ಅಲ್ಪಾಯುಷ್ಯ ಎಂದ ಜ್ಯೋತಿಷಿ, ಮನನೊಂದು ಪ್ರಾಣ ಬಿಟ್ಟ ಟೆಕ್ಕಿ! | Astrologer

Astrologer
Astrologer
Published on
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು, ಜ್ಯೋತಿಷಿಯೊಬ್ಬರು(Astrologer) ನುಡಿದ ‘ಅಲ್ಪಾಯುಷ್ಯ’ದ ಭವಿಷ್ಯಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಜ್ಯೋತಿ (29) ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದ ಇವರು, ಇತ್ತೀಚೆಗೆ ಮಾನಸಿಕವಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕೆ ಮೂಲ ಕಾರಣ ಜ್ಯೋತಿಷಿಯೊಬ್ಬರು ನೀಡಿದ್ದ ಎಚ್ಚರಿಕೆ.
ಕುಟುಂಬದ ಮೂಲಗಳ ಪ್ರಕಾರ, ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಯ ಜಾತಕ ವಿಶ್ಲೇಷಿಸಿ ಆಕೆಗೆ ‘ಅಲ್ಪಾಯುಷ್ಯ’ವಿದೆ ಎಂದು ಭವಿಷ್ಯ ನುಡಿದಿದ್ದರು. ಈ ಸಂಕಷ್ಟದಿಂದ ಪಾರಾಗಲು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುವಂತೆ ಹಾಗೂ ಕೊನೆಯ ದಿನ ಮಾರಮ್ಮ ದೇವಿಗೆ ‘ತಾಳಿ’ ಅರ್ಪಿಸುವಂತೆ ಸೂಚಿಸಿದ್ದರು. ಈ ಭವಿಷ್ಯವಾಣಿಯು ಯುವತಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅಂದಿನಿಂದಲೇ ಅವರು ಸಾವಿನ ಭೀತಿಯಲ್ಲಿ ಬದುಕುತ್ತಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಪೂಜೆಯ ಕೊನೆಯ ದಿನವಾಗಿದ್ದು, ಕುಟುಂಬಸ್ಥರೆಲ್ಲರೂ ದೇವಸ್ಥಾನಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ಕವಿತಾ ಅವರು ಮಗಳನ್ನು ಕರೆಯಲು ಹೋದಾಗ ರೂಮಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯ ಮೂಲಕ ಇಣುಕಿ ನೋಡಿದಾಗ ವಿದ್ಯಾಜ್ಯೋತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮದುವೆಯ ಸಂಭ್ರಮದ ನಡುವೆ ಶೋಕ

ವಿದ್ಯಾಜ್ಯೋತಿ ಅವರು ಕೊಡಗು ಮೂಲದ ಯುವಕನೋರ್ವನನ್ನು ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿ ಮದುವೆಯ ಮಾತುಕತೆ ಕೂಡ ನಡೆದಿತ್ತು. ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಬೇಕಾಗಿದ್ದ ಯುವತಿ, ಅಂಧಶ್ರದ್ಧೆ ಅಥವಾ ಮನೋವಿಕಲತೆಯಿಂದ ಇಂತಹ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿದೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net