ಟಿವಿ ಸುದ್ದಿ ವಾಹಿನಿಗಳ ಟಿಆರ್​ಪಿ ರೇಟಿಂಗ್ ವರದಿ ತಾತ್ಕಾಲಿಕವಾಗಿ ನಿಷೇಧಿಸಿದ ಕೇಂದ್ರ ಸರ್ಕಾರ | TRP rating

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಟಿವಿ ಸುದ್ದಿವಾಹಿನಿಗಳ ಟಿಆರ್​ಪಿ(ಟೆಲಿವಿಷನ್ ರೇಟಿಂಗ್ ಪಾಯಿಂಟ್) ವರದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಎಆರ್​ಸಿಗೆ (ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ) ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ವರದಿಯಾಗಿದೆ.
ಈ ಕುರಿತು ಬಿಎಆರ್​ಸಿಗೆ ಸೂಚನೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಟಿಆರ್‌ಪಿ ಪ್ರಕ್ರಿಯೆಯನ್ನು ನಾಲ್ಕು ವಾರಗಳವರೆಗೆ ಅಥವಾ ಮುಂದಿನ ಆದೇಶಗಳನ್ನು ನೀಡುವವರೆಗೆ ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ತಿಳಿಸಿದೆ ಎನ್ನಲಾಗಿದೆ.
ಕೆಲವು ಟಿವಿ ಸುದ್ದಿ ವಾಹಿನಿಗಳು ಇತ್ತೀಚೆಗೆ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಅನಗತ್ಯವಾಗಿ ಸಂವೇದನಾಶೀಲ ಮತ್ತು ಊಹಾತ್ಮಕ ಕಥೆಗಳನ್ನು ಪ್ರಸಾರ ಮಾಡುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿದ್ದು, ಸಾರ್ವಜನಿಕರಲ್ಲಿ ಅನಗತ್ಯ ಚಿಂತೆ ಮತ್ತು ತಪ್ಪು ಕಲ್ಪನೆಗಳನ್ನು ಮೂಡಿಸುವ ಸಾಧ್ಯತೆ ಹಿನ್ನೆಲೆ ಕೇಂದ್ರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಸುದ್ದಿವಾಹಿನಿಗಳನ್ನು ಪ್ರಸಾರವಾಗುವ ಕಥೆಗಳು ಸಾಮಾನ್ಯ ಜನರಿಗೆ, ಅದರಲ್ಲೂ ಯುದ್ಧ ವಲಯಗಳಲ್ಲಿ ಸಿಕ್ಕಿಬಿದ್ದಿರುವ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಹೆಚ್ಚಿನ ಆತಂಕವನ್ನುಂಟು ಮಾಡುವ ದೃಷ್ಟಿಯಿಂದ ಸ್ವಲ್ಪ ಸಮಯದವರೆಗೆ ಸುದ್ದಿ ಚಾನೆಲ್‌ಗಳ ನಡುವಿನ ರೇಟಿಂಗ್ ಸ್ಪರ್ಧೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಟಿಆರ್‌ಪಿ ಆಧರಿಸಿ ಟಿವಿ ಚಾನೆಲ್‌ಗಳ ವೀಕ್ಷಕರ ಸಂಖ್ಯೆಯನ್ನು ಬಿಎಆರ್‌ಸಿ ಅಂದಾಜು ಮಾಡುತ್ತದೆ. ಜಾಹೀರಾತುದಾರರು ಈ ಡೇಟಾವನ್ನು ಆಧರಿಸಿ ತಮ್ಮ ಜಾಹೀರಾತು ಹೂಡಿಕೆಗಳನ್ನು ನಿರ್ಧರಿಸುತ್ತಾರೆ. ಟಿಆರ್‌ಪಿ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಾದಗಳು ಉದ್ಭವಿಸಿದ ಕೆಲವು ಸಂದರ್ಭಗಳಲ್ಲಿ ಈ ಹಿಂದೆ ಹಲವು ಬಾರಿ ಟಿಆರ್​ಪಿ ವರದಿ ಮಾಡುವುದನ್ನು ನಿಷೇಧಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net