ ಎಂದು ಟ್ರಂಪ್ ಗುರುವಾರ ಪ್ರಕಟಿಸಿದ್ದರು.
ಆದರೆ, ಅಮೆರಿಕ ಅಧ್ಯಕ್ಷರ ಈ ಹೇಳಿಕೆಯನ್ನು ಇರಾನ್ ತಕ್ಷಣವೇ ತಳ್ಳಿಹಾಕಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೇಯ್ ಮಾತನಾಡಿ, ಶಾಂತಿ ಒಪ್ಪಂದದ ಪ್ರಕ್ರಿಯೆಯಲ್ಲಿ ಪ್ರಗತಿಯಾಗಿರುವುದು ನಿಜ, ಆದರೆ ನಮ್ಮ ಕಟ್ಟುನಿಟ್ಟಿನ ಷರತ್ತುಗಳನ್ನು ಅಮೆರಿಕ ಒಪ್ಪದಿದ್ದರೆ ಇರಾನ್ ಯಾವುದೇ ಕ್ಷಣದಲ್ಲೂ ಮಾತುಕತೆಯಿಂದ ಹಿಂದೆ ಸರಿಯಲಿದೆ. ಟ್ರಂಪ್ ಹೇಳಿದಂತೆ ಭಾನುವಾರವೇ ಸಹಿ ಪ್ರಕ್ರಿಯೆ ನಡೆಯುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಈ ಒಪ್ಪಂದ ಘಟಿಸುವುದನ್ನು ತಳ್ಳಿಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕಲು ಜಿನೆವಾದಲ್ಲಿ ಉಭಯ ದೇಶಗಳ ಮುಖಂಡರು ನೇರವಾಗಿ ಭೇಟಿಯಾಗಲಿದ್ದಾರೆಯೇ ಅಥವಾ ಡಿಜಿಟಲ್ ರೂಪದಲ್ಲಿ ವರ್ಚುವಲ್ ಆಗಿ ಸಹಿ ಹಾಕಲಾಗುತ್ತದೆಯೇ ಎಂಬುದು ಇನ್ನು ನಿಗೂಢವಾಗಿದೆ. ಆದರೆ, ಇರಾನ್ ಅಧ್ಯಕ್ಷರು ಸ್ವದೇಶಿ ಜನರ ತೀವ್ರ ವಿರೋಧದ ನಡುವೆಯೂ ಅಮೆರಿಕ ಜೊತೆ ಕೈಜೋಡಿಸುತ್ತಾರಾ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net