16ನೇ ದಿನಕ್ಕೇ ಪ್ರತಿಭಟನೆ ಕೊನೆಗೊಳಿಸಬೇಕೆಂದಿದ್ದೆ, ಆದ್ರೆ...! ರಾಹುಲ್ ಗಾಂಧಿ ಸಾಥ್ ನೀಡದಿರುವ ಬಗ್ಗೆ ಕೊನೆಗೂ ಮೌನ ಮುರಿದ ವಾಂಗ್ಚುಕ್! | Sonam Wangchuk

Sonam Wangchuk | ರಾಹುಲ್ ಗಾಂಧಿ ಸಾಥ್ ನೀಡದಿರುವ ಬಗ್ಗೆ ಕೊನೆಗೂ ಮೌನ ಮುರಿದ ವಾಂಗ್ಚುಕ್!
Sonam Wangchuk | ರಾಹುಲ್ ಗಾಂಧಿ ಸಾಥ್ ನೀಡದಿರುವ ಬಗ್ಗೆ ಕೊನೆಗೂ ಮೌನ ಮುರಿದ ವಾಂಗ್ಚುಕ್!
Published on

ತಮ್ಮ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಹಾಯದಿಂದ ಕೊನೆಗೊಳಿಸುವ ಹಾದಿಯನ್ನು ರೂಪಿಸಲಾಗಿತ್ತು ಎಂಬ ಮಹತ್ವದ ಸಂಗತಿಯನ್ನು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಬಹಿರಂಗಪಡಿಸಿದ್ದಾರೆ.

ದಿ ಪ್ರಖರ್ ಗುಪ್ತಾ ಎಕ್ಸ್‌ಪೀರಿಯನ್ಸ್ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಾಂಗ್ಚುಕ್, ಚಳವಳಿಯಲ್ಲಿದ್ದ ಅಭೀಜಿತ್ ದೀಪ್ಕೆ ಹಾಗೂ ಕಾಕ್ರೋಚ್ ಜನತಾ ಪಕ್ಷದ ಯುವಕರ ರಾಜಕೀಯ ಆಕಾಂಕ್ಷೆಗಳು ಮತ್ತು ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ವಹಿಸಬಹುದಾಗಿದ್ದ ಪಾತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಹೋರಾಟಕ್ಕೆ ಧುಮುಕಿದ ಯುವಕರಿಗೆ ರಾಜಕೀಯ ಆಸೆಗಳಿರುವುದು ತಪ್ಪಲ್ಲ, ಆದರೆ ಪ್ರತಿಭಟನೆಯ ಮೂಲ ವೇದಿಕೆಯು ಯಾವುದೇ ಪಕ್ಷಕ್ಕೆ ಸೇರದೆ ತಟಸ್ಥವಾಗಿ ಉಳಿಯಬೇಕು ಎಂದು ಸಲಹೆ ನೀಡಿದ್ದಾರೆ.

ಯುವ ನಾಯಕರ ರಾಜಕೀಯ ಆಕಾಂಕ್ಷೆಗಳು

ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಅಭೀಜಿತ್ ದೀಪ್ಕೆ ಮತ್ತು ಇತರ ಯುವಕರ ರಾಜಕೀಯ ಹಿನ್ನೆಲೆ ಅಥವಾ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ ವಾಂಗ್ಚುಕ್, ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ತಪ್ಪಲ್ಲ ಎಂದಿದ್ದಾರೆ. ಯುವ ನಾಯಕರಿಗೆ ರಾಜಕೀಯ ಆಕಾಂಕ್ಷೆಗಳಿರುವುದು ಸಹಜ ಮತ್ತು ಅದು ಇರಲೇಬೇಕು. ಅವರೇನು ಯಾವುದೇ ಸ್ವಾರ್ಥವಿಲ್ಲದ ಸಂತರಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ವ್ಯಕ್ತಿಗತ ರಾಜಕೀಯ ಆಕಾಂಕ್ಷೆಗಳು ಬೇರೆ, ಚಳವಳಿಯ ವೇದಿಕೆಯೇ ಬೇರೆ ಎಂದು ಅಭಿಪ್ರಾಯಪಟ್ಟಿರುವ ಅವರು, ಆರಂಭಿಸಿದ ವೇದಿಕೆಯನ್ನು ರಾಜಕೀಯ ಪಕ್ಷವಾಗಿ ಬದಲಾಯಿಸದೆ, ತಟಸ್ಥ ಗುಂಪಾಗಿ ಉಳಿದುಕೊಂಡರೆ ಮಾತ್ರ ಸಾರ್ವಜನಿಕರ ವಿಶ್ವಾಸ ಗಳಿಸಲು ಮತ್ತು ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಜೆಪಿ ಕಾರ್ಯಕರ್ತರನ್ನು ದೇಶದ ಘಟನೆಗಳಿಗೆ ಸ್ಪಂದಿಸುವ ಯುವಕರು ಎಂದು ಹೇಳಿದ ವಾಂಗ್ಚುಕ್, ಅವರು ಒಳ್ಳೆಯ ಉದ್ದೇಶವುಳ್ಳವರು ಮತ್ತು ಕೌಶಲ ಇರುವವರು ಎಂದಿದ್ದಾರೆ. ಅವರಲ್ಲಿ ಯಾವುದೇ ಭ್ರಷ್ಟಾಚಾರದ ಲಕ್ಷಣಗಳು ಕಂಡುಬಂದಿಲ್ಲ ಹಾಗೂ ಸಿಜೆಪಿ ಎನ್ನುವುದು ಯುವಕರ ಹೊಸ ಆಲೋಚನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ ಎಂದು ಹೇಳಿದ್ದಾರೆ. ವಿದೇಶಿ ಪ್ರಭಾವದ ಆರೋಪಗಳನ್ನು ತಳ್ಳಿಹಾಕಿದ ಅವರು, ಈ ಬಳಗದ ಶೇಕಡಾ 94 ರಷ್ಟು ಬೆಂಬಲಿಗರು ಭಾರತದವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಸತ್ಯಾಗ್ರಹ ಹಿಂಪಡೆಯುವ ತಂತ್ರ

ತಮ್ಮ ಉಪವಾಸ ಸತ್ಯಾಗ್ರಹದ 15 ಅಥವಾ 16 ನೇ ದಿನದ ವೇಳೆಗೆ, ಪ್ರತಿಭಟನೆಯ ಯಶಸ್ಸಿನ ಬಗ್ಗೆ ಅನುಮಾನ ಮೂಡಿದಾಗ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಲು ಯೋಜನೆಯನ್ನು ಹುಡುಕಲಾಗುತ್ತಿತ್ತು. ಈ ವೇಳೆ ವಿಷಯವನ್ನು ಸಂಸತ್ತಿಗೆ ತೆಗೆದುಕೊಂಡು ಹೋಗಿ, ವಿರೋಧ ಪಕ್ಷದ ನಾಯಕರಾಗಿದ್ದ ರಾಹುಲ್ ಗಾಂಧಿ ಅವರ ಕೈಯಿಂದ ಜ್ಯೂಸ್ ಅಥವಾ ಸೂಪ್ ಕುಡಿದು ಉಪವಾಸ ಅಂತ್ಯಗೊಳಿಸುವ ಹಾದಿ ರೂಪಿಸಲಾಗಿತ್ತು. ವಿರೋಧ ಪಕ್ಷದ ಸಂಸದರು ಪ್ರತಿಭಟನಾಕಾರರನ್ನು ಸ್ವೀಕರಿಸಿ, ಚಳವಳಿಯ ಮುಂದಿನ ಹಂತವನ್ನು ಸಂಸತ್ತಿಗೆ ಒಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು ಎಂದು ವಾಂಗ್ಚುಕ್​ ತಿಳಿಸಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಧನಾತ್ಮಕ ಸ್ಪಂದನೆ ಸಿಗಲಿಲ್ಲ ಎಂದು ವಾಂಗ್ಚುಕ್ ಹೇಳಿದ್ದಾರೆ. ರಾಹುಲ್ ಗಾಂಧಿ ಬಂದಿದ್ದರೆ ಈ ಚಳವಳಿಗೆ ಮತ್ತಷ್ಟು ದೊಡ್ಡ ಮಟ್ಟದ ಬೆಂಬಲ ಸಿಗುತ್ತಿತ್ತು. ಆದರೆ ಅವರು ಬರಲಿಲ್ಲ. ಪ್ರತಿಭಟನಾ ಸ್ಥಳಕ್ಕೆ ಹೋಗದಂತೆ ತಮ್ಮ ಪಕ್ಷದ ಹಿರಿಯ ನಾಯಕರಿಗೂ ಸೂಚಿಸಲಾಗಿತ್ತು ಎಂದು ಕೆಲವು ಕಾಂಗ್ರೆಸ್ ನಾಯಕರು ತಮಗೆ ತಿಳಿಸಿದ್ದಾಗಿ ವಾಂಗ್ಚುಕ್ ಬಹಿರಂಗಪಡಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಗೌರವ ನೀಡುವ ಉದ್ದೇಶದಿಂದ ಉಪವಾಸ ಅಂತ್ಯಗೊಳಿಸಲು ಆಹ್ವಾನಿಸಿದರೂ, ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ವಾಂಗ್ಚುಕ್​ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net