ವರ್ಷಕ್ಕೆ 168 ಗಂಟೆ, 17 ಸಾವಿರ ರೂ. ನಷ್ಟ: ಟ್ರಾಫಿಕ್​ ಜಾಮ್​ನಲ್ಲಿ ವಿಶ್ವದಲ್ಲೇ ಬೆಂಗಳೂರಿಗೆ 2ನೇ ಸ್ಥಾನ! Bengaluru Traffic

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು, ಭಾರತದ ಸಿಲಿಕಾನ್​ ವ್ಯಾಲಿ, ಐಟಿ ಹಬ್​, ಉದ್ಯಾನ ನಗರಿ ಎಂಬೆಲ್ಲ ಬಿರುದು ಪಡೆದಿದೆ
  • ಅದೇ ಬೆಂಗಳೂರು ಒಂದೇ ಒಂದು ವಿಚಾರಕ್ಕೆ ಯಾವಾಗಲೂ ವಿಶ್ವದ ಎದುರು ಕುಖ್ಯಾತಿಗೆ ಗುರಿಯಾಗುತ್ತಲೇ ಇದೆ
  • ಬೆಂಗಳೂರಿಗರನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ ಏಕೈಕ ದೊಡ್ಡ ಸಮಸ್ಯೆ ಎಂದರೆ ಟ್ರಾಫಿಕ್​ ಜಾಮ್​
  • ಇದೀಗ ಬೆಂಗಳೂರು ವಿಶ್ವದಲ್ಲೇ ಸಂಚಾರ ದಟ್ಟಣೆಯಲ್ಲಿ ಎರಡನೇ ಸ್ಥಾನ ಪಡೆದಿದೆ
Bengaluru Traffic : ರಾಜ್ಯ ರಾಜಧಾನಿ ಬೆಂಗಳೂರು, ಭಾರತದ ಸಿಲಿಕಾನ್​ ವ್ಯಾಲಿ, ಐಟಿ ಹಬ್​, ಉದ್ಯಾನ ನಗರಿ ಎಂಬೆಲ್ಲ ಬಿರುದುಗಳ ಮೂಲಕ ಜಗದ್ವಿಖ್ಯಾತಿ ಪಡೆದಿದೆ. ಆದರೆ, ಅದೇ ಬೆಂಗಳೂರು ಒಂದೇ ಒಂದು ವಿಚಾರಕ್ಕೆ ಯಾವಾಗಲೂ ವಿಶ್ವದ ಎದುರು ಕುಖ್ಯಾತಿಗೆ ಗುರಿಯಾಗುತ್ತಲೇ ಇರುತ್ತದೆ. ಆ ವಿಚಾರ ಯಾವುದು ಅಂದರೆ, ಟ್ರಾಫಿಕ್​ ಜಾಮ್​. ಇದು ಬೆಂಗಳೂರಿಗರನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ ಏಕೈಕ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿಕೊಂಡರೆ ಸಾಕು ಒಂದರಿಂದ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿರಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ವಾಹನ ದಟ್ಟನೆ ಇದೆ. ಹೀಗಾಗಿಯೇ ಬೆಂಗಳೂರಿನ ಟ್ರಾಫಿಕ್​ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಎಷ್ಟರಮಟ್ಟಿಗೆ ಅಂದರೆ, ಬೆಂಗಳೂರು ವಿಶ್ವದಲ್ಲೇ ಸಂಚಾರ ದಟ್ಟಣೆಯಲ್ಲಿ ಎರಡನೇ ಸ್ಥಾನ ಪಡೆದಿದೆ.
2025ರಲ್ಲಿ ವಿಶ್ವದಾದ್ಯಂತ ವಿಶ್ಲೇಷಣೆಗೆ ಒಳಪಡಿಸಿದ ಸುಮಾರು 500 ನಗರಗಳಲ್ಲಿ ಬೆಂಗಳೂರು ವಿಶ್ವದ ಎರಡನೇ ಅತ್ಯಂತ ಜನದಟ್ಟಣೆಯ ನಗರವಾಗಿ ಹೊರಹೊಮ್ಮಿದೆ. ಜಾಗತಿಕ ಟ್ರಾಫಿಕ್​ ಟ್ರೆಂಡ್ಸ್​ ಮತ್ತು ಪ್ರಯಾಣದ ಮಾದರಿಗಳನ್ನು ನಿರ್ಣಯಿಸುವ ಮೂಲಕ ತನ್ನ ವಾರ್ಷಿಕ ಸಂಚಾರ ಸೂಚ್ಯಂಕ ಅಥವಾ ಟ್ರಾಫಿಕ್​ ಇಂಡೆಕ್ಸ್​ ಅನ್ನು ಸಂಗ್ರಹಿಸುವ ನೆದರ್‌ಲ್ಯಾಂಡ್ಸ್ ಮೂಲದ ತಂತ್ರಜ್ಞಾನ ಸಂಸ್ಥೆ ಟಾಮ್‌ಟಾಮ್ ಈ ಡೇಟಾವನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೋ ನಗರ ಮೊದಲ ಸ್ಥಾನದಲ್ಲಿದೆ. ಈ ಡೇಟಾ ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ ವಾಹನ ಸವಾರರು 15 ನಿಮಿಷಗಳಲ್ಲಿ ಸರಾಸರಿ 4.2 ಕಿಲೋಮೀಟರ್ ದೂರ ಪ್ರಯಾಣಿಸುತ್ತಾರೆ. ಟ್ರಾಫಿಕ್​ ಜಾಮ್​ನಿಂದ ಕಳೆದು ಹೋಗುತ್ತಿರುವ ಹೆಚ್ಚುವರಿ ಸಮಯದ ಮಟ್ಟವು ಶೇ. 74.4 ಕ್ಕೆ ಏರಿದೆ. 2024 ಕ್ಕೆ ಹೋಲಿಸಿದರೆ ಶೇ. 1.7 ರಷ್ಟು ಹೆಚ್ಚಳ ಕಂಡುಬಂದಿದೆ.
ವರದಿಯ ಪ್ರಕಾರ, ಟ್ರಾಫಿಕ್​ ಜಾಮ್​ನಿಂದಾಗಿ ಬೆಂಗಳೂರಿನ ಜನರು ವರ್ಷಕ್ಕೆ ಸರಾಸರಿ 168 ಗಂಟೆಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸದ ದಿನಗಳಲ್ಲಿ ಪೀಕ್ ಸಮಯದಲ್ಲಿ ದಿನಕ್ಕೆ ಎರಡು ಬಾರಿ 10 ಕಿ.ಮೀ ಪ್ರಯಾಣಿಸುವ ಸಮಯವನ್ನು ಆಧರಿಸಿ ಈ ಅಂಕಿ ಅಂಶವನ್ನು ನೀಡಲಾಗಿದೆ. ಬೆಂಗಳೂರಿಗರು 10 ಕಿ.ಮೀ ಪ್ರಯಾಣಿಸಲು ತೆಗೆದುಕೊಳ್ಳುವ ಸಮಯ 36 ನಿಮಿಷ ಒಂಬತ್ತು ಸೆಕೆಂಡುಗಳಿಗೆ ಏರಿದೆ. ಈ ಅಂಕಿ-ಅಂಶವನ್ನು ಗಮನಿಸಿದರೆ, ಇದು ಹಿಂದಿನ ವರ್ಷಕ್ಕಿಂತ ಎರಡು ನಿಮಿಷ ನಾಲ್ಕು ಸೆಕೆಂಡುಗಳು ಹೆಚ್ಚಿದೆ.
ಇಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ, 2025ರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅತ್ಯಂತ ಕೆಟ್ಟ ದಿನವೆಂದರೆ, ಅದು ಮೇ 17ರ ಶನಿವಾರ, ಈ ದಿನ ಸಂಜೆಯ ಸಮಯದಲ್ಲಿ ಸಂಚಾರ ದಟ್ಟಣೆಯ ಮಟ್ಟವು ಶೇ. 101 ರಷ್ಟು ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ದಿನ, ವಾಹನ ಚಾಲಕರು ಕೇವಲ 2.5 ಕಿ.ಮೀ. ಕ್ರಮಿಸಲು 15 ನಿಮಿಷಗಳನ್ನು ತೆಗೆದುಕೊಂಡರು.
ಅಂದಹಾಗೆ, ಬುಧವಾರ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಹೂಡಿಕೆದಾರರನ್ನು ಆಹ್ವಾನಿಸುವಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರನ್ನು "ಭವಿಷ್ಯದ ನಗರ" ಎಂದು ಬಣ್ಣಿಸಿದ ಬೆನ್ನಲ್ಲೇ ಈ ಸಂಶೋಧನಾ ವರದಿ ಹೊರಬಿದ್ದಿದೆ. ಟ್ರಾಫಿಕ್​ ಜಾಮ್​ ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೆಟ್ರೋ ವಿಸ್ತರಣೆ ಹಾಗೂ ಫ್ಲೈಓವರ್​ ಸೇರಿದಂತೆ ಸಾಕಷ್ಟು ಕ್ರಮಗಳನ್ನು ಅನುಸರಿಸಿದರು ಕೂಡ ಸಂಚಾರ ದಟ್ಟಣೆ ಮಾತ್ರ ಕಡಿಮೆಯಾಗುತ್ತಿಲ್ಲ.

17 ಸಾವಿರ ರೂ. ನಷ್ಟ

ಬೆಂಗಳೂರಿಗರು ಟ್ರಾಫಿಕ್​ ಕಾರಣದಿಂದಾಗಿ ವರ್ಷಕ್ಕೆ 168 ದಿನಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನೆ ಹಣಕಾಸಿನ ವಿಚಾರದಲ್ಲಿ ನೋಡಿದಾಗ, ಬೆಂಗಳೂರು ನಗರದ ಒಬ್ಬ ವ್ಯಕ್ತಿಯ ಸರಾಸರಿ ವಾರ್ಷಿಕ ಆದಾಯ ಸುಮಾರು 8.93 ಲಕ್ಷ ರೂಪಾಯಿ. ಇದರರ್ಥ ವಾರಕ್ಕೆ ಸುಮಾರು 17,000 ರೂ. ಆದಾಯ ಬರುತ್ತದೆ. ಹೀಗಾಗಿ, ಬೆಂಗಳೂರಿನ ಸಾಮಾನ್ಯ ನಿವಾಸಿ ಪ್ರತಿ ವರ್ಷ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಮೂಲಕ ಸುಮಾರು 17,000 ರೂ. ಕಳೆದುಕೊಳ್ಳುತ್ತಾನೆ. ಇದು ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ನ ವೆಚ್ಚಕ್ಕೆ ಸಮಾನವಾಗಿರುತ್ತದೆ.
ಇನ್ನುಳಿದಂತೆ ಈ ಪಟ್ಟಿಯಲ್ಲಿ ಭಾರತದ ಪುಣೆ ಐದನೇ ಸ್ಥಾನದಲ್ಲಿದರೆ, ಮುಂಬೈ 18 ನೇ ಸ್ಥಾನದಲ್ಲಿದೆ. ಪುಣೆ ಗಂಟೆಗೆ ಸರಾಸರಿ 18 ಕಿ.ಮೀ ವೇಗವನ್ನು ದಾಖಲಿಸಿದರೆ, ಮುಂಬೈ 20.8 ಕಿ.ಮೀ ವೇಗದೊಂದಿಗೆ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ. ಆದಾಗ್ಯೂ, ಭಾರತದ ಎಲ್ಲೆಡೆ ಸಂಚಾರ ದಟ್ಟಣೆ ಹದಗೆಡುತ್ತಿಲ್ಲ ಎಂಬುದನ್ನು ಈ ವರದಿ ಗಮನಿಸಿದೆ. 2025 ರಲ್ಲಿ, ಮುಂಬೈ, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ಜಾಗತಿಕವಾಗಿ ಹಲವಾರು ನಗರಗಳಲ್ಲಿ ಸಂಚಾರ ಹರಿವು ಸುಧಾರಣೆ ಕಂಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net