Himanta Sarma | ರಾಹುಲ್​ ಗಾಂಧಿ ಬಿಜೆಪಿಯ ಸ್ಟಾರ್​ ಪ್ರಚಾರಕ...ಎಲ್ಲಾ ಪಂದ್ಯದಲ್ಲಿ ಶತಕ ಬಾರಿಸಲು ಸಾಧ್ಯವಿಲ್ಲ ಅಂದಿದ್ದೇಕೆ ಹಿಮಂತ್​ ಶರ್ಮಾ..?

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಹುಲ್​ ಗಾಂಧಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಹುಲ್​ ಗಾಂಧಿ
Published on
ದಿಸ್ಪುರ್: ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುವುದರಿಂದ ಕಾಂಗ್ರೆಸ್​ ಪಕ್ಷದ ಬೆಳವಣಿಗೆಗಿಂತ, ಹಿನ್ನಡೆಯಾಗಿದ್ದೇ ಹೆಚ್ಚು, ಅದಕ್ಕೆ ಇತ್ತೀಚಿನ ಬಿಹಾರ ಮಹಾಘಟಬಂಧನ್ ಸೋಲು ತಾಜಾ ಉದಾಹರಣೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
ಅಜೆಂಡಾ ಆಜ್‌ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶರ್ಮಾ, ನಾನು ರಾಹುಲ್​ ಗಾಂಧಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಚುನಾವಣೆ ಬಂದಾಗ ಅವರು ಎರಡು, ನಾಲ್ಕು ತಿಂಗಳು ನಮ್ಮ ರಾಜ್ಯಕ್ಕೆ ಭೇಟಿ ನೀಡಲಿ ಎಂದು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ಆಗ ಕಾಂಗ್ರೆಸ್ ಬೆಂಬಲಿಗರು ಸಹ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್​ರನ್ನು ಬಿಜೆಪಿಯ ಅತಿದೊಡ್ಡ ಪ್ರಚಾರಕ ಎಂದು ಕರೆದಿರುವ ಅಸ್ಸಾಂ ಸಿಎಂ, ಅವರು ಆಗಾಗ್ಗೆ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಹಾಯವಾಗುವ ಬದಲು ಹಾನಿಯಾಗುತ್ತದೆ ಎಂದರು.

ವೈಯಕ್ತಿಕ ದ್ವೇಷವಿಲ್ಲ... ಕೇವಲ ರಾಜಕೀಯ.

ರಾಹುಲ್​ ಗಾಂಧಿ ವಿರುದ್ಧದ ಟೀಕೆಗಳು ವೈಯಕ್ತಿಕ ಘಟನೆಗಳಿಂದಾಗಿ ಆರಂಭವಾಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಾ, ನಗುತ್ತಾ, ನನ್ನ ಮುಖದಲ್ಲಿ ನಿಮಗೆ ಏನಾದರೂ ಕಹಿ ಕಾಣುತ್ತಿದೆಯೇ? ನಾನು ಇದನ್ನು ಈ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ, ಅವರದು ನನ್ನದು ಕೇವಲ ರಾಜಕೀಯ ಹಗೆ ಎಂದು ಹೇಳಿದರು.
ಬಿಹಾರ ಚುನಾವಣಾ ಫಲಿತಾಂಶಗಳನ್ನು ಉದಾಹರಣೆಯಾಗಿ ನೀಡಿದ ಅವರು, ತೇಜಸ್ವಿ ಯಾದವ್​ರಂತಹ ನಾಯಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ರಾಹುಲ್​ ಹಸ್ತಕ್ಷೇಪ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಿರುವುದಾಗಿ ಅಭಿಪ್ರಾಯಪಟ್ಟುರು.

ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ..

ಅಸ್ಸಾಂನ ಜನರು ನನ್ನನ್ನು ಜೈಲಿಗೆ ಹಾಕಬಹುದು ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು ತಳ್ಳಿಹಾಕಿದ ಅಸ್ಸಾಂ ಸಿಎಂ, ಯಾರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದೇ ಎಂದು ಪ್ರಶ್ನಿಸಿದರು. ಅವರಿಗೆ ಕಾನೂನು ತಿಳಿದಿದೆಯೇ? ಭಾರತದಲ್ಲಿ ಯಾವುದೇ ಸಚಿವರು ಯಾರನ್ನೂ ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ, ಪೊಲೀಸರಿಗೂ ಇದು ಸಾಧ್ಯವಿಲ್ಲ. ರಾಹುಲ್ ಐಪಿಎಸ್ ಅಧಿಕಾರಿಯಾಗಲು ಅಧ್ಯಯನ ಮಾಡಿಲ್ಲ, ಆದರೂ ಪೊಲೀಸ್ ಇನ್ಸ್‌ಪೆಕ್ಟರ್ ಆಗುವುದಂತೂ ಸತ್ಯ ಎಂದು ಕಿಚಾಯಿಸಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾ, ರಾಜಕಾರಣಿಗಳಲ್ಲ, ನ್ಯಾಯಾಂಗವು ಅಂತಹ ವಿಷಯಗಳನ್ನು ನಿರ್ಧರಿಸುತ್ತದೆ ಎಂದರು.

ಎಲ್ಲಾ ಪಂದ್ಯದಲ್ಲಿ ಶತಕ ಬಾರಿಸಲು ಸಾಧ್ಯವಿಲ್ಲ..

ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವುಗಳ ಬಗ್ಗೆ ಮಾತನಾಡಿದ ಶರ್ಮಾ, ಸಚಿನ್ ತೆಂಡೂಲ್ಕರ್ ಕೂಡ ಪ್ರತಿ ಪಂದ್ಯದಲ್ಲೂ ಶತಕ ಗಳಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ಶೂನ್ಯಕ್ಕೆ ಔಟಾಗುತ್ತಾರೆ. ರಾಹುಲ್‌ಗೆ ಒಂದು ಅಥವಾ ಎರಡು ಬಾರಿ ಅವಕಾಶ ಸಿಗುತ್ತದೆ ಎಂದು ಕ್ರಿಕೆಟ್ ಮತ್ತು ಲಾಟರಿಗಳಿಗೆ ಹೋಲಿಕೆ ಮಾಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net