ನಡ್ಡಾ ಜಿ ಸುಳ್ಳು ಹೇಳಬೇಡಿ!...ಕೇಂದ್ರ ಸಚಿವರ ಪ್ಲಾನ್ ಫ್ಲಾಪ್: 4 ಗಂಟೆ ಟೈಮ್ ವೇಸ್ಟ್ ಮಾಡಿದ್ರು ಎಂದು ಸಿಜೆಪಿ ಆಕ್ರೋಶ | Delhi Protest

Delhi Protest | ಕೇಂದ್ರ ಸಚಿವರು ಪ್ಲಾನ್ ಫ್ಲಾಪ್: 4 ಗಂಟೆ ಟೈಮ್ ವೇಸ್ಟ್ ಮಾಡಿದ್ರು ಎಂದು ಸಿಜೆಪಿ ಆಕ್ರೋಶ
Delhi Protest | ಕೇಂದ್ರ ಸಚಿವರು ಪ್ಲಾನ್ ಫ್ಲಾಪ್: 4 ಗಂಟೆ ಟೈಮ್ ವೇಸ್ಟ್ ಮಾಡಿದ್ರು ಎಂದು ಸಿಜೆಪಿ ಆಕ್ರೋಶ
Published on
ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಜೊತೆಗಿನ ಮಾತುಕತೆ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಆರೋಪಿಸಿದೆ. ಸರ್ಕಾರದೊಂದಿಗಿನ ಚರ್ಚೆಯು ಸೌಹಾರ್ದಯುತವಾಗಿ ಮತ್ತು ಫಲಪ್ರದವಾಗಿ ನಡೆಯಿತು ಎಂಬ ನಡ್ಡಾ ಅವರ ಹೇಳಿಕೆಯನ್ನು ಸಿಜೆಪಿ ಸಂಪೂರ್ಣವಾಗಿ ತಿರಸ್ಕರಿಸಿದೆ.
ಚಲೋ ಸಂಸತ್ ಜಾಥಾ ವೇಳೆ ಕೇಂದ್ರ ಸಚಿವ ನಡ್ಡಾರನ್ನು ಭೇಟಿಯಾಗಿದ್ದ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, ಈ ಸಂಧಾನ ಸಭೆಯನ್ನು ನಿಷ್ಪ್ರಯೋಜಕ ಎಂದು ಕರೆದಿದ್ದು, ಈ ಪ್ರಕ್ರಿಯೆಯಲ್ಲಿ ತಮ್ಮ ನಿಯೋಗದ ನಾಲ್ಕು ಗಂಟೆಗಳ ಸಮಯ ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ವಕ್ತಾರ ಸೌರವ್ ದಾಸ್ ಮಾತನಾಡಿ, ಕೇವಲ 10 ನಿಮಿಷಗಳ ಕಾಲ ನಡೆದ ಸಭೆಗಾಗಿ ತಾವು ಸುಮಾರು ಎರಡು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಜೆ ಪಿ ನಡ್ಡಾ, ಇಂದು ಬೆಳಿಗ್ಗೆ, ಮೊದಲ ಬಾರಿಗೆ ಪ್ರತಿಭಟನಾಕಾರರು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಪ್ರಸ್ತಾಪಿಸಿದರು ಮತ್ತು ಬೆಳಿಗ್ಗೆ 11:50 ರಿಂದ ಚರ್ಚೆಗಳು ನಡೆಯುತ್ತಿವೆ. ಸಭೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಅವರ ನಿಯೋಗದೊಂದಿಗೆ ಆರಂಭಿಕ ವಿವರವಾದ ಮೌಖಿಕ ಚರ್ಚೆ ನಡೆಸಲಾಯಿತು ಮತ್ತು ಅವರು ಸಂಜೆ 4 ಗಂಟೆಗೆ ನನಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಆಡಳಿತಕ್ಕೆ ಸಹಕರಿಸುವಂತೆ ನಾನು ಎಲ್ಲಾ ಪ್ರತಿಭಟನಾಕಾರರಲ್ಲಿ ವಿನಂತಿಸಿದ್ದೇನೆ ಎಂದು ಬರೆದುಕೊಂಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾಂಕಾ, ನಡ್ಡಾ ಜಿ, ಸುಳ್ಳು ಹೇಳಬೇಡಿ. ಈ ಚಳವಳಿಯ ಶಕ್ತಿಯನ್ನು ಕಂಡು ನಿಮ್ಮ ಸರ್ಕಾರ ಗಾಬರಿಯಾಗಿದೆ. ಅಂತಿಮವಾಗಿ ಈ ನಿರುಪಯೋಗಿ ಸಭೆಗಾಗಿ ನಮ್ಮ 4 ಗಂಟೆಗಳ ಸಮಯವನ್ನು ವ್ಯರ್ಥ ಮಾಡಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.

ಸಿಜೆಪಿ ಇಟ್ಟಿದ್ದ ಮೂರು ಪ್ರಮುಖ ಬೇಡಿಕೆಗಳು ಏನೇನು..?

ಆರೋಗ್ಯ ಸಚಿವ ಜೆ ಪಿ ನಡ್ಡಾರೊಂದಿಗೆ ನಡೆದ ಎರಡು ಹಂತದ ಮಾತುಕತೆಯ ಸಮಯದಲ್ಲಿ ಸಿಜೆಪಿ ಮಂಡಿಸಿದ ಮೂರು ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ಭರವಸೆಯನ್ನು ನೀಡಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಬದಲಾಗಿ, ಧರಣಿಯನ್ನು ಹಿಂಪಡೆದು ಶಾಂತಿ ಮರುಸ್ಥಾಪನೆಗೆ ಸಹಕರಿಸುವಂತೆ ನಡ್ಡಾ ಮನವಿ ಮಾಡಿದ್ದಾರೆ.
ಪ್ರಮುಖ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಹೊಣೆಗಾರಿಕೆಯನ್ನು ನಿರ್ಧರಿಸಬೇಕು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿಯ ಸಂಸತ್ ಚಲೋ ಕರೆಗೆ ಓಗೊಟ್ಟು ಸಾವಿರಾರು ಜನರು ದೆಹಲಿಯಲ್ಲಿ ಜಮಾಯಿಸಿದ್ದರು. ಈ ನಡುವೆ ಗೃಹ ಸಚಿವ ಅಮಿತ್ ಷಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ದಿನವಿಡೀ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಸಿಜೆಪಿಯ ಮೂರು ಪ್ರಮುಖ ಬೇಡಿಕೆಗಳು ಹೀಗಿವೆ!...

  • ಹೋರಾಟಗಾರ ಸೋನಮ್ ವಾಂಗ್ಚುಕ್ ಬಿಡುಗಡೆ 
  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಜಾ. 
  • ನೀಟ್ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ.

ಸಭೆಯ ಇನ್ಸೈಡ್ ಡಿಟೇಲ್ಸ್

ಸರ್ಕಾರಿ ಮೂಲಗಳ ಪ್ರಕಾರ, ಮೊದಲ ಸಭೆಯು ಬೆಳಿಗ್ಗೆ 11:50 ರ ಸುಮಾರಿಗೆ ನಡೆದಾಗ ಸಿಜೆಪಿ ಪ್ರತಿನಿಧಿಗಳು ತಮ್ಮ ಕಳವಳಗಳನ್ನು ನಡ್ಡಾ ಮುಂದೆ ಮಂಡಿಸಿದರು. ಆ ಸಭೆಯಲ್ಲಿ ಸಚಿವರು ತಮ್ಮ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಸಂಜೆ 4 ಗಂಟೆಗೆ ಪ್ರತಿನಿಧಿಗಳು ಮತ್ತೊಮ್ಮೆ ಆಗಮಿಸಿ ಲಿಖಿತ ಮನವಿ ಪತ್ರವನ್ನು ಹಸ್ತಾಂತರಿಸಿದರು.
ಆದರೆ, ಎರಡು ಸಭೆಗಳಲ್ಲೂ ನಡ್ಡಾ ಅವರು ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಭರವಸೆ ನೀಡಲಿಲ್ಲ ಎಂದು ಮೂಲಗಳು ಹೇಳಿವೆ. ಬದಲಾಗಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಇದೇ ವೇಳೆ, ನಿಯೋಜನೆಗೊಂಡಿದ್ದ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಗೆ ಯಾವುದೇ ಕಾರಣಕ್ಕೂ ಬಲಪ್ರಯೋಗ ಮಾಡದಂತೆ ಮತ್ತು ಅತ್ಯಂತ ಸಂಯಮದಿಂದ ವರ್ತಿಸುವಂತೆ ಸೂಚಿಸಲಾಗಿತ್ತು.

ಸರ್ಕಾರದ ಸಮರ್ಥನೆ!...

ಪ್ರತಿಭಟನಾಕಾರರ ಆರೋಪಗಳನ್ನು ತಳ್ಳಿಹಾಕಿರುವ ಸರ್ಕಾರಿ ಮೂಲಗಳು, ಈ ವರ್ಷ ನಡೆದ ಪ್ರವೇಶ ಪರೀಕ್ಷೆಗಳ ಪ್ರಮಾಣವನ್ನು ಉಲ್ಲೇಖಿಸಿವೆ. ನೀಟ್, ಜೆಇಇ ಮತ್ತು ಸಿಯುಇಟಿ ಎಂಬ ಮೂರು ಪ್ರಮುಖ ಪರೀಕ್ಷೆಗಳಿಗೆ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪ್ರಸ್ತುತ ನೈಜ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್‌ನಲ್ಲಿ ನಿರತರಾಗಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ಸರ್ಕಾರ ವಾದಿಸಿದೆ.
ಅಲ್ಲದೆ, ಫಲಿತಾಂಶಗಳು ವ್ಯಾಪಕ ಅಕ್ರಮವನ್ನು ತೋರಿಸುತ್ತಿಲ್ಲ. ಅಗ್ರ ಶ್ರೇಯಾಂಕ ಪಡೆದವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಪರೀಕ್ಷೆ ಬರೆದವರಾಗಿದ್ದಾರೆ ಮತ್ತು ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ. ಪತ್ರಿಕೆ ಸೋರಿಕೆ ವರದಿಯಾದ ತಕ್ಷಣವೇ ಆಡಳಿತ ಮಂಡಳಿಯು ವೇಗವಾಗಿ ಕಾರ್ಯಪ್ರವೃತ್ತರಾಗಿ, ಒಂದು ತಿಂಗಳೊಳಗೆ ಮರುಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಪರೀಕ್ಷಾ ವ್ಯವಸ್ಥೆಯಲ್ಲಿನ ವ್ಯವಸ್ಥಿತ ವೈಫಲ್ಯಗಳ ವಿರುದ್ಧ ಹಿರಿಯ ಅಧಿಕಾರಿಗಳು ಮತ್ತು ನೀತಿ ನಿರೂಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸಿಜೆಪಿ ತನ್ನ ಪಟ್ಟು ಮುಂದುವರಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net