ಮಮತಾ ಬ್ಯಾನರ್ಜಿ ಸೇರಿ 22 ಸಚಿವರ ಮನೆಗೆ; ಕೇಸರಿ ಮಯವಾಯಿತೇ ಬಂಗಾಳದ ರಾಜಕೀಯ ಭೂಪಟ..? | West Bengal Election

 West Bengal Election | ಮಮತಾ ಬ್ಯಾನರ್ಜಿ ಸೇರಿ 22 ಸಚಿವರ ಮನೆಗೆ
West Bengal Election | ಮಮತಾ ಬ್ಯಾನರ್ಜಿ ಸೇರಿ 22 ಸಚಿವರ ಮನೆಗೆ
Published on
ಕೊಲ್ಕತ್ತಾ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ದಶಕಗಳ ಕಾಲ ರಾಜ್ಯವನ್ನು ಆಳಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾರಿ ಮುಖಭಂಗ ಅನುಭವಿಸಿದ್ದು, ಭಾರತೀಯ ಜನತಾ ಪಕ್ಷವು ಬೃಹತ್​ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮೂಲಕ ಬಂಗಾಳದಲ್ಲಿ ದೀದಿಯ 15 ವರ್ಷಗಳ ಸುದೀರ್ಘ ಸೋಮವಾರ (ಮೇ-4) ಆಳ್ವಿಕೆಗೆ ತೆರೆ ಬಿದ್ದಿದೆ.
ಒಟ್ಟು 293 ಸ್ಥಾನಗಳ ಪೈಕಿ ಬಿಜೆಪಿ 206 ಕ್ಷೇತ್ರಗಳಲ್ಲಿ ಜಯಶಾಲಿಯಾಗುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ. ಮಮತಾ ಬ್ಯಾನರ್ಜಿ ಭದ್ರಕೋಟೆಯಾಗಿದ್ದ ಭಬಾನಿಪುರದಲ್ಲಿ ಸ್ವತಃ ಮಮತಾ ಅವರೇ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿರುವುದು ಈ ಚುನಾವಣೆಯ ದೊಡ್ಡ ಅಚ್ಚರಿಗಳಲ್ಲೊಂದು. ಕೇವಲ ಮಮತಾ ಮಾತ್ರವಲ್ಲದೆ, ಅವರ ಸಂಪುಟದ ಪ್ರಭಾವಿ 22 ಸಚಿವರು ಕೂಡ ತಮ್ಮ ಕ್ಷೇತ್ರಗಳಲ್ಲಿ ಧೂಳೀಪಟವಾಗಿದ್ದಾರೆ.

ಸೋತ ಪ್ರಮುಖ ಸಚಿವರು

ಜನಾದೇಶದ ಅಲೆಗೆ ಸಿಲುಕಿ ಸ್ಥಾನ ಕಳೆದುಕೊಂಡ ಪ್ರಮುಖ ಸಚಿವರ ಪಟ್ಟಿ ಹೀಗಿದೆ: ಮೊಲೊಯ್ ಘಾಟಕ್, ಅರೂಪ್ ಬಿಸ್ವಾಸ್, ಉಜ್ಜಲ್ ಬಿಸ್ವಾಸ್, ಮಾನಸ್ ರಂಜನ್ ಭುನಿಯಾ, ಸ್ನೇಹಶಿಶ್ ಚಕ್ರವರ್ತಿ, ಬಂಕಿಮ್ ಚಂದ್ರ ಹಜ್ರಾ, ಡಾ. ರತ್ನಾ ಡೇ ನಾಗ್, ಶಶಿ ಪಂಜಾ, ಉದಯನ್ ಗುಹಾ, ಸ್ವಪನ್ ದೇಬನಾಥ್, ಸಿದ್ದಿಕುಲ್ಲಾ ಚೌಧರಿ, ಪ್ರದೀಪ್ ಮಜುಂದಾರ್, ಎಂ.ಡಿ. ಗುಲಾಮ್ ರಬ್ಬಾನಿ, ಬೆಚರಮ್ ಮನ್ನಾ, ಸಂಧ್ಯಾ ರಾಣಿ ಟುಡು, ಚಂದ್ರಿಮಾ ಭಟ್ಟಾಚಾರ್ಯ, ಬುಲು ಚಿಕ್ ಬರೈಕ್, ಸುಜಿತ್ ಬೋಸ್, ಇಂದ್ರನೀಲ್ ಸೇನ್, ಬಿರ್ಬಹಾ ಹನ್ಸ್‌ಡಾ, ಸತ್ಯಜಿತ್ ಬರ್ಮನ್ ಮತ್ತು ಶ್ರೀಕಾಂತ ಮಹಾತಾ.
ಈ ಬಾರಿಯ ಚುನಾವಣೆಯು ಬಂಗಾಳದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಭೂತಪೂರ್ವ ಜನಜಾಗೃತಿಗೆ ಸಾಕ್ಷಿಯಾಗಿದ್ದು, ಎರಡು ಹಂತಗಳಲ್ಲೂ ಶೇಕಡಾ 90ಕ್ಕಿಂತ ಹೆಚ್ಚು ಮತದಾನವಾಗಿದೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದ್ದು, ಭಾರಿ ಸಂಖ್ಯೆಯಲ್ಲಿ ಮತದಾರರು ಹೊರಬಂದಿದ್ದು ಬಿಜೆಪಿಯ ಪರವಾದ ಅಲೆಗೆ ಮತ್ತು ಟಿಎಂಸಿ ವಿರುದ್ಧದ ತೀವ್ರ ಆಡಳಿತ ವಿರೋಧಿ ಭಾವನೆಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಇನ್ನು ಮುರ್ಷಿದಾಬಾದ್‌ನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಹುಮಾಯೂನ್ ಕಬೀರ್ ಎರಡರಲ್ಲೂ ಜಯಗಳಿಸಿದ್ದು, ನಿಯಮದಂತೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಒಟ್ಟಾರೆಯಾಗಿ, 2026ರ ಈ ಫಲಿತಾಂಶವು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಏಕಸ್ವಾಮ್ಯದ ಅಂತ್ಯವನ್ನು ಸಾರಿದ್ದು, ಬಿಜೆಪಿ ನೇತೃತ್ವದ ಹೊಸ ರಾಜಕೀಯ ಯುಗಕ್ಕೆ ನಾಂದಿ ಹಾಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net