6 ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್ ನಿಷ್ಕ್ರಿಯ:ಆಹಾರ ಇಲಾಖೆ ತೀರ್ಮಾನ- BPL inactive

ಆಹಾರ ಪದಾರ್ಥ ಪಡೆಯದ ಬಿಪಿಎಲ್ ಕಾರ್ಡ್‌ಗಳ ನಿಷ್ಕ್ರಿಯ
ಆಹಾರ ಪದಾರ್ಥ ಪಡೆಯದ ಬಿಪಿಎಲ್ ಕಾರ್ಡ್‌ಗಳ ನಿಷ್ಕ್ರಿಯ
Published on

ಬೆಂಗಳೂರು: ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಯುವ ಉದ್ದೇಶದಿಂದ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಜೋಡಣೆಗೊಳಿಸಲು ಆದೇಶ ಹೊರಡಿಸಿರುವ ಆಹಾರ ಇಲಾಖೆ, 6 ತಿಂಗಳಿಂದ ಆಹಾರ ಪದಾರ್ಥ ಪಡೆಯದ ಬಿಪಿಎಲ್ ಕಾರ್ಡ್‌ಗಳ ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಹಾಗೂ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ಯೋಜನೆಯಡಿ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿಯನ್ನು ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಹಾಗೂ ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ಆಹಾರ ಪದಾರ್ಥವನ್ನು ಉಚಿತವಾಗಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿದೆ. ಆದರೆ, ಅಂದಾಜು ಲಕ್ಷಕ್ಕೂ ಅಧಿಕ ಕಾರ್ಡ್‌ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಹಾಗಾಗಿ, ಇ-ಕೆವೈಸಿ ಮಾಡಿಸುವ ಸಂದರ್ಭದಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳದ ಕಾರ್ಡ್‌ಗಳನ್ನು ಗುರುತಿಸಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಇಲಾಖೆ ಮುಂದಾಗಿದೆ.
ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ 25,91,145 ಅಂತ್ಯೋದಯ ಸದಸ್ಯರು ಮತ್ತು 2,41,73,131 ಬಿಪಿಎಲ್ ಫಲಾನುಭವಿಗಳು ಸೇರಿ ಒಟ್ಟು 2,67,64,276 ಮಂದಿ ಸೆ.30ರೊಳಗೆ ಇಕೆವೈಸಿ ಮಾಡಿಸಬೇಕೆಂದು ಈಗಾಗಲೇ ಇಲಾಖೆ ಆದೇಶಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದುವರೆಗೆ ಅಂದಾಜು 20 ಲಕ್ಷ ಫಲಾನುಭವಿಗಳು ಇಕೆವೈಸಿ ಮಾಡಿಸಿದ್ದಾರೆ. 4 ವರ್ಷಗಳ ಹಿಂದೆ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್‌ಗಳನ್ನು ಪರಿಶೀಲನೆ ಕಾರ್ಯ ನಡೆದಿತ್ತು.ಅದರಂತೆ, ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು.
ಅಂದಾಜು 10 ಲಕ್ಷ ಫಲಾನುಭವಿಗಳು ಮೃತ:
ಕಳೆದ 4 ವರ್ಷದಿಂದ ಕಾರ್ಡ್‌ಗಳಿಗೆ ಆಧಾರ್ ಜೋಡಣೆ ಕಾರ್ಯ ನಡೆದಿರಲಿಲ್ಲ. 4 ವರ್ಷಗಳಲ್ಲಿ ಕನಿಷ್ಠ 10 ಲಕ್ಷ ಫಲಾನುಭವಿಗಳು ಮೃತಪಟ್ಟಿರುವ ಸಾಧ್ಯತೆ ಇದೆ. ಅವರ ಕುಟುಂಬದವರು ಸತ್ತಿರುವ ಫಲಾನುಭವಿಗಳ ಹೆಸರಿನಲ್ಲಿ ರೇಷನ್ ಪಡೆಯುತ್ತಿರುವ ಆರೋಪಗಳಿವೆ. ಹೀಗಾಗಿ, ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ (ಎನ್‌ಎಫ್​​​ಎಸ್‌ಎ) ಪ್ರಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರು ಆಧಾರ್ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂಬ ನಿಯಮ ಇದೆ. ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net