ನಾವು ಒಂದಾಗಿದ್ದೇವೆ, ಅಸ್ಸಾಂ ಗೆಲ್ಲುತ್ತೇವೆ.. 5 ಪ್ರಾದೇಶಿಕ ಪಕ್ಷಗಳೊಂದಿಗೆ ಕೈ ಜೋಡಿಸಿದ ಗೌರವ್​ ಗೊಗೊಯ್​ | Gaurav Gogoi

Gaurav Gogoi
Gaurav Gogoi
Published on
ದಿಸ್ಪೂರ್​: ಅಸ್ಸಾಂ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಬೃಹತ್ ಮೈತ್ರಿಕೂಟವನ್ನು ರಚಿಸಿದೆ. ಈ ಕುರಿತಾಗಿ ಮಾತನಾಡಿರುವ ಅಸ್ಸಾಂ ಕಾಂಗ್ರೆಸ್ ಘಟಕದ ಅಧ್ಯಕ್ಷ, ಸಂಸದ ಗೌರವ್ ಗೊಗೊಯ್(Gaurav Gogoi), ರಾಜ್ಯದ ಐದು ಪ್ರಾದೇಶಿಕ ಮತ್ತು ಎಡಪಕ್ಷಗಳೊಂದಿಗೆ ಕೈಜೋಡಿಸಿ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಜೋರ್ಹತ್ ಕ್ಷೇತ್ರದಿಂದ ಗೊಗೊಯ್, ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಲ್ಲಿ 100 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದು, ಉಳಿದ 26 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.
ಅಸ್ಸಾಂನಲ್ಲಿ ಆರು ವಿರೋಧ ಪಕ್ಷಗಳ ಮೈತ್ರಿ ಇದೆ - ಕಾಂಗ್ರೆಸ್, ಅಸ್ಸಾಂ ಜಾತಿಯ ಪರಿಷತ್, ರೈಜೋರ್ ದಳ, ಸಿಪಿಐ(ಎಂ), ಸಿಪಿಐ(ಎಂಎಲ್) ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್. ಅಸ್ಸಾಂ ಕಾಂಗ್ರೆಸ್ 100 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಮೂಲಕ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ತಡೆಯುವುದು ನಮ್ಮ ಉದ್ದೇಶವಾಗಿದ್ದು, ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವನ್ನು ನಾವು ತೆಗೆದುಹಾಕುತ್ತೇವೆ ಎಂದು ಗೊಗೊಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಕಾಂಗ್ರೆಸ್ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, 94 ಅಭ್ಯರ್ಥಿಗಳನ್ನು ಘೋಷಿಸಿದೆ. ನಜೀರಾ ಕ್ಷೇತ್ರದಿಂದ ಮೂರು ಬಾರಿ ಶಾಸಕ ದೇಬಬ್ರತ ಸೈಕಿಯಾ, ಬಿಸ್ವನಾಥ್‌ನಿಂದ ಜಯಂತ ಬೋರಾ, ಬರ್ಚಲ್ಲಾದಿಂದ ರಿಪುನ್ ಬೋರಾ ಮತ್ತು ದಿಸ್‌ಪುರದಿಂದ ಮೀರಾ ಬೋರ್ತಕುರ್ ಗೋಸ್ವಾಮಿ ಅವರನ್ನು ಕಣಕ್ಕಿಳಿಸಿದೆ.
ಮಜುಲಿ ಕ್ಷೇತ್ರದಿಂದ ಇಂದ್ರನೀಲ್ ಪೆಗು, ಮಂಡ್ಯದಿಂದ ಅಬ್ದುಲ್ ಖಲೀಕ್, ಡಿಮೋರಿಯಾದಿಂದ ರಾಕಿಬುದ್ದೀನ್ ಅಹ್ಮದ್, ಟಿಂಗ್‌ಖಾಂಗ್‌ನಿಂದ ಬಿಪುಲ್ ಗೊಗೊಯ್, ಜಲುಕ್‌ಬರಿಯಿಂದ ಬಿದಿಶಾ ನಿಯೋಗ್, ನೌಬೋಚಾದಿಂದ ಜಾಯ್ ಪ್ರಕಾಶ್ ದಾಸ್ ಮತ್ತು ಮಹ್ಮೋರಾದಿಂದ ಗ್ಯಾಂಡಿಪ್ ಮೋಹನ್ ಸ್ಪರ್ಧಿಸುತ್ತಿದ್ದಾರೆ.
ಗೌರವ್​ ಗೊಗೊಯ್ ತಂದೆ ತರುಣ್ ಗೊಗೊಯ್ ನಾಯಕತ್ವದಲ್ಲಿ ಕಾಂಗ್ರೆಸ್ ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಪ್ರಬಲ ಶಕ್ತಿಯಾಗಿತ್ತು. 2016 ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಸ್ಸಾಂನಲ್ಲಿ ಬಹುಮತ ಗಳಿಸುವ ಮೂಲಕ ಕೈನಿಂದ ಅಧಿಕಾರವನ್ನು ಕಿತ್ತುಕೊಂಡಿತು. ಆ ವೇಳೆ ಕಾಂಗ್ರೆಸ್ ಕೇವಲ 26 ಸ್ಥಾನಕ್ಕೆ ಕುಸಿದರೆ, 2021 ರ ಚುನಾವಣೆಯಲ್ಲಿ 29 ಕ್ಕೆ ತೃಪ್ತಿಪಟ್ಟುಕೊಂಡಿತು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 4 ರಂದು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶ ಚುನಾವಣೆಗಳ ಜೊತೆಗೆ ಮತ ಎಣಿಕೆ ನಡೆಯಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net