ರಾಹುಲ್ ಮೌನವೇ ನನ್ನ ನಿರ್ಗಮನಕ್ಕೆ ಕಾರಣ ಎಂದ ಬೋರಾ..ಇದು ಬಿಜೆಪಿ ಸೇರುವವರ ಖಾಯಂ ಸ್ಕ್ರಿಪ್ಟ್ ಅಂದ್ರು ಗೊಗೊಯ್! | Bhupen Borah

Bhupen Borah | ಭೂಪೇನ್ ಕುಮಾರ್ ಬೋರಾ
Bhupen Borah | ಭೂಪೇನ್ ಕುಮಾರ್ ಬೋರಾ
Published on
ದಿಸ್ಪೂರ್​​:​ ಅಸ್ಸಾಂ ಕಾಂಗ್ರೆಸ್​​ನ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಫೆಬ್ರವರಿ 22 ರಂದು ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬೋರಾ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಂತಾಗಿದ್ದು, ಕಮಲ ಹಿಡಿಯುವುದು ಪಕ್ಕಾ ಆಗಿದೆ. ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆ ಎಂದು ನೋಡಲಾಗುತ್ತಿದೆ.
ರಾಜೀನಾಮೆ ಬಳಿಕ ತಮ್ಮ ಹಳೆಯ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಬೋರಾ, ತಮ್ಮ 32 ವರ್ಷಗಳನ್ನು ಪಕ್ಷಕ್ಕಾಗಿ ಸವೆಸಿದ್ದು, ಆದರೆ ಗೌರವ್ ಗೊಗೊಯ್ ಮುಂದೆ ತಮ್ಮನ್ನು ಕಡೆಗಣಿಸಲಾಗಿದ್ದು, ಈ ಬಗ್ಗೆ ರಾಹುಲ್ ಗಾಂಧಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

ಬೋರಾ ಹೇಳಿದ್ದೇನು..?

ನಾನು ಕಾಂಗ್ರೆಸ್ ಪಕ್ಷಕ್ಕೆ 32 ವರ್ಷಗಳನ್ನು ನೀಡಿದೆ, ಪಕ್ಷ ನನ್ನನ್ನು ಶಾಸಕ ಸ್ಥಾನದಿಂದ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದೆ. 2021 ರಲ್ಲಿ ನಾನು ಅಧ್ಯಕ್ಷನಾದಾಗ, ಕಾಂಗ್ರೆಸ್ ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ನಾನು ಮೈತ್ರಿ ಮುರಿದೆ. ಇಂಡಿಯಾ ಮೈತ್ರಿಕೂಟ ರಚನೆಯಾಗುವ ಮೊದಲು, ನಾನು 16 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡೆ ಎಂದರು.
ಇತ್ತೀಚಿನ ಉಪಚುನಾವಣೆಯಲ್ಲಿ ಸಿಪಿಐ(ಎಂಎಲ್) ಪಕ್ಷಕ್ಕೆ ನೀಡಬೇಕಿದ್ದ ಸೀಟನ್ನು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಸದಸ್ಯರೇ ಅಲ್ಲದ ವ್ಯಕ್ತಿಗೆ ನೀಡಲಾಯಿತು. ಈ ತಪ್ಪು ನಿರ್ಧಾರದಿಂದಾಗಿ ಪಕ್ಷವು ಸೋಲನ್ನು ಅನುಭವಿಸಬೇಕಾಯಿತು. ಇಂತಹ ನಿರ್ಧಾರಗಳ ಹಿಂದೆ ಗೌರವ್ ಗೊಗೊಯ್ ಅವರ ಪ್ರಭಾವವಿತ್ತು ಎಂಬುದು ಬೋರಾ ಅವರ ಆರೋಪ. ಫೆಬ್ರವರಿ 9 ರಂದು, ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ವೀಡಿಯೊ ಕಾನ್ಫರೆನ್ಸ್ ನಡೆಯಿತು ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕರು ಮತ್ತೆ ಮೈತ್ರಿಕೂಟ ರಚಿಸಲು ನನ್ನನ್ನು ಕೇಳಿಕೊಂಡರು, ಅದರಂತೆ ನಾನು ನನ್ನ ಕೆಲಸ ಆರಂಭಿಸಿದೆ, ಆದರೆ ಫೆಬ್ರವರಿ 13ರಂದು ಗೌರವ್ ಗೊಗೊಯ್ ಭೂಪೇನ್ ಬೋರಾ ಅವರು ಮೈತ್ರಿ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು, ಈ ರೀತಿ ಎಲ್ಲರ ಮುಂದೆ ತಮ್ಮನ್ನು ಸುಳ್ಳುಗಾರನಂತೆ ಬಿಂಬಿಸಿದ್ದು ಅಪಮಾನ ತಂದಿದೆ ಎಂದು ಬೋರಾ ಆರೋಪಿಸಿದ್ದಾರೆ.

ರಾಹುಲ್​ ಮೌನ

ತಮಗೆ ಉಂಟಾದ ಅವಮಾನದ ಬಗ್ಗೆ ಮತ್ತು ಪಕ್ಷದ ಆಂತರಿಕ ಕಲಹದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಿಖಿತವಾಗಿ ಮತ್ತು ಫೋನ್ ಮೂಲಕ ತಿಳಿಸಿದರು ಕೂಡ ಹೈಕಮಾಂಡ್‌ನಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ನನ್ನ ನೋವನ್ನು ಕೇಳುವವರೇ ಇಲ್ಲದ ಮೇಲೆ ಪಕ್ಷದಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ ಎಂದು ಬೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರಲು ಇದೊಂದು ನೆಪ ಎಂದ ಗೊಗೊಯ್

ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಗೊಗೊಯ್, ಬೋರಾ ಬಿಜೆಪಿ ಸೇರಲು ನೆಪ ಹೇಳುತ್ತಿದ್ದಾರೆ ಎಂದರು.
ಯಾರಾದರೂ ಬಿಜೆಪಿಗೆ ಸೇರಲು ನಿರ್ಧರಿಸಿದರೆ ಅವರಿಗೆ ಒಂದು ಸ್ಕ್ರಿಪ್ಟ್ ನೀಡಲಾಗುತ್ತದೆ ಮತ್ತು ಅದನ್ನೇ ಓದಬೇಕೆಂದು ನಿರೀಕ್ಷಿಸಲಾಗುತ್ತದೆ. ಅಸ್ಸಾಂನ ಜನರು ಈ ಬೆಳವಣಿಗೆಯಿಂದ ಆಶ್ಚರ್ಯ ಪಡುತ್ತಿದ್ದು, ಅವರು ಕಾಂಗ್ರೆಸ್ ಪಕ್ಷದೊಳಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಿಜೆಪಿ ವಿರುದ್ಧ ಹೋರಾಡುತ್ತಿರುವ ಇನ್ನೊಂದು ಪಕ್ಷವನ್ನು ನೀವು ಏಕೆ ಸೇರಲಿಲ್ಲ ಎಂದು ಪ್ರಶ್ನಿಸಿದರು?.
ಬಿಜೆಪಿಯನ್ನು ವಿರೋಧಿಸುತ್ತಿರುವ ಅನೇಕ ರಾಜಕೀಯ ಪಕ್ಷಗಳಿವೆ., ಹೀಗಿದ್ದಾಗ ರಾಜೀನಾಮೆ ನೀಡಿದ ಕೇವಲ ಒಂದು ದಿನದೊಳಗೆ ನೀವು ಹಿಮಂತ ಬಿಸ್ವಾ ಶರ್ಮಾರೊಂದಿಗೆ ಏಕೆ ಕೈಕುಲುಕಿದ್ದೀರಿ? ಎಂದು ಗೊಗೊಯ್​ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net