ದಾವಣಗೆರೆ ದಕ್ಷಿಣ-ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆ; ಸರ್ಕಾರಕ್ಕೆ ಅಗ್ನಿಪರೀಕ್ಷೆ, ಬಿಜೆಪಿಗೆ ಅಸ್ತಿತ್ವದ ಸವಾಲು! | Karnataka By-Election

Karnataka By-Election |  ಕೇಂದ್ರ ಚುನಾವಣಾ ಆಯೋಗ
Karnataka By-Election | ಕೇಂದ್ರ ಚುನಾವಣಾ ಆಯೋಗ
Published on
ಬೆಂಗಳೂರು: ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಪುದುಚೇರಿಯ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕಗಳನ್ನು ಘೋಷಣೆ ಮಾಡಿದ ಕೇಂದ್ರ ಚುನಾವಣಾ ಆಯೋಗ, ಅದೇ ಸಮಯದಲ್ಲಿ ಕರ್ನಾಟಕದ ಎರಡು ಕ್ಷೇತ್ರಗಳು (Karnataka By-Election) ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಸಹ ಪ್ರಕಟಿಸಿದೆ. 
ಗೋವಾ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಗೋವಾ, ಕರ್ನಾಟಕ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಎಲ್ಲಾ ಕಡೆಗಳಲ್ಲೂ ಮೇ 4 ರಂದು ಮತ ಎಣಿಕೆ ನಡೆಯಲಿದೆ ಎಂದರು.

ಬಾಗಲಕೋಟೆ ಕ್ಷೇತ್ರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಹೆಚ್. ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರು ಕಳೆದ ನವೆಂಬರ್ 4 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಸುಮಾರು 79 ವರ್ಷ ವಯಸ್ಸಿನ ಮೇಟಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದ ಕಾರಣದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರ

ದಾವಣಗೆರೆ ದಕ್ಷಿಣ ಕ್ಷೇತ್ರವು ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಕ್ಷೇತ್ರಗಳಲ್ಲೊಂದಾಗಿದ್ದು, ಇಲ್ಲಿನ ಹಾಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಕಳೆದ ಡಿಸೆಂಬರ್ 14 ರಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದೇಶದ ಹಿರಿಯ ಶಾಸಕರಾಗಿದ್ದ ಶಿವಶಂಕರಪ್ಪ ಅವರ ಅಗಲಿಕೆಯಿಂದ ತೆರವಾದ ಈ ಸ್ಥಾನಕ್ಕೆ ಈಗ ಉಪಚುನಾವಣೆ ಘೋಷಣೆಯಾಗಿದೆ.

ಪಂಚರಾಜ್ಯಗಳಿಗೆ ಚುನಾವಣೆ ಘೋಷಣೆ

ಭಾರತದ ರಾಜಕೀಯ ರಣರಂಗದಲ್ಲಿ ಮತ್ತೆ ಚುನಾವಣಾ ( Assembly Election 2026 ) ಸದ್ದು ಮೊಳಗುತ್ತಿದೆ. ದಕ್ಷಿಣದ ಸಾಂಸ್ಕೃತಿಕ ಕಣಜ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಿಂದ ಹಿಡಿದು, ಪೂರ್ವದ ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಅಸ್ಸಾಂವರೆಗೆ ಚುನಾವಣಾ ಕಹಳೆ ಮೊಳಗಿದೆ.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪಂಚ ರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು.
1. ಅಸ್ಸಾಂ: ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4
2. ತಮಿಳುನಾಡು: ಮತದಾನ ದಿನಾಂಕ - ಏಪ್ರಿಲ್ 23, ಎಣಿಕೆ ದಿನಾಂಕ - ಮೇ 4
3. ಪಶ್ಚಿಮ ಬಂಗಾಳ: ಮತದಾನ ದಿನಾಂಕ- ಏಪ್ರಿಲ್ 23 (1 ನೇ ಹಂತ), ಏಪ್ರಿಲ್ 29 (2 ನೇ ಹಂತ), ಎಣಿಕೆ ದಿನಾಂಕ - ಮೇ 4
4. ಕೇರಳ : ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4.
5. ಪುದುಚೇರಿ: ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4
ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಗಳು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಗೆ ಒರೆಗಲ್ಲಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ತನ್ನ ಜನಬೆಂಬಲ ಸಾಬೀತುಪಡಿಸುವ ಅನಿವಾರ್ಯತೆಯಿದ್ದರೆ, ಲೋಕಸಭಾ ಚುನಾವಣೆಯ ಗೆಲುವಿನ ಲಯವನ್ನು ಮುಂದುವರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಈ ಗೆಲುವು ಅತಿ ಮುಖ್ಯವಾಗಿದೆ. ಇದು 2028ರ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಜ್ಯದ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುವ ಹೈವೋಲ್ಟೇಜ್ ಕಣವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net