ಸಿಎಂ ಮಮತಾ ಬ್ಯಾನರ್ಜಿ ಆಪ್ತ, ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್(71) ನಿಧನ | Mukul Roy
ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್
Published on:
Copied
Follow Us
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೂ ಕೆಲವೇ ತಿಂಗಳು ಬಾಕಿ ಇರುವಂತೆಯೇ ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್(Mukul Roy) ಇಂದು(ಫೆ. 23) ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಹು ಕಾಯಿಲೆಗಳಿಂದ ಬಳಲುತ್ತಿದ್ದ ರಾಯ್, ಭಾನುವಾರ ಮುಂಜಾನೆ 1.30ರ ಸುಮಾರಿಗೆ ಕೋಲ್ಕತ್ತಾ ಸಾಲ್ಟ್ ಲೇಕ್ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.
ಒಂದು ಕಾಲದಲ್ಲಿ ರಾಯ್ ಅವರನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನಲ್ಲಿ ಮಮತಾ ಬ್ಯಾನರ್ಜಿ ನಂತರ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಪ್ರಮುಖ ಸಂಘಟನಾ ತಂತ್ರಜ್ಞರಾಗಿದ್ದ ಅವರು, 34 ವರ್ಷಗಳ ಕಮ್ಯೂನಿಷ್ಠ ಆಡಳಿತವನ್ನು ಕೊನೆಗೊಳಿಸಿದ 2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2012ರಲ್ಲಿ ಯುಪಿಎ-2 ಸರ್ಕಾರದಲ್ಲಿ ರೈಲ್ವೆ ಟಿಕೆಟ್ ದರ ವಿವಾದಕ್ಕೆ ಸಂಬಂಧಪಟ್ಟಂತೆ ಸಚಿವರ ದಿನೇಶ್ ತ್ರಿವೇದಿ ರಾಜೀನಾಮೆ ನೀಡಿದ ಬಳಿಕ, 32ನೇ ಕೇಂದ್ರ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ 20, 2012 ರಿಂದ ಸೆಪ್ಟೆಂಬರ್ 21, 2012 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದರು.
ಮುಂದೆ 2017ರ ಹೊತ್ತಿಗೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ರಾಯ್, 2021ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಗೆದ್ದ ಕೆಲವೇ ತಿಂಗಳಲ್ಲಿ ಮತ್ತೆ ಸಿಎಂ ಮಮತಾ ಬ್ಯಾನರ್ಜಿ & ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಬಿಜೆಪಿ ಬಿಟ್ಟು ಟಿಎಂಸಿ ಸೇರಿದ್ದರು. ಆ ಬಳಿಕ ದೀರ್ಘಕಾಲದ ಅನಾರೋಗ್ಯದಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು (ಏಜೆನ್ಸೀಸ್).