ಮೆಕ್ಸಿಕೋದಲ್ಲಿ ರಕ್ತಸಿಕ್ತವಾದ ಫುಟ್ಬಾಲ್ ಮೈದಾನ: ಮನಬಂದಂತೆ ಗುಂಡಿನ ದಾಳಿ, 11 ಮಂದಿ ಸಾವು | Mexico Massacre
ಮೆಕ್ಸಿಕೋದಲ್ಲಿ ರಕ್ತಸಿಕ್ತವಾದ ಫುಟ್ಬಾಲ್ ಮೈದಾನ: ಮನಬಂದಂತೆ ಗುಂಡಿನ ದಾಳಿ, 11 ಮಂದಿ ಸಾವು
Published on:
Copied
Follow Us
ಮೆಕ್ಸಿಕೋ ಸಿಟಿ: ಕ್ರೀಡಾ ಸ್ಫೂರ್ತಿಯಿಂದ ಕಳೆಗಟ್ಟಿದ್ದ ಫುಟ್ಬಾಲ್ ಮೈದಾನವೊಂದು ಕ್ಷಣಾರ್ಧದಲ್ಲಿ ಸ್ಮಶಾನವಾಗಿ ಮಾರ್ಪಟ್ಟ ಭೀಕರ ಘಟನೆ ಮೆಕ್ಸಿಕೋದ(Mexico Massacre) ಗುವಾನಾಜುವಾಟೊ ಪ್ರಾಂತ್ಯದ ಸಲಾಮಾಂಕಾ ನಗರದಲ್ಲಿ ನಡೆದಿದೆ. ಸಶಸ್ತ್ರಧಾರಿ ದುಷ್ಕರ್ಮಿಗಳು ನಡೆಸಿದ ಈ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಭಾನುವಾರ ಸಂಜೆ ಫುಟ್ಬಾಲ್ ಪಂದ್ಯವೊಂದು ಮುಗಿದ ತಕ್ಷಣ ಈ ಕ್ರೂರ ಕೃತ್ಯ ನಡೆದಿದೆ. ಪಂದ್ಯ ವೀಕ್ಷಿಸಿ ಸಂಭ್ರಮಿಸುತ್ತಿದ್ದ ಜನರ ಗುಂಪಿನ ಮೇಲೆ ಬಂದೂಕುಧಾರಿಗಳು ಏಕಾಏಕಿ ಗುಂಡಿನ ಮಳೆಯನ್ನು ಸುರಿಸಿದ್ದಾರೆ.
ಘಟನೆಯ ಭೀಕರತೆ
ಪಂದ್ಯ ಮುಗಿಸಿ ಆಟಗಾರರು ಮತ್ತು ಪ್ರೇಕ್ಷಕರು ಮೈದಾನದಲ್ಲಿ ಹರಟೆ ಹೊಡೆಯುತ್ತಿದ್ದಾಗ, ಎರಡು ಪಿಕಪ್ ಟ್ರಕ್ಗಳಲ್ಲಿ ಬಂದ ದುಷ್ಕರ್ಮಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ತುತ್ತಾದ 10 ಮಂದಿ ಮೈದಾನದ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಸಂತ್ರಸ್ತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಲ್ಲದೆ, ಗಾಯಗೊಂಡಿರುವ 12 ಜನರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಹಿಂಸಾಚಾರದ ಕೇಂದ್ರಬಿಂದು ಗುವಾನಾಜುವಾಟೊ
ಮೆಕ್ಸಿಕೋದ ಗುವಾನಾಜುವಾಟೊ ಪ್ರಾಂತ್ಯವು ಇತ್ತೀಚಿನ ವರ್ಷಗಳಲ್ಲಿ ಮಾದಕವಸ್ತು ಮಾಫಿಯಾ ಮತ್ತು ಗ್ಯಾಂಗ್ಗಳ ನಡುವಿನ ಸಂಘರ್ಷಕ್ಕೆ ಕುಖ್ಯಾತಿ ಪಡೆದಿದೆ. ಜಲಿಸ್ಕೊ ನ್ಯೂ ಜನರೇಷನ್ (CJNG) ಮತ್ತು ಸಾಂಟಾ ರೋಸಾ ಡಿ ಲಿಮಾ ಕಾರ್ಟೆಲ್ಗಳ ನಡುವಿನ ಪ್ರಾಬಲ್ಯದ ಹೋರಾಟವು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಮಾರಣಹೋಮಗಳಿಗೆ ಕಾರಣವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲಾಮಾಂಕಾ ನಗರದ ಮೇಯರ್ ಸೆಸರ್ ಪ್ರಿಯೆಟೊ, ಈ ದಾಳಿಯನ್ನು ಅತ್ಯಂತ ಹೇಡಿತನದ ಕೃತ್ಯ ಎಂದು ಖಂಡಿಸಿದ್ದಾರೆ. ಅಲ್ಲದೆ, ಫೆಡರಲ್ ಸರ್ಕಾರವು ಮಧ್ಯಪ್ರವೇಶಿಸಿ ನಗರದಲ್ಲಿ ಶಾಂತಿ ಕಾಪಾಡಲು ಸಹಾಯ ಮಾಡಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ತನಿಖೆ ಮತ್ತು ಭದ್ರತೆ
ಘಟನೆಯ ನಂತರ ಮೆಕ್ಸಿಕೋದ ರಾಷ್ಟ್ರೀಯ ಗಾರ್ಡ್ ಮತ್ತು ಸೈನ್ಯವು ಇಡೀ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ. ತನಿಖಾ ಸಂಸ್ಥೆಗಳು ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದು, ದಾಳಿಕೋರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆದರೆ, ಈವರೆಗೆ ಯಾವುದೇ ಬಂಧನವಾಗಿಲ್ಲ.
ಆಟದ ಮೈದಾನದಲ್ಲಿ ನಡೆದ ಈ ಸಾಮೂಹಿಕ ಹತ್ಯೆಯು ಇಡೀ ವಿಶ್ವದ ಗಮನ ಸೆಳೆದಿದ್ದು, ನಾಗರಿಕರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ,(ಏಜೆನ್ಸೀಸ್).