ಗಣರಾಜ್ಯೋತ್ಸವ ಪರೇಡ್​ನಲ್ಲಿ ರಾಹುಲ್ ಗಾಂಧಿಗೆ ಮೂರನೇ ಸಾಲಿನಲ್ಲಿ ಸೀಟು: ಅವಮಾನ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ದೆಹಲಿಯ ಕರ್ತವ್ಯ ಪಥದಲ್ಲಿ ಇಂದು(ಜ. 26) ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಶಿಷ್ಟಾಚಾರದ ವಿಷಯದಲ್ಲಿ ಮತ್ತೆ ವಿವಾದವಾಗಿದ್ದು, ಕಾಂಗ್ರೆಸ್​ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮೂರನೇ ಸಾಲಿನಲ್ಲಿ ಸೀಟು ಕಾಯ್ದಿರಿಸಿದ್ದಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ವಿಐಪಿ ವೀಕ್ಷಕರ ಮೂರನೇ ಸಾಲಿನಲ್ಲಿ ಕುಳಿತಿದ್ದರು. ನಿಯಮಗಳ ಪ್ರಕಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರಿಗೆ ಮುಂದಿನ ಸಾಲಿನಲ್ಲಿ ಆಸನ ನೀಡಬೇಕು. ಆದರೆ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮೊದಲ ಸಾಲಿನಲ್ಲಿ ಕುಳಿತಿದ್ದರೆ, ರಾಹುಲ್ ಗಾಂಧಿ ಅವರ ಹಿಂದೆ ಮೂರನೇ ಸಾಲಿನಲ್ಲಿ ಕುಳಿತಿದ್ದರು. ಇದು ವಿರೋಧ ಪಕ್ಷದ ನಾಯಕರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ದೇಶದಲ್ಲಿ ವಿರೋಧ ಪಕ್ಷದ ನಾಯಕನ ಬಗ್ಗೆ ಇಂತಹ ವರ್ತನೆ ಯಾವುದೇ ಸಭ್ಯತೆ, ಸಂಪ್ರದಾಯ ಮತ್ತು ಶಿಷ್ಟಾಚಾರದ ಮಾನದಂಡಗಳನ್ನು ಪೂರೈಸುತ್ತದೆಯೇ? ಇದು ಕೀಳರಿಮೆಯಿಂದ ಬಳಲುತ್ತಿರುವ ಸರ್ಕಾರದ ಹತಾಶೆಯನ್ನು ಮಾತ್ರ ಬಹಿರಂಗಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಸಂಸದ ಮಾಣಿಕ್ಯಂ ಟ್ಯಾಗೋರ್, 2014ರ ಎಲ್​.ಕೆ.ಅಡ್ವಾಣಿ ಅವರ ಫೋಟೋವನ್ನು ಹಂಚಿಕೊಂಡು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ. ಆಗ ಎಲ್.ಕೆ. ಅಡ್ವಾಣಿ ಜಿ ಎಲ್ಲಿ ಕುಳಿತಿದ್ದರು ನೋಡಿ. ಈಗ ಈ ಶಿಷ್ಟಾಚಾರದ ಅವ್ಯವಸ್ಥೆ ಯಾಕೆ? ಮೋದಿ ಮತ್ತು ಶಾ,  ಖರ್ಗೆಯವರನ್ನು ಮತ್ತು ರಾಹುಲ್ ಗಾಂಧಿಯವರನ್ನು ಅವಮಾನಿಸಲು ಬಯಸುತ್ತಾರೆಯೇ? ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net