

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ವ್ಯಂಗ್ಯವಾಡಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ (Pulkit Mani) ನೋಯ್ಡಾ, ಲಕ್ನೋ ಮತ್ತು ಕಾನ್ಪುರದಲ್ಲಿ ತಮ್ಮ ಪ್ರದರ್ಶನಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ hunnywhoisfunny ಎಂಬ ಖಾತೆಯನ್ನು ಹ್ಯಾಂಡಲ್ ಮಾಡುವ ಪುಲ್ಕಿತ್ ಮಣಿ, ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಕಾಂಗ್ರೆಸ್ನ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಮಿಮಿಕ್ರಿ ಮಾಡುತ್ತಿದ್ದಂತೆ ನೆರೆದಿದ್ದ ಬೃಹತ್ ಜನಸ್ತೋಮ ನಗೆಗಡಲಲ್ಲಿ ತೇಲಿತು.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿರುವ ಮಣಿ, ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ನನ್ನ ನೋಯ್ಡಾ ಶೋ ರದ್ದಾಗಿದೆ ಎಂದು ತಿಳಿಸಲು ನಾನು ವಿಷಾದಿಸುತ್ತೇನೆ. ಉಂಟಾದ ಅನಾನುಕೂಲತೆಗಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ನಿಮ್ಮ ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಗೂಂಡಾ ಕಾರ್ಯಕರ್ತರಿಂದ ಬಂದ ಸರಣಿ ಬೆದರಿಕೆಗಳ ಕಾರಣದಿಂದಾಗಿ ಲಖನೌ ಮತ್ತು ಕಾನ್ಪುರದ ಪ್ರದರ್ಶನಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ಮತ್ತೊಂದು ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ ಆರ್ ಕೇಶವನ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಯಾವುದೇ ಸಭ್ಯ, ಸರಿಯಾದ ಆಲೋಚನೆ ಉಳ್ಳ ವ್ಯಕ್ತಿ ಈ ಅಸಭ್ಯ, ಥರ್ಡ್ ಕ್ಲಾಸ್ ನಡವಳಿಕೆಗಳನ್ನು ತಮಾಷೆಯಾಗಿ ಕಾಣುವುದಿಲ್ಲ ಆದರೆ ರಾಹುಲ್ ಗಾಂಧಿ ತಾವು ಉಪಸ್ಥಿತರಿದ್ದ ವೇದಿಕೆಯಲ್ಲಿ ಜೋರಾಗಿ ನಗುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಅದೇ ರೀತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ, ನೈತಿಕ ದಿವಾಳಿತನದ ಅಂತಿಮ ಹಂತಕ್ಕೆ ಕುಸಿದಿದೆ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಜಿ ಅವರ ದಿವಂಗತ ತಾಯಿಯವರನ್ನು ಗೇಲಿ ಮಾಡಲು ಮತ್ತು ಅವಮಾನಿಸಲು ವಿದ್ಯಾರ್ಥಿಗಳ ಸಂವಾದವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಮೂಲಭೂತ ಮಾನವೀಯ ಕರುಣೆ ಮತ್ತು ರಾಜಕೀಯ ಸಂಸ್ಕೃತಿಯ ಆಘಾತಕಾರಿ ಅಭಾವವನ್ನು ತೋರಿಸುತ್ತದೆ ಎಂದು ಜೋಶಿ ಹರಿಹಾಯ್ದಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಈಗ ಹಾಸ್ಯನಟರು ಮತ್ತು ಜೋಕರ್ಗಳ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. ತಾಯಿ ರಾಜಕೀಯದ ವಿಷಯವಲ್ಲ. ತಾಯಿಗೆ ಆಗುವ ಅವಮಾನವನ್ನು ಯಾವುದೇ ಸಭ್ಯ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯ ವಿರೋಧವನ್ನು ಮಾಡಿ, ಆದರೆ ಪ್ರಧಾನಿ ಅವರ ದಿವಂಗತ ತಾಯಿಯವರ ಬಗ್ಗೆ ಮಾಡಿದ ಅಸಭ್ಯ ಹೇಳಿಕೆಗಳನ್ನು ನೋಡಿ ನಗುವುದು ನಿಮ್ಮದೇ ರಾಜಕೀಯ ಸಂಸ್ಕೃತಿಯನ್ನು ಬಯಲು ಮಾಡುತ್ತದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್).