ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಜೊತೆಗೆ ಮೈತ್ರಿಗೆ ಬಿಜೆಪಿ ಪರಿಶೀಲನೆ: ಅಮಿತ್ ಶಾ ಹೇಳಿದ್ದೇನು? | Thalapathy Vijay

 ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ದಳಪತಿ ವಿಜಯ್
ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ದಳಪತಿ ವಿಜಯ್
Published on
ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳನ್ನು ಬಲಪಡಿಸುವ ಗುರಿ ಹೊಂದಿರುವ ಬಿಜೆಪಿ, ಹೊಸದಾಗಿ ರಾಜಕಾರಣಕ್ಕೆ ಧುಮಕಿ ರಾಜ್ಯದಲ್ಲಿ ಹವಾ ಸೃಷ್ಟಿಸಿರುವ ದಳಪತಿ ವಿಜಯ್ ಅವರ ನೇತೃತ್ವದ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಗಂಭೀರವಾಗಿ ಪರಿಶೀಲನೆ ನಡೆಸಿದೆ ಎಂದು ಸೋಮವಾರ(ಜ. 05) ವರದಿಯಾಗಿದೆ.
ಕಳೆದ ಎರಡು ದಿನಗಳಿಂದ ತಮಿಳುನಾಡು ರಾಜ್ಯದ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಆಡಳಿತರೂಢ ಡಿಎಂಕೆಯ ಎಲ್ಲಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಉದ್ದೇಶಪೂರ್ವಕವಾಗಿ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿಯವರನ್ನು ಭೇಟಿಯಾಗಿಲ್ಲ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿರುವ ವಿಜಯ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಕೋರ್​​ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. 
ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಅಮಿತ್ ಶಾ ಮಾತನಾಡಿದ್ದು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಹೋರಾಟ ನಡೆಸದೆ, ಗೆಲುವಿನತ್ತ ಗಮನವನ್ನು ಕೇಂದ್ರೀಕರಿಸುವಂತೆ ನಾಯಕರಿಗೆ ಸೂಚಿಸಿದ್ದಾರೆ. ಜೊತೆಗೆ ನೆಲದ ಭಾವನೆ ಮತ್ತು ಮೈತ್ರಿ ಸಾಧ್ಯತೆಗಳ ಬಗ್ಗೆ ಪ್ರತಿಯೊಬ್ಬ ನಾಯಕರಿಂದ ವೈಯಕ್ತಿಕ ಪ್ರತಿಕ್ರಿಯೆಯನ್ನು ಪಡೆದಿದ್ದು, ನಿರ್ಧಾರಗಳು ಭಾವನೆಯಿಂದಲ್ಲ, ಚುನಾವಣಾ ಗಣಿತದಿಂದ ನಡೆಸಲ್ಪಡುತ್ತವೆ. ಅದೇ ರೀತಿ ಚುನಾವಣೆಯೂ ವ್ಯಕ್ತಿತ್ವ ಆಧಾರಿತ ಸ್ಪರ್ಧೆಯಾಗಿರದೆ ಎನ್‌ಡಿಎ ಮತ್ತು ಡಿಎಂಕೆ ನಡುವೆ ಆಗಬೇಕು. ಈ ನಿಟ್ಟಿಯಲ್ಲಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆನ್ನಲಾಗಿದೆ.

ಟಿವಿಕೆ ಜೊತೆ ಕಾಂಗ್ರೆಸ್ ಮೈತ್ರಿ ಊಹಾಪೋಹ

ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಬಿಡಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದ್ದರೂ, ಟಿವಿಕೆ ವಕ್ತಾರ ಫೆಲಿಕ್ಸ್ ಗೆರಾರ್ಡ್, ಜಾತ್ಯತೀತತೆ ಮತ್ತು ಕೋಮುವಾದದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಟಿವಿಕೆ ಸ್ವಾಭಾವಿಕ ಮಿತ್ರರು. ವಿಜಯ್ ಮತ್ತು ರಾಹುಲ್ ಗಾಂಧಿ ಸ್ನೇಹಿತರು, ಕಾಂಗ್ರೆಸ್ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ ತಮಿಳುನಾಡು ಕಾಂಗ್ರೆಸ್ ನಾಯಕತ್ವದೊಳಗಿನ ಆಂತರಿಕ ಹಿತಾಸಕ್ತಿಗಳು ಮಾತುಕತೆಗಳನ್ನು ವಿಳಂಬಗೊಳಿಸಬಹುದು ಎಂದು ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net