ಬೀಬಿ ಎಚ್ಚರಿಕೆ, ಅಮೆರಿಕ ಸಹಾಯವಿಲ್ಲದೆ ಒಂಟಿಯಾಗ್ತೀರಾ ಎಂದು ಟ್ರಂಪ್​​ ವಾರ್ನಿಂಗ್​!...ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಇಸ್ರೇಲ್ | Israel Iran Conflict

Israel Iran Conflict | ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಇಸ್ರೇಲ್
Israel Iran Conflict | ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಇಸ್ರೇಲ್
Published on
ವಾಷಿಂಗ್ಟನ್/ಟೆಲ್ ಅವಿವ್: ಇರಾನ್ ಮೇಲೆ ನಡೆಸಲು ಉದ್ದೇಶಿಸಿದ್ದ ಭಾರಿ ಪ್ರಮಾಣದ ವೈಮಾನಿಕ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಮಾತು ಕೇಳದಿದ್ದರೆ ಮುಂದಿನ ದಿನಗಳಲ್ಲಿ ಇಸ್ರೇಲ್ ಅಮೆರಿಕದ ಬೆಂಬಲವಿಲ್ಲದೆ ಒಂಟಿಯಾಗಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ, ಇರಾನ್ ಮೇಲಿನ ದಾಳಿಯನ್ನು ಇಸ್ರೇಲ್ ಸದ್ಯಕ್ಕೆ ಕೈಬಿಟ್ಟಿದೆ.
ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಇರಾನ್‌ನ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ನೆತನ್ಯಾಹು ಅವರಿಗೆ ಕರೆ ಮಾಡಿದ ಟ್ರಂಪ್, ಬೀಬಿ (ನೆತನ್ಯಾಹು), ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲದಿದ್ದರೆ ಶೀಘ್ರದಲ್ಲೇ ನೀವು ಒಂಟಿಯಾಗಬೇಕಾಗುತ್ತದೆ (ನಿಮ್ಮ ರಕ್ಷಣೆಗೆ ಅಮೆರಿಕ ಬರುವುದಿಲ್ಲ) ಎಂದು ನೇರವಾಗಿ ಹೇಳಿದ್ದಾರೆ. ಆರಂಭದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದರೂ, ಅಂತಿಮವಾಗಿ ಇರಾನ್ ಕಡೆಯಿಂದ ದಾಳಿ ನಡೆಯದಿದ್ದರೆ ತಾವೂ ದಾಳಿ ಮಾಡುವುದಿಲ್ಲ ಎಂದು ನೆತನ್ಯಾಹು ಒಪ್ಪಿಕೊಂಡಿದ್ದಾರೆ. ತಕ್ಷಣವೇ ತಮ್ಮ ಸೇನಾ ಕಮಾಂಡರ್‌ಗಳಿಗೆ ಕರೆ ಮಾಡಿದ ನೆತನ್ಯಾಹು ದಾಳಿಯನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.

ಸದ್ಯಕ್ಕೆ ನಿಂತ ಯುದ್ಧದ ಕಿಡಿ

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ಇರಾನ್ ಭಾನುವಾರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಟ್ರಂಪ್ ತಡೆಯನ್ನೂ ಮೀರಿ ಇಸ್ರೇಲ್ ಮರುದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇರಾನ್ ಮತ್ತೆ ಕ್ಷಿಪಣಿಗಳನ್ನು ಉಡಾಯಿಸಿತ್ತು. ಆದರೆ, ಸೋಮವಾರದ ಉನ್ನತ ಮಟ್ಟದ ರಾಜತಾಂತ್ರಿಕ ಬೆಳವಣಿಗೆಗಳ ಬಳಿಕ ಉಭಯ ದೇಶಗಳು ಸದ್ಯಕ್ಕೆ ದಾಳಿಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. ಆ ರಂಗದಲ್ಲಿ ಸದ್ಯಕ್ಕೆ ಬೆಂಕಿ ಶಾಂತವಾಗಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ. ಇಸ್ರೇಲ್ ಮತ್ತೆ ಲೆಬನಾನ್ ಮೇಲೆ ದಾಳಿ ಮುಂದುವರಿಸಿದರೆ ತಾವು ಸುಮ್ಮನಿರುವುದಿಲ್ಲ ಎಂದು ಇರಾನ್ ಎಚ್ಚರಿಸಿದ್ದರೆ, ಇರಾನ್ ಏನಾದರೂ ತಪ್ಪು ಹೆಜ್ಜೆ ಇಟ್ಟರೆ ಸಂಪೂರ್ಣ ಶಕ್ತಿಯೊಂದಿಗೆ ತಿರುಗೇಟು ನೀಡುತ್ತೇವೆ ಎಂದು ನೆತನ್ಯಾಹು ಸವಾಲು ಹಾಕಿದ್ದಾರೆ.

ಟ್ರಂಪ್ - ನೆತನ್ಯಾಹು ನಡುವಿನ ರಾಜಕೀಯ ಹಿತಾಸಕ್ತಿಗಳ ಸಂಘರ್ಷ

ಈ ಇಡೀ ವಿದ್ಯಮಾನವು ಅಮೆರಿಕ ಮತ್ತು ಇಸ್ರೇಲ್ ನಡುವಿನ ಆಯಕಟ್ಟಿನ ಹಿತಾಸಕ್ತಿಗಳು ಹೇಗೆ ಭಿನ್ನವಾಗುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ. ವಿಶೇಷವಾಗಿ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಅಗತ್ಯಗಳು ಬೇರೆ ಬೇರೆಯಾಗಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ. ನೆತನ್ಯಾಹು ಇಸ್ರೇಲ್‌ನಲ್ಲಿ ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಈ ಯುದ್ಧ ಹೀಗೆಯೇ ಸಾಗಬೇಕಿದೆ. ಆದರೆ, ಟ್ರಂಪ್ ಅಮೆರಿಕದಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಜಾಗತಿಕವಾಗಿ ತಮ್ಮ ಪ್ರಭಾವ ಸಾಬೀತುಪಡಿಸಲು ಈ ಯುದ್ಧ ತಕ್ಷಣವೇ ನಿಲ್ಲಬೇಕಿದೆ.
ಸದ್ಯಕ್ಕೆ ಅಮೆರಿಕದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಇಸ್ರೇಲ್ ಹಿಂದೆ ಸರಿದಿದ್ದರೂ, ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net