ಅಧಿಕಾರ ವಹಿಸಿಕೊಳ್ಳಲು ವಿ ಡಿ ಸತೀಶನ್ ಸಜ್ಜು; ರಮೇಶ್ ಚೆನ್ನಿತ್ತಲಗೆ ಗೃಹ ಖಾತೆ ಸಿಗುವ ಸಾಧ್ಯತೆ!..ಐದು ಸ್ಥಾನಗಳಿಗೆ ಮುಸ್ಲಿಂ ಲೀಗ್ ಪಟ್ಟು | Kerala Cabinet

Kerala Cabinet | ಅಧಿಕಾರ ವಹಿಸಿಕೊಳ್ಳಲು ವಿ ಡಿ ಸತೀಶನ್ ಸಜ್ಜು
Kerala Cabinet | ಅಧಿಕಾರ ವಹಿಸಿಕೊಳ್ಳಲು ವಿ ಡಿ ಸತೀಶನ್ ಸಜ್ಜು
Published on
ತಿರುವನಂತಪುರಂ: ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಶನಿವಾರ ಕೇರಳದ ನೂತನ ಸಚಿವ ಸಂಪುಟದ (Kerala Cabinet) ಸ್ವರೂಪವನ್ನು ಅಂತಿಮಗೊಳಿಸುವ ಸಾಧ್ಯತೆಯಿದ್ದು, ಸೋಮವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಚಿವ ಸ್ಥಾನಗಳ ಹಂಚಿಕೆ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಮೈತ್ರಿಕೂಟದ ಸಮತೋಲನದ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ವಿ. ಡಿ. ಸತೀಶನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿದ್ದಂತೆ, ಸಚಿವ ಸಂಪುಟದಲ್ಲಿ ಯಾವ ಹಿರಿಯ ನಾಯಕರು ಮತ್ತು ಯುವ ಮುಖಗಳಿಗೆ ಪ್ರಮುಖ ಸ್ಥಾನಗಳು ಸಿಗಲಿವೆ ಎಂಬ ಕುರಿತು ಭಾರಿ ಕುತೂಹಲ ಮೂಡಿದೆ. ತಿರುವನಂತಪುರಂನಲ್ಲಿ ಶುಕ್ರವಾರ ನಡೆದ ಸಮಾಲೋಚನೆಗಳು ಪ್ರಾಥಮಿಕ ಹಂತದಲ್ಲಿದ್ದವು ಎಂದು ಮೈತ್ರಿಕೂಟದ ನಾಯಕರು ತಿಳಿಸಿದ್ದು, ಶನಿವಾರ ನಿರ್ಣಾಯಕ ಸುತ್ತಿನ ಮಾತುಕತೆಗಳು ನಡೆಯಲಿವೆ ಎನ್ನಲಾಗಿದೆ.

ರಮೇಶ್ ಚೆನ್ನಿತ್ತಲಗೆ ಪ್ರಮುಖ ಜವಾಬ್ದಾರಿ..

ಈ ಸಚಿವ ಸಂಪುಟದಲ್ಲಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಲ್ಪಡುತ್ತಿರುವ ಹೆಸರು ಎಂದರೆ ರಮೇಶ್ ಚೆನ್ನಿತ್ತಲರದ್ದು. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಅವರು ಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದ ಚೆನ್ನಿತ್ತಲ ಆ ಅವಕಾಶವನ್ನು ಕಳೆದುಕೊಂಡ ಬಳಿಕ, ಪಕ್ಷದ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನದ ಭಾಗವಾಗಿ ಅವರಿಗೆ ಪ್ರಭಾವಿ ಗೃಹ ಖಾತೆಯನ್ನು ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸತೀಶನ್ ಬಣದ ಕೆಲವು ನಾಯಕರಲ್ಲಿ ಈ ಬಗ್ಗೆ ಸ್ವಲ್ಪ ಹಿಂಜರಿಕೆ ಇತ್ತಾದರೂ, ಚೆನ್ನಿತ್ತಲ ಅನುಭವ ಮತ್ತು ಪಕ್ಷದಲ್ಲಿ ಅವರಿಗಿರುವ ಸ್ಥಾನಮಾನವನ್ನು ಉಲ್ಲೇಖಿಸಿ ಹಿರಿಯ ನಾಯಕರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಚೆನ್ನಿತ್ತಲರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ಶುಕ್ರವಾರ ತೀವ್ರಗೊಂಡಿದ್ದು, ಸತೀಶನ್ ಸ್ವತಃ ಹಿರಿಯ ನಾಯಕನ ನಿವಾಸಕ್ಕೆ ಭೇಟಿ ನೀಡಿದ್ದರು ಮತ್ತು ದೀಪಾ ದಾಸ್ಮುನ್ಶಿ ಕೂಡ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಚಿಗುರು.. ಹಳೆ ಬೇರು

ಹೊಸ ಸಚಿವ ಸಂಪುಟವು ಹಿರಿಯ ನಾಯಕರು ಮತ್ತು ಯುವ ಮುಖಗಳ ಮಿಶ್ರಣವನ್ನು ಹೊಂದಿರುವ ನಿರೀಕ್ಷೆಯಿದೆ. ಪಕ್ಷವು ಅನುಭವದ ಜೊತೆಗೆ ತಲೆಮಾರಿನ ಬದಲಾವಣೆಯನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದು, ವಿ. ಟಿ. ಬಲರಾಮ್ ಮತ್ತು ಕೆ. ಜಯಂತ್​ರಂತಹ ನಾಯಕರ ಹೆಸರುಗಳು ಸಚಿವ ಸ್ಥಾನದ ರೇಸ್​ನಲ್ಲಿದೆ. ಇದರೊಂದಿಗೆ ಸ್ಪೀಕರ್ ಹುದ್ದೆಯ ಕುರಿತೂ ಚರ್ಚೆಗಳು ಮುಂದುವರಿದಿದ್ದು, ಶನಿವಾರದ ಸಭೆಯಲ್ಲಿ ಅದು ಅಂತಿಮಗೊಳ್ಳಬಹುದು. ಸತೀಶನ್ ಬಣವು ಡೆಪ್ಯುಟಿ ಸ್ಪೀಕರ್ ಹುದ್ದೆಗಾಗಿ ಬೇಡಿಕೆ ಸಲ್ಲಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಐದು ಸ್ಥಾನಗಳಿಗೆ ಬೇಡಿಕೆ ಇಟ್ಟ ಐಯುಎಂಎಲ್

ಮೈತ್ರಿಕೂಟದೊಳಗಿನ ಪ್ರಮುಖ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ತನ್ನ ಹಿಂದಿನ ಯುಡಿಎಫ್ ಸರ್ಕಾರದ ಪ್ರಾತಿನಿಧ್ಯಕ್ಕೆ ಸರಿಸಮನಾಗಿ ಐದು ಸಚಿವ ಸ್ಥಾನಗಳಿಗಾಗಿ ಒತ್ತಾಯಿಸಿದೆ ಎನ್ನಲಾಗಿದ್ದು, ಐಯುಎಂಎಲ್ ಹಿರಿಯ ನಾಯಕರಾದ ಪಿ. ಕೆ. ಕುಂಹಾಲಿಕುಟ್ಟಿ, ಪಿ. ಕೆ. ಬಶೀರ್ ಮತ್ತು ಎನ್. ಶಂಸುದ್ದೀನ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಖಾತೆಗಳ ಹಂಚಿಕೆ ಮತ್ತು ಸಚಿವ ಸಂಪುಟದ ರಚನೆಯನ್ನು ಶನಿವಾರದ ಚರ್ಚೆಯಲ್ಲೇ ಇತ್ಯರ್ಥಪಡಿಸಲಾಗುವುದು, ಆ ಮೂಲಕ ಸೋಮವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಾರಿ ಸುಗಮವಾಗಲಿದೆ ಎಂದು ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ದೃಢಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net