ನಿನ್ನೆ ಅವರು, ಇಂದು ನಾವು ಅಷ್ಟೆ!...ಸಿಎಂ ಮಾನ್ ಬೆಂಗಾವಲು ವಾಹನದ ಮೇಲೆ ಮೊಟ್ಟೆ-ಟೊಮೆಟೊ ದಾಳಿಗೆ ಯತ್ನಿಸಿದ ಮಾಜಿ ಸಚಿವ ಬಿಟ್ಟು ಅರೆಸ್ಟ್ | ​Ravneet Singh Bittu

Ravneet Singh Bittu | ಸಿಎಂ ಮಾನ್ ಬೆಂಗಾವಲು ವಾಹನದ ಮೇಲೆ ಮೊಟ್ಟೆ-ಟೊಮೆಟೊ ದಾಳಿಗೆ ಯತ್ನಿಸಿದ ಮಾಜಿ ಸಚಿವ ಬಿಟ್ಟು ಅರೆಸ್ಟ್
Ravneet Singh Bittu | ಸಿಎಂ ಮಾನ್ ಬೆಂಗಾವಲು ವಾಹನದ ಮೇಲೆ ಮೊಟ್ಟೆ-ಟೊಮೆಟೊ ದಾಳಿಗೆ ಯತ್ನಿಸಿದ ಮಾಜಿ ಸಚಿವ ಬಿಟ್ಟು ಅರೆಸ್ಟ್
Published on
ಚಂಡೀಗಢ: ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಗೇಟ್ ಬಳಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಬೆಂಗಾವಲು ಪಡೆಯ ಮುಂದೆ ಪ್ರತಿಭಟನೆ ನಡೆಸಿದ ಮಾಜಿ ಕೇಂದ್ರ ಸಚಿವ ರವನಿತ್​ ಸಿಂಗ್ ಬಿಟ್ಟು (​Ravneet Singh Bittu) ಅವರನ್ನು ಶನಿವಾರ ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಸಾನ್ ಮೇಳಾಕ್ಕಾಗಿ ಸಿಎಂ ಮಾನ್ ಅವರು ಪಿಎಯುಗೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪ್ರತಿಭಟನೆ ವೇಳೆ ಬಿಟ್ಟು ಅವರು ತಮ್ಮೊಂದಿಗೆ ಮೊಟ್ಟೆಗಳು ಮತ್ತು ಟೊಮೆಟೊಗಳನ್ನು ತಂದಿದ್ದರು. ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ನಶಾ ಮುಕ್ತ್ ಪಂಜಾಬ್ ಯಾತ್ರೆಗಾಗಿ ಪಠಾಣ್‌ಕೋಟ್‌ಗೆ ತೆರಳುತ್ತಿದ್ದಾಗ ತಮ್ಮ ಬೆಂಗಾವಲು ಪಡೆಯ ಮೇಲೆ ಮೊಟ್ಟೆ ಹಾಗೂ ಟೊಮೆಟೊಗಳನ್ನು ಎಸೆಯಲಾಗಿದೆ ಎಂದು ಬಿಟ್ಟು ಆರೋಪಿಸಿದ್ದು, ಈ ಕೃತ್ಯಕ್ಕೆ ಮಾನ್ ಸರ್ಕಾರವೇ ಕಾರಣ, ಇಂದು ಆ ಮೊಟ್ಟೆ ಮತ್ತು ಟೊಮೆಟೊಗಳನ್ನು ವಾಪಸ್ ನೀಡಲು ಬಂದಿದ್ದಾಗಿ ತಿಳಿಸಿದರು.
ಪ್ರತಿಭಟನೆಯ ಬಳಿಕ ಮಾತನಾಡಿದ ಬಿಟ್ಟು, ನಿನ್ನೆ ನನ್ನ ಬೆಂಗಾವಲು ಪಡೆಯ ಮೇಲೆ ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆಯಲಾಗಿದೆ. ಇಂದು ನಾನು ಅವುಗಳನ್ನು ವಾಪಸ್ ತಂದಿದ್ದೇನೆ. ಆಪ್​ ಕಾರ್ಯಕರ್ತರು ಬಿಜೆಪಿ ನಾಯಕರು, ರ‍್ಯಾಲಿಗಳು ಮತ್ತು ಯಾತ್ರೆಗಳ ವಿರುದ್ಧ ಪ್ರತಿಭಟನೆ ನಡೆಸುವುದಾದರೆ, ಬಿಜೆಪಿ ಕಾರ್ಯಕರ್ತರು ಕೂಡ ಪಂಜಾಬ್ ಸರ್ಕಾರ ಮತ್ತು ಅದರ ನಾಯಕರ ವಿರುದ್ಧ ಪ್ರತಿಭಟನೆ ನಡೆಸುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲಿದ್ದಾರೆ. ನಾವು ಸುಮ್ಮನೆ ಕೂರುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಪಂಜಾಬ್​ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ಬಿಜೆಪಿ ಮುಂದೆಯೂ ಧ್ವನಿ ಎತ್ತಲಿದ್ದು, ಅಗತ್ಯವಿದ್ದಾಗಲೆಲ್ಲ ಮುಖ್ಯಮಂತ್ರಿಯವರ ಕಾರ್ಯಕ್ರಮಗಳು ಹಾಗೂ ಕಚೇರಿಗಳ ಹೊರಗೆ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಸಂಘಟಿಸಲಿದೆ ಎಂದು ಬಿಟ್ಟು ಸ್ಪಷ್ಟಪಡಿಸಿದರು. ಇದು ಪಂಜಾಬ್ ಸರ್ಕಾರಕ್ಕೆ ನೀಡಿದ ಸ್ಪಷ್ಟ ಸಂದೇಶ ಎಂದ ಬಿಜೆಪಿ ನಾಯಕ, ಪೊಲೀಸ್ ಕ್ರಮದ ಮೂಲಕ ಈ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ನಮ್ಮ ಕಾರ್ಯಕರ್ತರು ಪ್ರತಿಯೊಂದು ಪ್ರತಿಭಟನೆಗೂ ಪ್ರಜಾಸತ್ತಾತ್ಮಕವಾಗಿಯೇ ಉತ್ತರಿಸುತ್ತಾರೆ ಮತ್ತು ಪಂಜಾಬ್ ಜನತೆಯೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಮಾನ್​ ಬೆಂಗಾವಲು ಪಡೆಯ ಮೇಲೆ ಮೊಟ್ಟೆ ಹಾಗೂ ಟೊಮೆಟೊಗಳನ್ನು ಎಸೆಯಲು ಯತ್ನಿಸಿದ್ದಕ್ಕಾಗಿ ರವನಿತ್ ಸಿಂಗ್ ಬಿಟ್ಟು ಅವರನ್ನು ಪೊಲೀಸ್​ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳ ತಿಳಿಸಿದ್ದು, ತಮ್ಮ ಬೆಂಗಾವಲು ಪಡೆಯ ಮೇಲೆ ನಡೆಸಿದ ದಾಳಿಯು ಆಪ್ ಸರ್ಕಾರದ ಭಯೋತ್ಪಾದನೆಯ ಅತ್ಯಂತ ಕೊಳಕು ರೂಪವಾಗಿದೆ ಎಂದು ಆರೋಪಿಸಿ, ಈ ಘಟನೆಗೆ ಮಾನ್​ ಸರ್ಕಾರವೇ ನೇರ ಹೊಣೆ ಎಂದು ಹರಿಹಾಯ್ದಿದ್ದರು.
ಮುಂದುವರೆದು ಮಾತನಾಡಿದ ಬಿಟ್ಟು, ತಮಗೆ ಅಥವಾ ತಮ್ಮೊಂದಿಗೆ ಇರುವ ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯದ ಡಿಜಿಪಿ ಅವರೇ ಜವಾಬ್ದಾರರಾಗಿರುತ್ತಾರೆ ಮತ್ತು ನಿನ್ನೆ ನಡೆದ ಘಟನೆಯನ್ನು ಈಗಾಗಲೇ ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಟ್ಟು!

ಕೇಂದ್ರ ರೈಲ್ವೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿದ್ದ ರವನೀತ್ ಸಿಂಗ್ ಬಿಟ್ಟು ತಮ್ಮ ಸಚಿವ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ಕಳೆದ ಜೂನ್‌ನಲ್ಲಿ ಇವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿತ್ತು. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಾಗೂ ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದ ಸೇವೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಿ ಮೋದಿ ಅವರಿಗೆ ಬಿಟ್ಟು ಧನ್ಯವಾದ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net