ಕುಡಿದ ಮತ್ತಿನಲ್ಲಿ ಪತಿ, ಹೆರಿಗೆ ನೋವಿನಲ್ಲಿ ಮಹಿಳೆ: ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ಬಿಗ್​​ ಸೆಲ್ಯೂಟ್! Police

ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ಬಿಗ್​​ ಸೆಲ್ಯೂಟ್
ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ಬಿಗ್​​ ಸೆಲ್ಯೂಟ್
Published on

ಪ್ರಮುಖ ಮುಖ್ಯಾಂಶಗಳು

  • ಇಂದಿಗೂ ನಮ್ಮ ಸಮಾಜದಲ್ಲಿ ಪೊಲೀಸರೆಂದರೆ ಒಂದು ರೀತಿಯ ಭಯವಿದೆ
  • ಪೊಲೀಸರ ಬಳಿ ಹೋಗಿ ಮಾತನಾಡಲು ಸಹ ಕೆಲವರು ಹೆದರುತ್ತಾರೆ
  • ಕೆಲ ಪೊಲೀಸರ ದೌರ್ಜನ್ಯದಿಂದಾಗಿ ಜನರಲ್ಲಿ ಆ ಭಾವನೆ ಬಂದು ಬಿಟ್ಟಿದೆ
  • ಆದರೆ, ಕೆಲ ದುಷ್ಟ ಪೊಲೀಸರ ನಡುವೆ ಒಳ್ಳೆಯ ಅಧಿಕಾರಿಗಳು ಕೂಡ ಇರುತ್ತಾರೆ
ಮುಂಬೈ: ಇಂದಿಗೂ ನಮ್ಮ ಸಮಾಜದಲ್ಲಿ ಪೊಲೀಸರೆಂದರೆ ( Police ) ಒಂದು ರೀತಿಯ ಭಯವಿದೆ. ಪೊಲೀಸರ ಬಳಿ ಹೋಗಿ ಮಾತನಾಡಲು ಸಹ ಕೆಲವರು ಹೆದರುತ್ತಾರೆ. ಪೋಲೀಸ್ ಸ್ಟೇಷನ್​ಗೆ ಹೋಗುವುದಕ್ಕಂತೂ ತಂಬಾನೇ ಭಯಪಡುತ್ತಾರೆ. ಏಕೆಂದರೆ, ಕೆಲ ಪೊಲೀಸರ ದೌರ್ಜನ್ಯದಿಂದಾಗಿ ಜನರಲ್ಲಿ ಆ ಭಾವನೆ ಬಂದು ಬಿಟ್ಟಿದೆ. ಬಹುತೇಕ ಸಿನಿಮಾಗಳಲ್ಲಿ ಪೊಲೀಸರ ಬಗ್ಗೆ ನೆಗಿಟಿವ್​ ಆಗಿ ತೋರಿಸಿರುವುದು ಕೂಡ ಆ ಭಾವನೆ ಬೆಳೆಯಲು ಕಾರಣವಾಗಿದೆ. ಆದರೆ, ಕೆಲ ದುಷ್ಟ ಪೊಲೀಸರ ನಡುವೆ ಒಳ್ಳೆಯ ಅಧಿಕಾರಿಗಳು ಕೂಡ ಇರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಇದು ಸಾಬೀತಾಗಿದೆ. ಖಾಕಿಗಳು ಮತ್ತು ಜನರ ನಡುವೆ ಉತ್ತಮ ಸೌಹಾರ್ದ ಸಂಬಂಧ ಸ್ಥಾಪಿಸಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಜನರಲ್ಲಿ ಬೇರೂರಿರುವ ಭಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಆದರೆ, ಪೊಲೀಸರಿಗೂ ಮಾನವೀಯತೆ ಇದೆ, ಕಷ್ಟದಲ್ಲಿರುವವರ ಪರ ನಿಲ್ಲುತ್ತಾರೆ ಎಂಬುದನ್ನು ಸಾಬೀತುಪಡಿಸುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಇತ್ತೀಚೆಗೆ ಇದೇ ವರ್ಗಕ್ಕೆ ಮತ್ತೊಂದು ಘಟನೆ ಸೇರಿದೆ.
ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸ್ ಅಧಿಕಾರಿಯೊಬ್ಬರು ತಾವೇ ಕಾರು ಚಲಾಯಿಸಿ, ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಈ ಘಟನೆ ನಡೆದಿದೆ.
ವೈರಲ್​​ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿ, ನಾನು ಸ್ವಲ್ಪ ಕುಡಿದಿದ್ದೇನೆ. ನನ್ನ ಹೆಂಡತಿ ಗರ್ಭಿಣಿ ಮತ್ತು ಆಕೆಗೆ ಹೆರಿಗೆ ನೋವು ಶುರುವಾಗಿದೆ. ನಾನು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ. ಈಗ ರಾತ್ರಿ 10.30 ಆಗಿದೆ. ಆಸ್ಪತ್ರೆಗೆ ಇನ್ನು ಎರಡು ಕಿ.ಮೀ ದೂರದಲ್ಲಿದೆ. ದಯವಿಟ್ಟು ನನ್ನ ಪತ್ನಿಯ ಪರಿಸ್ಥಿತಿ ನೋಡಿ ಮತ್ತು ನನಗೆ ಹೋಗಲಿ ಬಿಡಿ ಎಂದು ಹೇಳುತ್ತಾನೆ. ಇದೇ ವೇಳೆ ಗರ್ಭಿಣಿಯು ಕೂಡ ಪೊಲೀಸ್​ ಅಧಿಕಾರಿ ಬಳಿ ಮನವಿ ಮಾಡಿಕೊಳ್ಳುವ ದೃಶ್ಯ ವಿಡಿಯೋದಲ್ಲಿ ನೋಡಬಹುದಾಗಿದೆ.
ಆದರೆ, ಪೊಲೀಸ್​ ಅಧಿಕಾರಿ ಮಾತ್ರ ಆತನನ್ನು ಮುಂದೆ ಹೋಗಲು ಬಿಡಲಿಲ್ಲ. ಬದಲಾಗಿ ಕಾರಿನಿಂದ ಕೆಳಗೆ ಇಳಿಯುವಂತೆ ಹೇಳಿದರು. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಆಘಾತವಾಯಿತು. ಕಾರಿನಿಂದ ಇಳಿದ ಆತನನ್ನು ಹಿಂದೆ ಕೂರುವಂತೆ ಪೊಲೀಸ್​ ಅಧಿಕಾರಿ ಹೇಳಿದರು. ಬಳಿಕ ತಾವು ಕಾರನ್ನೇರಿ ಡ್ರೈವರ್​ ಸೀಟಿನಲ್ಲಿ ಕುಳಿತರು. ಬಳಿಕ ಗರ್ಭಿಣಿಯನ್ನು ನೋಡಿ, ನಿಮ್ಮ ಸುರಕ್ಷತೆಗಾಗಿ ನಾವು ಇಲ್ಲಿದ್ದೇವೆ. ನಿಮ್ಮನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವುದು ನಮ್ಮ ಕರ್ತವ್ಯ ಎಂದರು. ಅಲ್ಲದೆ, ಪೊಲೀಸರಿಗೂ ಮಾನವೀಯತೆ ಇದ್ದು, ಈ ರೀತಿ ಜನರಿಗೆ ಸಹಾಯ ಮಾಡುತ್ತಾರೆ ಎಂದು ಸಾರ್ವಜನಿಕರಿಗೆ ತಿಳಿಸಲು ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್​ ಮುಂದುವರಿಸಲು ಅಧಿಕಾರಿ ಆ ವ್ಯಕ್ತಿಯನ್ನು ಕೇಳಿಕೊಂಡರು. ನಂತರ ಕಾರು ಚಲಾಯಿಸಿಕೊಂಡು ಹೋಗಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದರು.
ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ಅಧಿಕಾರಿಯನ್ನು ಮೆಚ್ಚಿ, ಕಾಮೆಂಟ್​ಗಳ ಸುರಿಮಳೆಯಾಗುತ್ತಿದೆ. ಇಲ್ಲಿ ಪೊಲೀಸ್​ ಅಧಿಕಾರಿ ತಮ್ಮ ಕರ್ತವ್ಯವನ್ನು ಮೀರಿ, ಕರುಣೆಯನ್ನು ಆರಿಸಿಕೊಂಡಿದ್ದಾರೆ. ಈ ಗುಣವೇ ಅವರನ್ನು ನಿಜವಾದ ಅಧಿಕಾರಿಯನ್ನು ಮಾಡುತ್ತದೆ ಎಂದು ಹೊಗಳಿ ಕಾಮೆಂಟ್​ ಮಾಡಿದ್ದಾರೆ. ನಿಮಗೊಂದು ಬಿಗ್​ ಸೆಲ್ಯೂಟ್​ ಎಂದು ಕೆಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.
ಇದೇ ಸಮಯದಲ್ಲಿ ಮತ್ತೊಬ್ಬ ನೆಟ್ಟಿಗ, ಪತ್ನಿ ಗರ್ಭಿಣಿಯಾಗಿರುವ ಸಮಯದಲ್ಲಿ ಮದ್ಯಪಾನ ಮಾಡಿದ್ದಕ್ಕಾಗಿ ಆತನನ್ನು ಟೀಕಿಸಿದ್ದಾರೆ. ಈತ ಮಾಡಿದ್ದು ಅನಾಗರಿಕ ಕೆಲಸ. ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಗ, ವಿಶೇಷವಾಗಿ ಆಕೆ ಹೆರಿಗೆಯ ಹತ್ತಿರದಲ್ಲಿದ್ದಾಗ ಯಾರಾದರೂ ಕುಡಿಯುತ್ತಾರಾ? ಇದು ಸಂಪೂರ್ಣವಾಗಿ ಅಸಹ್ಯಕರವಾಗಿದೆ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net