ಮುರಿಯುತ್ತಾ ಕೈ-ಡಿಎಂಕೆ ಬಾಂಧವ್ಯ? ರಾಹುಲ್​ಗೆ ಡಿಎಂಕೆ ನಾಯಕನ ಬಹಿರಂಗ ಅಪಮಾನ!: ನಿಮ್ಮ ಜೊತೆ ಜಂಟಿ ಹೋರಾಟ ಇಲ್ಲವೇ ಇಲ್ಲ ಎಂದ ಶರವಣನ್! DMKvsCongress

ಮುರಿಯುತ್ತಾ ಕೈ-ಡಿಎಂಕೆ ಬಾಂಧವ್ಯ? ರಾಹುಲ್​ಗೆ ಡಿಎಂಕೆ ನಾಯಕನ ಬಹಿರಂಗ ಅಪಮಾನ!: ನಿಮ್ಮ ಜೊತೆ ಜಂಟಿ ಹೋರಾಟ ಇಲ್ಲವೇ ಇಲ್ಲ ಎಂದ ಶರವಣನ್!
ಮುರಿಯುತ್ತಾ ಕೈ-ಡಿಎಂಕೆ ಬಾಂಧವ್ಯ? ರಾಹುಲ್​ಗೆ ಡಿಎಂಕೆ ನಾಯಕನ ಬಹಿರಂಗ ಅಪಮಾನ!: ನಿಮ್ಮ ಜೊತೆ ಜಂಟಿ ಹೋರಾಟ ಇಲ್ಲವೇ ಇಲ್ಲ ಎಂದ ಶರವಣನ್!
Published on
ಚೆನ್ನೈ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಜನ್ಮದಿನದಂದೇ (ಜೂ.19) ತಮಿಳುನಾಡಿನ ಡಿಎಂಕೆಯ ಪ್ರಭಾವಿ ನಾಯಕ ಶರವಣನ್ ಅಣ್ಣಾದೊರೈ(DMKvsCongress) ಭಾರಿ ಬಾಂಬ್ ಸಿಡಿಸಿದ್ದಾರೆ. ದೇಶಾದ್ಯಂತ ವಿಪಕ್ಷಗಳ ಒಕ್ಕೂಟವನ್ನು ಬಲಪಡಿಸಲು ಮತ್ತು ಜಂಟಿ ಹೋರಾಟ ನಡೆಸಲು ರಾಹುಲ್ ಕರೆ ನೀಡಿದ್ದರು. ಆದರೆ, ಇದಕ್ಕೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕ, ಧನ್ಯವಾದಗಳು, ಆದರೆ ನಿಮ್ಮ ಜೊತೆ ಕೈಜೋಡಿಸಲು ನಮಗೆ ಇಷ್ಟವಿಲ್ಲ!ಎಂದು ಸೋಷಿಯಲ್ ಮೀಡಿಯಾದಲ್ಲಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

ಹುಟ್ಟುಹಬ್ಬದ ಶುಭಾಶಯದ ಬೆನ್ನಲ್ಲೇ ಶುರುವಾದ ಹೈಡ್ರಾಮಾ

ವಾಸ್ತವವಾಗಿ, ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ತಮಿಳುನಾಡಿನ ಮಾಜಿ ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಎಕ್ಸ್ ಮೂಲಕ ಪ್ರೀತಿಯ ಶುಭಾಶಯ ಕೋರಿದ್ದರು. ಇದಕ್ಕೆ ಧನ್ಯವಾದ ತಿಳಿಸಿದ್ದ ರಾಹುಲ್ ಗಾಂಧಿ, ಭಾರತದ ಸಂವಿಧಾನ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆತ್ಮವನ್ನು ರಕ್ಷಿಸಲು ನಮ್ಮ ಜಂಟಿ ಹೋರಾಟ ಮುಂದುವರಿಯಲಿದೆ. ನಾವು ಒಟ್ಟಾಗಿ ಗೆಲ್ಲುವವರೆಗೂ ಹೋರಾಡುತ್ತೇವೆ ಎಂದು ಬರೆದುಕೊಂಡಿದ್ದರು.
ರಾಹುಲ್ ಗಾಂಧಿ ಅವರ ಈ ಪೋಸ್ಟ್ ಅನ್ನು ಮರುಹಂಚಿಕೊಂಡ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ಇಡೀ ರಾಜಕೀಯ ವಲಯವೇ ಬೆಚ್ಚಿಬೀಳುವಂತಹ ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮಿಸ್ಟರ್ ರಾಹುಲ್ ಗಾಂಧಿ. ಆದರೆ ಧನ್ಯವಾದಗಳು, ನಿಮ್ಮ ಜಂಟಿ ಹೋರಾಟ ನಮಗೆ ಬೇಡ. ನಾವು ನಿಮ್ಮೊಂದಿಗೆ ಏನನ್ನೂ ಹಂಚಿಕೊಳ್ಳುತ್ತಿಲ್ಲ ಮತ್ತು ನಾವು ಒಟ್ಟಾಗಿ ಯಾವುದೇ ಹೋರಾಟ ಮಾಡುವುದೂ ಇಲ್ಲ ಎಂದು ನೇರವಾಗಿ ಕಿಡಿಕಾರಿದ್ದಾರೆ.
ಬಿಕ್ಕಟ್ಟಿನ ಸುಳಿಗೆ ಸಿಲುಕಿದ ವಿರೋಧ ಪಕ್ಷಗಳ ಒಕ್ಕೂಟ
ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಎಲ್ಲಾ ವಿಪಕ್ಷಗಳನ್ನು ಒಂದೇ ವೇದಿಕೆಯಡಿ ತರಲು ಕಾಂಗ್ರೆಸ್ ಮತ್ತು ಡಿಎಂಕೆ ನಿರಂತರ ಪ್ರಯತ್ನ ನಡೆಸುತ್ತಿರುವಾಗಲೇ ಈ ಆಘಾತಕಾರಿ ಹೇಳಿಕೆ ಹೊರಬಿದ್ದಿದೆ. ತಮಿಳುನಾಡಿನಲ್ಲಿ ಸೀಟು ಹಂಚಿಕೆ, ಪ್ರಾದೇಶಿಕ ಸ್ವಾಯತ್ತತೆ ಮತ್ತು ಹಿಂದಿ ಹೇರಿಕೆ ವಿರೋಧಿ ಹೋರಾಟಗಳ ವಿಷಯದಲ್ಲಿ ಡಿಎಂಕೆಯ ಆಂತರಿಕ ವಲಯದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ಹೊಗೆಯಾಡುತ್ತಿತ್ತು ಎಂಬುದಕ್ಕೆ ಶರವಣನ್ ಅವರ ಈ ಪೋಸ್ಟ್ ಪ್ರಮುಖ ಸಾಕ್ಷಿಯಾಗಿದೆ. ತಳಮಟ್ಟದ ಡಿಎಂಕೆ ಕಾರ್ಯಕರ್ತರು ಕಾಂಗ್ರೆಸ್‌ನ ಅತಿಯಾದ ಹಸ್ತಕ್ಷೇಪವನ್ನು ಇಷ್ಟಪಡುತ್ತಿಲ್ಲ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಉಭಯ ಪಕ್ಷಗಳ ಹೈಕಮಾಂಡ್ ಸದ್ಯಕ್ಕೆ ಸೈಲೆಂಟ್!

ಡಿಎಂಕೆ ನಾಯಕನ ಈ ತೀಕ್ಷ್ಣ ಹೇಳಿಕೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದರೂ, ಇತ್ತ ಕಾಂಗ್ರೆಸ್ ಹೈಕಮಾಂಡ್ ಆಗಲಿ ಅಥವಾ ಅತ್ತ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಉನ್ನತ ನಾಯಕತ್ವವಾಗಲಿ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇದು ಕೇವಲ ಒಬ್ಬ ನಾಯಕನ ವೈಯಕ್ತಿಕ ಹೇಳಿಕೆಯೇ ಅಥವಾ ಡಿಎಂಕೆ ಪಕ್ಷದ ಆಂತರಿಕ ನಿರ್ಧಾರವೇ ಎಂಬ ಗೊಂದಲ ಸೃಷ್ಟಿಯಾಗಿದೆ.

ಗಡಿಬಿಡಿಯಲ್ಲಿ ತಮಿಳುನಾಡು ಕಾಂಗ್ರೆಸ್ ನಾಯಕರು

ಈ ದಿಢೀರ್ ಬೆಳವಣಿಗೆಯಿಂದ ತಮಿಳುನಾಡು ಕಾಂಗ್ರೆಸ್ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವ ರಕ್ಷಣೆಯ ಹೋರಾಟಕ್ಕೆ ತಮಿಳುನಾಡು ಮತ್ತು ಡಿಎಂಕೆ ಪಕ್ಷವೇ ತಮಗೆ ದೊಡ್ಡ ಶಕ್ತಿ ಎಂದು ಕಾಂಗ್ರೆಸ್ ನಂಬಿತ್ತು. ಆದರೆ, ಈಗ ಡಿಎಂಕೆಯ ಪ್ರಮುಖ ನಾಯಕನೇ ರಾಹುಲ್ ಗಾಂಧಿಯವರ ನಾಯಕತ್ವ ಹಾಗೂ ಜಂಟಿ ಹೋರಾಟದ ಕರೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವುದು ಮೈತ್ರಿಕೂಟದ ಭವಿಷ್ಯದ ಮೇಲೆ ಮಂಕು ಕವಿಯುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ಬಿಕ್ಕಟ್ಟು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net