ಇರಾನ್ ವಿರುದ್ಧ ಅಮೆರಿಕ ಸರಣಿ ದಾಳಿ: ನಾಗರಿಕ ಮೂಲಸೌಕರ್ಯ, ವಿದ್ಯುತ್ ಘಟಕಗಳಿಗೂ ಟ್ರಂಪ್ ಬೆದರಿಕೆ! | Donald Trump

Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೊಂದು ಸುತ್ತಿನ ಮಿಲಿಟರಿ ದಾಳಿಗೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದು, ಸಂಘರ್ಷ ಹೀಗೆಯೇ ಮುಂದುವರಿದರೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆಯೂ ದಾಳಿ ನಡೆಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನಡೆದ ದಾಳಿಗಳ ಬೆನ್ನಲ್ಲೇ ಇರಾನ್‌ನೊಂದಿಗಿನ ಕದನ ವಿರಾಮ ಕೊನೆಗೊಂಡಿದೆ ಎಂದು ಅವರು ಘೋಷಿಸಿದ್ದಾರೆ.
ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕವು ಕಳೆದ ರಾತ್ರಿ ಇರಾನ್ ಮೇಲೆ ದಾಳಿ ನಡೆಸಿದ್ದು, ಇಂದು ರಾತ್ರಿಯೂ ಸಹ ಅಷ್ಟೇ ಪ್ರಬಲವಾದ ಮಿಲಿಟರಿ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯಂತಹ ಆಯಕಟ್ಟಿನ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ಆರೋಪಿಸಿರುವ ಅವರು, ಪ್ರಸ್ತುತ ಅಮೆರಿಕ ನಡೆಸುತ್ತಿರುವ ದಾಳಿಗಳು ಇರಾನ್‌ನ ಕೃತ್ಯಕ್ಕೆ ನೀಡುತ್ತಿರುವ ತಕ್ಕ ಪ್ರತೀಕಾರ ಎಂದು ಕರೆದಿದ್ದಾರೆ.
ಸಂಘರ್ಷ ಹೀಗೆಯೇ ಉಲ್ಬಣಗೊಂಡರೆ ಇರಾನ್‌ನ ವಿದ್ಯುತ್ ಉತ್ಪಾದನಾ ಕೇಂದ್ರಗಳು ಮತ್ತು ಕುಡಿಯುವ ನೀರಿನ ಸಂಸ್ಕರಣಾ ಘಟಕಗಳು ಸೇರಿದಂತೆ ಪ್ರಮುಖ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಇದರ ಜೊತೆಗೆ, ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನು ಅಮೆರಿಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ಹೇಳಿರುವ ಅವರು, ಅದನ್ನು ತಡೆಯಲು ಇರಾನ್‌ನಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಕದನ ವಿರಾಮ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಟ್ರಂಪ್ ಸಾರಿದ ಬೆನ್ನಲ್ಲೇ ಬಂದಿರುವ ಈ ಹೇಳಿಕೆಗಳು, ಮಧ್ಯಪ್ರಾಚ್ಯದಲ್ಲಿ ಮತ್ತೆ ಪೂರ್ಣಪ್ರಮಾಣದ ಯುದ್ಧದ ಭೀತಿಯನ್ನು ಹೆಚ್ಚಿಸಿದ್ದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net