ಉಗ್ರರ ಅಡಗುತಾಣಗಳ ಮೇಲಿನ ಸ್ಫೋಟದ ಸದ್ದು ಇಡೀ ಜಗತ್ತಿಗೇ ಕೇಳಿಸಿದೆ!...ಆಸ್ಟ್ರೇಲಿಯಾ ಮಣ್ಣಿನಲ್ಲಿ ಆಪರೇಷನ್ ಸಿಂಧೂರ ನೆನೆದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮಾರ್ವೆಲ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬೃಹತ್ ಅನಿವಾಸಿ ಭಾರತೀಯರ ಸಮಾವೇಶವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯಗಳು ಇಂದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಮನ್ನಣೆ ಗಳಿಸಿವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಕೈಗೊಂಡಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶದ ಬೆಳೆಯುತ್ತಿರುವ ಸೇನಾ ಸಾಮರ್ಥ್ಯಕ್ಕೆ ಜಗತ್ತಿನೆದುರು ಜೀವಂತ ಸಾಕ್ಷಿಯಾಗಿದೆ ಎಂದು ಇದೇ ವೇಳೆ ಉಲ್ಲೇಖಿಸಿದರು.
ಭಯೋತ್ಪಾದಕ ಅಡಗುದಾಣಗಳ ಮೇಲೆ ನಡೆದ ಸ್ಫೋಟದ ಶಬ್ದಗಳು ವಿಶ್ವದಾದ್ಯಂತ ಪ್ರತಿಧ್ವನಿಸಿದಾಗ, ಉಗ್ರವಾದದ ವಿರುದ್ಧ ಭಾರತದ ದೃಢ ಸಂಕಲ್ಪ ಏನೆಂಬುದನ್ನು ಇಡೀ ಪ್ರಪಂಚವೇ ಕಣ್ಣಾರೆ ಕಂಡಿದೆ. ಉಗ್ರರ ನೆಲೆಗಳ ವಿರುದ್ಧ ಇಂತಹ ನಿರ್ಣಾಯಕ ದಾಳಿ ನಡೆದಾಗ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುವುದು ಸಹಜ ಎಂದಾಗ ಕ್ರೀಡಾಂಗಣದಲ್ಲಿದ್ದ ಸಾವಿರಾರು ಸಭಿಕರಿಂದ ಭಾರಿ ಕರತಾಡನ ಹಾಗೂ ಜಯಘೋಷಗಳು ಮೊಳಗಿದವು. ಭಾರತದ ರಕ್ಷಣಾ ಉಪಕರಣಗಳ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಇಡೀ ಜಗತ್ತು ಇಂದು ಕಣ್ಣಾರೆಯಾಗಿ ವೀಕ್ಷಿಸುತ್ತಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಮೇಕ್ ಇನ್ ಇಂಡಿಯಾ ಮತ್ತು ಜಾಗತಿಕ ಆರ್ಥಿಕತೆ

21ನೇ ಶತಮಾನದ ನವಭಾರತವು 140 ಕೋಟಿ ದೇಶವಾಸಿಗಳ ಆಶೋತ್ತರಗಳ ಬಲದೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸ್ಥಿರವಾಗಿ ಮುನ್ನಡೆಯುತ್ತಿದೆ, ಕಳೆದ 12 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನವು ಜಾಗತಿಕ ಮಟ್ಟದ ಪ್ರಸಿದ್ಧ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ, ನಮ್ಮ ದೇಶದಲ್ಲಿ ತಯಾರಾಗುವ ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೋಮೊಬೈಲ್ ಹಾಗೂ ಔಷಧೀಯ ಉತ್ಪನ್ನಗಳು ಇಂದು ಜಗತ್ತಿನಾದ್ಯಂತ ವಿಸ್ತಾರವಾದ ಮಾರುಕಟ್ಟೆಯನ್ನು ಕಂಡುಕೊಂಡಿವೆ ಎಂದರು.
ಒಂದು ಕನಸು ನನಸಾದಾಗ ಮಾತ್ರ ಮತ್ತೊಂದು ಹೊಸ ಕನಸು ಹುಟ್ಟುತ್ತದೆ, ಒಂದನ್ನು ಸಾಧಿಸಿದಾಗ ಅದಕ್ಕಿಂತ ದೊಡ್ಡದನ್ನು ಸಾಧಿಸುವ ಸಂಕಲ್ಪ ಮೂಡುತ್ತದೆ. ಹೆಚ್ಚು ಬೆಳೆಯಿರಿ, ಹೆಚ್ಚು ಸಾಧಿಸಿ ಎಂಬುದನ್ನು ನಂಬುವ ಭಾರತ ಇದಾಗಿದೆ. ಪ್ರಸ್ತುತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆಯಾಗಿರುವ ಭಾರತ, ಶೀಘ್ರದಲ್ಲೇ ಜಗತ್ತಿನ ಪ್ರಮುಖ ಮೂರು ಆರ್ಥಿಕ ಶಕ್ತಿಗಳ ಸಾಲಿಗೆ ಸೇರ್ಪಡೆಯಾಗುವ ದೃಢ ನಿರ್ಧಾರ ಹೊಂದಿದೆ ಎಂದು ಪ್ರಧಾನಿ ತಿಳಿಸಿದರು.

ತಂತ್ರಜ್ಞಾನ ವಿಪ್ಲವ ಮತ್ತು 6G ಸಿದ್ಧತೆ!...

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅಭೂತಪೂರ್ವ ಪ್ರಗತಿಯನ್ನು ಉಲ್ಲೇಖಿಸಿದ ಮೋದಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಸಂಪೂರ್ಣ ಸ್ವದೇಶಿ ನಿರ್ಮಿತ 6G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲೂ ಶರವೇಗದಲ್ಲಿ ಮುನ್ನುಗ್ಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೆಲ್ಬೋರ್ನ್‌ನಲ್ಲಿ ತಮಗೆ ಹಾಗೂ ಭಾರತೀಯ ನಿಯೋಗಕ್ಕೆ ಸಿಕ್ಕ ಭವ್ಯ ಹಾಗೂ ಅದ್ದೂರಿ ಸ್ವಾಗತಕ್ಕೆ ಅನಿವಾಸಿ ಭಾರತೀಯರಿಗೆ ಮತ್ತು ಆಸ್ಟ್ರೇಲಿಯಾದ ನಾಗರಿಕರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರನ್ನು ಭಾರತದ ಆಪ್ತ ಮಿತ್ರ ಎಂದು ಬಣ್ಣಿಸಿದ ಪ್ರಧಾನಿ, ಇತ್ತೀಚೆಗೆ ಸಿಡ್ನಿಯಲ್ಲಿ ಹಾಗೂ ಈಗ ಮೆಲ್ಬೋರ್ನ್‌ನಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು ಸ್ಮರಿಸಿದರು.
ವಿದೇಶಗಳಲ್ಲಿ ನೆಲೆಸಿದ್ದರೂ ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಆಳವಾದ ಸಂಪರ್ಕ ಕಾಯ್ದುಕೊಂಡಿರುವ ಭಾರತೀಯ ಸಮುದಾಯದ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಸತ್ಯನಾರಾಯಣ ಪೂಜೆ, ಗುರುದ್ವಾರಗಳಲ್ಲಿನ ಅರ್ದಾಸ್ ಪ್ರಾರ್ಥನೆ, ಭರತನಾಟ್ಯ, ಭಂಗ್ರಾ ನೃತ್ಯಗಳು, ಕ್ರಿಕೆಟ್ ಪಂದ್ಯಾವಳಿಗಳು ಹಾಗೂ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಂತಹ ಕಾರ್ಯಕ್ರಮಗಳ ಮೂಲಕ ಭಾರತೀಯ ಪರಂಪರೆಯನ್ನು ವಿದೇಶಿ ಮಣ್ಣಿನಲ್ಲೂ ಜೀವಂತವಾಗಿರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net