ಮುಂಬೈ ಮೇಯರ್ ಹುದ್ದೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ; ರಿತು ತಾವ್ಡೆ ಅಭ್ಯರ್ಥಿ; ಶಿಂಧೆ ಶಿವಸೇನೆಗೆ ಉಪಮೇಯರ್ ಹುದ್ದೆ | Mumbai Mayor

ಬಿಜೆಪಿ ಕಾರ್ಪೋರೇಟರ್ ರಿತು ತಾವ್ಡೆ
ಬಿಜೆಪಿ ಕಾರ್ಪೋರೇಟರ್ ರಿತು ತಾವ್ಡೆ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಅಭ್ಯರ್ಥಿ ಘೋಷಿಸಿದ ಬಿಜೆಪಿ
  • ಮೇಯರ್ ಅಭ್ಯರ್ಥಿಯಾಗಿ ಬಿಜೆಪಿ ಕಾರ್ಪೋರೇಟರ್ ರಿತು ತಾವ್ಡೆ ಹೆಸರು
  • ಮೂರು ಬಾರಿ ಘಾಟ್ಕೋಪರ್ ವಾರ್ಡ್​ನಿಂದ ಗೆದ್ದಿರುವ ರಿತು ತಾವ್ಡೆ
  • ಉಪ ಮೇಯರ್ ಆಗಿ ಶಿಂಧೆ ಶಿವಸೇನೆಯ ಕಾರ್ಪೊರೇಟರ್ ಸಂಜಯ್ ಘಾಡಿ
ಮುಂಬೈ: ತೀವ್ರ ಕೂತುಹಲ ಕೆರಳಿಸಿದ್ದ ದೇಶದ ಅತಿ ಶ್ರೀಮಂತ ಮುಂಬೈ ಮಹಾನಗರ ಪಾಲಿಕೆ ಮೇಯರ್(Mumbai Mayor) ಅಭ್ಯರ್ಥಿ ಆಯ್ಕೆ ವಿಚಾರ, ಕಡೆಗೂ ಅಂತಿಮಗೊಂಡಿದ್ದು ನಿರೀಕ್ಷೆಯಂತೆ ಬಿಜೆಪಿಗೆ ಮೇಯರ್ ಪಟ್ಟ ಹೋಲಿಯುವ ಸಾಧ್ಯತೆಯಿದೆ. ಅಭ್ಯರ್ಥಿಯಾಗಿ ಬಿಜೆಪಿ ಕಾರ್ಪೋರೇಟರ್ ರಿತು ತಾವ್ಡೆ ಹೆಸರನ್ನು ಘೋಷಿಸಲಾಗಿದೆ.
ಶುಕ್ರವಾರ ಸಂಜೆ ಮುಂಬೈ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪಾಲಿಕೆ ಕಾರ್ಪೋರೇಟರ್​ಗಳ ಸಭೆಯಲ್ಲಿ ಮುಂಬೈ ನಗರ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಅಮೀತ್ ಸತಮ್, ಮೂರು ಬಾರಿ ಕಾರ್ಪೋರೇಟರ್ ಆಗಿ ಗೆದ್ದಿರುವ ರಿತು ತಾವ್ಡೆ ಹೆಸರನ್ನು ಘೋಷಿಸಿದ್ದಾರೆ. ಪಕ್ಷದ ಉನ್ನತ ನಾಯಕತ್ವದೊಂದಿಗಿನ ಮಾತುಕತೆ ಬಳಿಕ ರಿತು ಅವರ ಹೆಸರನ್ನು ಘೋಷಿಸಲಾಗಿದೆ. ಶೀಘ್ರದಲ್ಲೇ ಅವರು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಾರಿ ಮುಂಬೈ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಅನುಭವಿ ಮಹಿಳಾ ನಾಯಕಿಯನ್ನು ಪರಿಗಣಿಸಿದೆ. ಘಾಟ್ಕೋಪರ್ ವಾರ್ಡ್​ನಿಂದ ಮೂರು ಬಾರಿ ಗೆದ್ದಿರುವ ರಿತು ತಾವ್ಡೆ, ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಅನುಭವದಲ್ಲಿ ಅವರನ್ನು ಮೇಯರ್ ಹುದ್ದೆಗೆ ಹೈಕಮಾಂಡ್ ಪರಿಗಣಿಸಲಾಗಿದೆ. ಅವರು ಮೇಯರ್ ಆಗಿ ಆಯ್ಕೆಯಾದರೇ 1982-83ರ ಅವಧಿಯ ಪ್ರಭಾಕರ್ ಪೈ ಬಳಿಕ ಮುಂಬೈ ಪಾಲಿಕೆಯಲ್ಲಿ ಎರಡನೇ ಬಿಜೆಪಿ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.

ಉಪ ಮೇಯರ್ ಹುದ್ದೆ ಶಿಂಧೆ ಶಿವಸೇನೆಗೆ

ಏತನ್ಮಧ್ಯೆ ಮೈತ್ರಿ ಧರ್ಮ ಪಾಲನೆಯಲ್ಲಿ ಒಪ್ಪಂದದ ಪ್ರಕಾರ, ಮೇಯರ್ ಹುದ್ದೆ ಬಿಜೆಪಿ ಪಾಲಾದರೆ, ಉಪ ಮೇಯರ್ ಹುದ್ದೆ ಶಿಂಧೆ ಶಿವಸೇನೆಯ ಕಾರ್ಪೊರೇಟರ್ ಸಂಜಯ್ ಘಾಡಿ ಅವರಿಗೆ ಒಲಿದು ಬರುವ ಸಾಧ್ಯತೆ ಇದೆ. ಪಕ್ಷ ಅವರನ್ನು ಉಪಮೇಯರ್ ಹುದ್ದೆಗೆ ನಾಮನಿರ್ದೇಶನ ಮಾಡಿದೆ ಎನ್ನಲಾಗಿದೆ. ಸಂಜಯ್ ಘಾಡಿ ದಹಿಸರ್ ವಾರ್ಡ್​ನಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಾರೆ. ಶಿಂಧೆ ಸೇನೆ ಒಟ್ಟು ನಾಲ್ವರಿಗೆ ಈ ಹುದ್ದೆ ನೀಡಲು ಬಯಸಿದೆ ಎನ್ನಲಾಗಿದೆ.

ಫೆ. 11ರಂದು ಮೇಯರ್ ಚುನಾವಣೆ

ದೇಶದ ಅತಿ ಶ್ರೀಮಂತ ಪಾಲಿಕೆಯಾದ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಫೆ. 11ರಂದು ಮಧ್ಯಾಹ್ನ 12 ಗಂಟೆಗೆ ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ. ಇಷ್ಟು ವರ್ಷ ಆಡಳಿತ ನಡೆಸುತ್ತಿದ್ದ ಅಧಿಕಾರಿಗಳ ಆಡಳಿತ ಕೊನೆಗೊಳ್ಳಲಿದೆ.
ಕಳೆದ ತಿಂಗಳು ನಡೆದಿದ್ದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿತ್ತು. ಕಳೆದ ಮೂವತ್ತು ವರ್ಷಗಳಿಂದ ಠಾಕ್ರೆ ಕುಟುಂಬದ ಶಿವಸೇನೆಯ ಹಿಡಿತದಲ್ಲಿದ್ದ ಮುಂಬೈ ಪಾಲಿಕೆಯನ್ನು ಬಿಜೆಪಿ ಈ ಬಾರಿ ವಶಪಡಿಸಿಕೊಂಡಿದೆ. ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅದರ ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದು ಪಾಲಿಕೆಯಲ್ಲಿ ಬಹುಮತ ಪಡೆದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net