ಮುಚ್ಚಿದ ಬಾಗಿಲ ಹಿಂದೆ ಅಡಗಿರಲು ಸಾಧ್ಯವಿಲ್ಲ!... ಜಂತರ್ ಮಂತರ್ ಘಟನೆಗೆ ಅಮಿತ್ ಷಾ ನೇರ ಹೊಣೆ ಎಂದ ಖರ್ಗೆ | Mallikarjun Kharge

 Mallikarjun Kharge | ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
Mallikarjun Kharge | ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
Published on
ನವದೆಹಲಿ: ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರದ ಕುರಿತು ಕೇಂದ್ರ ಸರ್ಕಾರ ಸತ್ಯವನ್ನು ಬಹಿರಂಗಪಡಿಸಬೇಕು. ಗೃಹ ಸಚಿವರು ಬಾಗಿಲ ಹಿಂದೆ ಅಡಗಿಕೊಳ್ಳುವುದನ್ನು ಬಿಟ್ಟು ದೇಶಕ್ಕೆ ಉತ್ತರಿಸಲಿ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ವಿಧೇಯಕ ಮಂಡನೆಯ ಬಳಿಕ ಮಾತನಾಡಿದ ಖರ್ಗೆ, ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್​ ಜನತಾ ಪಾರ್ಟಿಯ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಿದ ರೀತಿ ಮತ್ತು ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನವದೆಹಲಿಯಲ್ಲಿ ಜುಲೈ 20 ರಂದು ನಡೆದ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಸಂಪೂರ್ಣ ಹೊಣೆ ಎಂದು ಆರೋಪಿಸಿದ ಖರ್ಗೆ, ಅವರ ರಾಜೀನಾಮೆಗೆ ಆಗ್ರಹಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಖರ್ಗೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರಧಾನಿಯವರು ಮಾತನಾಡದಿದ್ದರೆ ಅವರ ಸರ್ಕಾರಕ್ಕೆ ಮತ್ತೊಮ್ಮೆ ಪಾಠ ಕಲಿಸುವಂತೆ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಕರೆ ನೀಡಿದರು. ಈ ವಿಧೇಯಕದಲ್ಲಿ ಕೇವಲ ಅಂಕಿಅಂಶಗಳು ಬದಲಾಗುತ್ತಿವೆಯೇ ಹೊರತು ಇದರಿಂದ ಏನೂ ಆಗುವುದಿಲ್ಲ. ನೀವು ಹೆಚ್ಚಿನ ದಂಡ, ಕಠಿಣ ಶಿಕ್ಷೆ, ವಿಶೇಷ ಕಾರ್ಯಪಡೆ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಂತಹ ನಿಬಂಧನೆಗಳನ್ನು ಸೇರಿಸಿದ್ದೀರಿ. ಆದರೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಖರ್ಗೆ ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, ನೀವು ಈ ಪರೀಕ್ಷೆಯನ್ನು ಹೇಗೆ ನಡೆಸುತ್ತೀರಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹೇಗೆ ಸಿದ್ಧತೆ ನಡೆಸುತ್ತೀರಿ ಎಂಬುದರ ಮೇಲೆ ಯಶಸ್ಸು ಆಧಾರಿತವಾಗಿದೆಯೇ ಹೊರತು ಕೇವಲ ಕಾಯಿದೆಯಿಂದಲ್ಲ. ಇಂತಹ ಪ್ರಬಲ ಕಾನೂನನ್ನು ತರಲು ನಾವು 2024 ರಲ್ಲೇ ಬೇಡಿಕೆ ಇಟ್ಟಿದ್ದೆವು. ಆದರೆ ಆಗ ನೀವು ನಮ್ಮ ಮಾತನ್ನು ಒಪ್ಪಲಿಲ್ಲ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಭಾರತದಾದ್ಯಂತ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ ಎಂದು ಆರೋಪಿಸಿದ ಖರ್ಗೆ, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು. ಖರ್ಗೆ ನೀಡಿದ ಈ ಹೇಳಿಕೆ ಮೇಲ್ಮನೆಯಲ್ಲಿ ಭಾರಿ ಗೊಂದಲಕ್ಕೆ ಕಾರಣವಾಯಿತಲ್ಲದೆ, ಬಿಜೆಪಿ ಸಂಸದರು ಮೇಲ್ಮನೆಯ ವಿಪಕ್ಷ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರು ತಮ್ಮ ಭಾಷಣದಲ್ಲಿ ಮನುಸ್ಮೃತಿಯನ್ನು ಪ್ರಸ್ತಾಪಿಸಿದ್ದು ಸಹ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ತದನಂತರ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರು ರಾಜ್ಯಸಭಾ ಸಭಾಪತಿ ಸಿ ಪಿ ರಾಧಾಕೃಷ್ಣನ್ ಅವರಿಗೆ ಖರ್ಗೆ ಅವರ ಆ ಮಾತುಗಳನ್ನು ಕಡತದಿಂದ ತೆಗೆದುಹಾಕುವಂತೆ ಮನವಿ ಮಾಡಿದರು. ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಬಹುದು ಎಂದು ನಡ್ಡಾ ಹೇಳಿದರು.
ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026 ಲೋಕಸಭೆಯ ಅಂಕಿತ ಪಡೆದ ಮರುದಿನವೇ (ಗುರುವಾರ) ರಾಜ್ಯಸಭೆಯಲ್ಲಿ ಮಂಡನೆಯಾಯಿತು. ವಿಧೇಯಕವನ್ನು ಮಂಡಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಸರ್ಕಾರವು ಈ ವಿಧೇಯಕವನ್ನು ಅತ್ಯಂತ ಪ್ರಾಮಾಣಿಕ ಉದ್ದೇಶದಿಂದ ತಂದಿದ್ದು, ಎಲ್ಲಾ ಕಡೆಯಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು ಮುಕ್ತವಾಗಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net