ಅಮೆರಿಕ ನೌಕಾಪಡೆಗೆ ಬಿಗ್ ಶಾಕ್: ಇರಾನ್ ಕ್ಷಿಪಣಿಗಳ ರೇಂಜ್‌ಗೆ ಸಿಲುಕಿತೇ ಅತಿದೊಡ್ಡ ಯುದ್ಧನೌಕೆ? ರಣರಂಗವಾದ ಅರಬ್ಬಿ ಸಮುದ್ರ! USS Abraham Lincoln

ಅಮೆರಿಕ ನೌಕಾಪಡೆಗೆ ಬಿಗ್ ಶಾಕ್: ಇರಾನ್ ಕ್ಷಿಪಣಿಗಳ ರೇಂಜ್‌ಗೆ ಸಿಲುಕಿತೇ ಅತಿದೊಡ್ಡ ಯುದ್ಧನೌಕೆ? ರಣರಂಗವಾದ ಅರಬ್ಬಿ ಸಮುದ್ರ!
ಅಮೆರಿಕ ನೌಕಾಪಡೆಗೆ ಬಿಗ್ ಶಾಕ್: ಇರಾನ್ ಕ್ಷಿಪಣಿಗಳ ರೇಂಜ್‌ಗೆ ಸಿಲುಕಿತೇ ಅತಿದೊಡ್ಡ ಯುದ್ಧನೌಕೆ? ರಣರಂಗವಾದ ಅರಬ್ಬಿ ಸಮುದ್ರ!
Published on
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಸಾಗರಕ್ಕೂ ವ್ಯಾಪಿಸಿದೆ. ಅಮೆರಿಕಾ ನೌಕಾಪಡೆಯ ಎಚ್ಚರಿಕೆಯ ಬೆನ್ನಲ್ಲೇ, ಇರಾನ್ ತನ್ನ ಕರಾವಳಿ ಕ್ರೂಸ್ ಕ್ಷಿಪಣಿಗಳನ್ನು ಅಮೆರಿಕಾದ ಬೃಹತ್ ವಿಮಾನವಾಹಕ ನೌಕೆ USS ಅಬ್ರಹಾಂ ಲಿಂಕನ್(USS Abraham Lincoln) ಕಡೆಗೆ ಹಾರಿಸಿದೆ ಎಂದು ಇರಾನ್ ಸರ್ಕಾರಿ ದೂರದರ್ಶನ ಘೋಷಿಸಿದೆ. ಈ ದಾಳಿಯು ಅಮೆರಿಕಾ ಮತ್ತು ಇರಾನ್ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ.

ಎಚ್ಚರಿಕೆ ನೀಡಿದ ಒಂದೇ ಗಂಟೆಯಲ್ಲಿ ದಾಳಿ!

ಈ ಬಗ್ಗೆ ಮಾಹಿತಿ ನೀಡಿದ್ದ ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹ್ರಾಮ್ ಇರಾನಿ, USS ಅಬ್ರಹಾಂ ಲಿಂಕನ್ ನಮ್ಮ ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಗೆ ಬಂದರೆ ದಾಳಿ ಮಾಡುವುದು ಖಚಿತ ಎಂದು ಎಚ್ಚರಿಸಿದ್ದರು. ಈ ಎಚ್ಚರಿಕೆ ನೀಡಿದ ಕೇವಲ ಒಂದು ಗಂಟೆಯೊಳಗೆ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಇರಾನ್ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ತಿಳಿಸಿದೆ. ಅಮೆರಿಕಾದ ಈ ಬೃಹತ್ ನೌಕೆಯನ್ನು ಇರಾನ್ ನಿರಂತರವಾಗಿ ಕಣ್ಗಾವಲಿನಲ್ಲಿ ಇಟ್ಟಿರುವುದು ಈಗ ಸಾಬೀತಾಗಿದೆ.

ಟ್ರಂಪ್ ಶಾಂತಿ ಮಂತ್ರಕ್ಕೆ ಇರಾನ್ ತಿರುಗೇಟು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್​ ಪೋಸ್ಟ್​ನಲ್ಲಿ, ಇರಾನ್ ಜೊತೆ ಅತ್ಯಂತ ರಚನಾತ್ಮಕ ಮಾತುಕತೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದರು. ಆದರೆ, ಇರಾನ್‌ನ ಸೇನಾ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ನಿಮ್ಮ ಸೋಲನ್ನು ಒಪ್ಪಂದ ಎನ್ನಬೇಡಿ: ಇರಾನ್‌ನ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಕರಿ ಅವರು ಟ್ರಂಪ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಅಮೆರಿಕಾದ ಶಕ್ತಿ ಈಗ ವ್ಯೂಹಾತ್ಮಕ ಸೋಲಾಗಿ ಬದಲಾಗಿದೆ ಎಂದು ಗುಡುಗಿದ್ದಾರೆ.
ಮಾತುಕತೆ ನಡೆದಿಲ್ಲ: ಅಮೆರಿಕಾ ಮತ್ತು ಇರಾನ್ ನಡುವೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ ಎಂದು ಟೆಹ್ರಾನ್ ಮೂಲಗಳು ಸ್ಪಷ್ಟಪಡಿಸಿವೆ. ನಮ್ಮಂತಹವರು ನಿಮ್ಮಂತಹವರ ಜೊತೆ ಎಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಇರಾನ್ ಖಡಕ್ ಆಗಿ ಹೇಳಿದೆ.

48 ಗಂಟೆಗಳ ಅಲ್ಟಿಮೇಟಂ ಮತ್ತು ಅಮೆರಿಕಾದ ಉಲ್ಟಾ ಹೊಡೆತ

ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ನೀಡಿದ್ದ 48 ಗಂಟೆಗಳ ಗಡುವು ಈಗ ಸಡಿಲಗೊಂಡಿದೆ. ಇರಾನ್ ಕೂಡ ಪ್ರತಿಯಾಗಿ ಅಮೆರಿಕಾದ ಮಿತ್ರ ರಾಷ್ಟ್ರಗಳ ಇಂಧನ ಮೂಲಗಳ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದ್ದೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಆದರೆ, ಅಮೆರಿಕಾದ ಈ ಹಿನ್ನಡೆಯನ್ನು ಇರಾನ್ ತನ್ನ ವಿಜಯ ಎಂದು ಸಂಭ್ರಮಿಸುತ್ತಿದೆ.

ಸಾಗರದಲ್ಲಿ ಸ್ಟೆಬಿಲಿಟಿ ಥ್ರೂ ಪವರ್

ಈ ಪ್ರದೇಶದ ಸ್ಥಿರತೆಯನ್ನು ಈಗ ನಮ್ಮ ಸಶಸ್ತ್ರ ಪಡೆಗಳ ಬಲಿಷ್ಠ ಹಸ್ತಗಳು ನಿರ್ಧರಿಸುತ್ತಿವೆ ಎಂದು ಝೋಲ್ಫಾಕರಿ ಹೇಳಿದ್ದಾರೆ. ಇರಾನ್ ಮೇಲೆ ಮಿಲಿಟರಿ ಕ್ರಮ ಕೈಗೊಳ್ಳುವ ಆಲೋಚನೆಯನ್ನು ಅಮೆರಿಕಾ ಸಂಪೂರ್ಣವಾಗಿ ಕೈಬಿಡದ ಹೊರತು ಹಳೆಯ ಸ್ಥಿತಿ ಮರಳುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಮೆರಿಕಾ ತನ್ನ ಆರ್ಥಿಕ ಹಿತಾಸಕ್ತಿ ಮತ್ತು ತೈಲ ಬೆಲೆಗಳಿಗಾಗಿ ಹಪಹಪಿಸುತ್ತಿದ್ದರೆ, ಇರಾನ್ ಮಾತ್ರ ತನ್ನ ಸೇನಾ ಬಲವನ್ನು ಪ್ರದರ್ಶಿಸುತ್ತಿದೆ.

ಇಸ್ರೇಲ್ ಮೇಲೆ ಇದರ ಪರಿಣಾಮವೇನು..?

ಒಂದೆಡೆ ಅಮೆರಿಕ ಯುದ್ಧನೌಕೆಯ ಮೇಲೆ ದಾಳಿಯಾಗಿದ್ದರೆ, ಇತ್ತ ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸುವುದಾಗಿ ಘೋಷಿಸಿದೆ. ಅಮೆರಿಕ ಮತ್ತು ಇರಾನ್ ಸಂಧಾನದ ಹಾದಿಯಲ್ಲಿದ್ದರೆ, ಇಸ್ರೇಲ್ ಮಾತ್ರ ಒಂಟಿಯಾಗಿ ಹೋರಾಡಲು ಸಜ್ಜಾಗಿದೆ. ಪಾಕಿಸ್ತಾನದಂತಹ ದೇಶಗಳ ಮಧ್ಯಸ್ಥಿಕೆಯನ್ನು ಇಸ್ರೇಲ್ ಈಗಾಗಲೇ ತಿರಸ್ಕರಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net