ನಾವು ನಿಜವಾಗಿಯೂ ಒಟ್ಟಾಗಿದ್ದೇವಾ..? 23 ಶಾಸಕರು ಸಭೆಗೆ ಗೈರಾಗಿದ್ದಕ್ಕೆ ಭಾವುಕರಾದ ಉದ್ಧವ್ ಠಾಕ್ರೆ! | Uddhav Thackeray

 Uddhav Thackeray | ಉದ್ಧವ್ ಠಾಕ್ರೆ
Uddhav Thackeray | ಉದ್ಧವ್ ಠಾಕ್ರೆ
Published on
Uddhav Thackeray: ಮಹಾರಾಷ್ಟ್ರದ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ (MVA) ಒಪ್ಪಂದವು ಮುರಿದುಬೀಳುವ ಹಂತ ತಲುಪಿದೆಯೇ..? ಹೌದು ಎನ್ನುತ್ತಿವೆ ಸದ್ಯದ ರಾಜಕೀಯ ಬೆಳವಣಿಗೆಗಳು. ಬುಧವಾರ ಸಂಜೆ ನಡೆದ ಮೈತ್ರಿಕೂಟದ ಅತ್ಯಂತ ಪ್ರಮುಖ ಕಾರ್ಯತಂತ್ರದ ಸಭೆಯಿಂದ 60 ಶಾಸಕರ ಪೈಕಿ 23 ಶಾಸಕರು ದೂರ ಉಳಿದಿರುವುದು ಇಂತಹದೊಂದು ದಟ್ಟ ಶಂಕೆಗೆ ಕಾರಣವಾಗಿದೆ.
ಈ ಸಭೆಗೆ ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ ಮತ್ತು ಹಿರಿಯ ನಾಯಕ ಜಯಂತ್ ಪಾಟೀಲ್ ಅವರಂತಹ ಘಟಾನುಘಟಿ ನಾಯಕರೇ ಗೈರಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಇವರಿಬ್ಬರು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇದಷ್ಟೇ ಅಲ್ಲದೆ, ಕಾಂಗ್ರೆಸ್‌ನ ಪ್ರಮುಖ ನಾಯಕರಾದ ನಾನಾ ಪಟೋಲೆ ಮತ್ತು ವಿಜಯ್ ವಾಡೆಟ್ಟಿವಾರ್ ಕೂಡ ಈ ಸಭೆಯಲ್ಲಿ ಕಾಣಿಸಿಕೊಂಡಿಲ್ಲ. ವಾಡೆಟ್ಟಿವಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಇನ್ನು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಮತ್ತು ಠಾಕ್ರೆ ಬಣದ ಸಂಜಯ್ ರಾವತ್ ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು.

ನಾವು ನಿಜವಾಗಿಯೂ ಜೊತೆಯಾಗಿದ್ದೇವಾ..? ಉದ್ಧವ್ ಠಾಕ್ರೆ ಭಾವುಕ ಪ್ರಶ್ನೆ

ಕಳೆದ ವಾರವಷ್ಟೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಆರು ಜನ ಸಂಸದರು ಬಂಡಾಯವೆದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡಿದ್ದರು. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಉದ್ಧವ್ ಪಕ್ಷದಲ್ಲಿ ಈ ರೀತಿ ಬಿರುಕುಂಟಾಗಿರುವುದು ಮೈತ್ರಿಕೂಟದ ಭವಿಷ್ಯದ ಮೇಲೂ ಮಂಕು ಕವಿಯುವಂತೆ ಮಾಡಿದೆ. ಸಭೆಯಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ, ನಾವು ಮೈತ್ರಿಕೂಟವಾಗಿ ದೊಡ್ಡ ಶಕ್ತಿಯಾಗಿದ್ದೇವೆ ನಿಜ. ಆದರೆ ನಾವು ನಿಜವಾಗಿಯೂ ಒಟ್ಟಾಗಿದ್ದೇವಾ? ಸದನದಲ್ಲಿ ಮಹಾ ವಿಕಾಸ್ ಅಘಾಡಿಯಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುತ್ತಿದ್ದೇವಾ?" ಎಂದು ಮೈತ್ರಿ ನಾಯಕರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಹೋಗುವವರು ಹೋಗಲಿ, ಸದ್ಯ ನಮ್ಮೊಂದಿಗೆ ಯಾರಿದ್ದಾರೋ ಅವರ ಮೇಲೆ ಗಮನ ಹರಿಸೋಣ ಎಂದು ನಾಯಕರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಈ ಕುರಿತು ಪ್ರತಿಕ್ರಿಯಿಸಿದ ಉದ್ಧವ್ ಪುತ್ರ ಆದಿತ್ಯ ಠಾಕ್ರೆ, ನಿನ್ನೆಯ ಸಭೆಗೆ ಗೈರಾದ ಶಾಸಕರು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಪವಾರ್ ಸಾಹೇಬರು ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಮ್ಮ ರಾಜಕೀಯ ಕಾರ್ಯತಂತ್ರವನ್ನು ನಾನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮೂರು ದಿನಗಳ ಹಿಂದಷ್ಟೇ ಆರಂಭವಾಗಿರುವ ಮಳೆಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ಈ ಸಭೆಯನ್ನು ಕರೆಯಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏಳು ವರ್ಷಗಳ ಸವಾಲಿನ ಪಯಣ ಮತ್ತು ಈಗಿನ ಆತಂಕ

2019ರ ನವೆಂಬರ್‌ನಲ್ಲಿ ರಚನೆಯಾದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಸಿದ್ಧಾಂತಗಳ ವಿಚಾರದಲ್ಲಿ ಮೊದಲಿನಿಂದಲೂ ಭಿನ್ನವಾಗಿತ್ತು. ತೀವ್ರ ಹಿಂದುತ್ವದ ಸಿದ್ಧಾಂತ ಹೊಂದಿದ್ದ ಶಿವಸೇನೆ, ಜಾತ್ಯತೀತ ನಿಲುವಿನ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದಾಗ ರಾಜಕೀಯ ವಿಶ್ಲೇಷಕರೇ ಹುಬ್ಬೇರಿಸಿದ್ದರು. ಅಂದು ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಈ ವಿಭಿನ್ನ ಸಿದ್ಧಾಂತಗಳ ಮೈತ್ರಿ ನಡೆದಿತ್ತು ಎಂದು ಟೀಕಾಕಾರರು ಇಂದಿಗೂ ಹೇಳುತ್ತಾರೆ. 2022ರ ಜೂನ್‌ನಲ್ಲಿ ಶಿವಸೇನೆಯಲ್ಲಿ ಭುಗಿಲೆದ್ದ ಮೊದಲ ಬಂಡಾಯ ಹಾಗೂ 2023ರ ಜೂನ್‌ನಲ್ಲಿ ಎನ್‌ಸಿಪಿಯ ಇಬ್ಭಾಗದ ಬಳಿಕ ಈ ಮೈತ್ರಿಕೂಟ ತತ್ತರಿಸುತ್ತಲೇ ಬಂದಿದೆ. ಆದರೆ ಈಗ, ಠಾಕ್ರೆ ಕ್ಯಾಂಪ್‌ನಿಂದ ಮತ್ತೊಮ್ಮೆ 6 ಸಂಸದರು ಶಿಂಧೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜಿಗಿದಿರುವುದು ಮಹಾ ವಿಕಾಸ್ ಅಘಾಡಿಯ ಆಟ ಮುಗಿಯಿತೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net