ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೀಟ್ ಸೆಂಟರ್ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ರಾಬಿನ್ ಕಾರ್ಬೆಟ್ ಮಂಡಿಸಿರುವ 'ರಾಡಿಕಲ್ ಮುಂಡಾನಿಟಿ' (Radical Mundanity) ಎಂಬ ಸಿದ್ಧಾಂತವು ಅನ್ಯಗ್ರಹ ಜೀವಿಗಳ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲಿರುವ ಮಾನವರು ಅನ್ಯಗ್ರಹ ಜೀವಿಗಳನ್ನು ಹುಡುಕಲು ಎಷ್ಟು ಉತ್ಸುಕರಾಗಿದ್ದಾರೋ, ಅನ್ಯಗ್ರಹ ಜೀವಿಗಳಿಗೆ ನಮ್ಮನ್ನು ಹುಡುಕುವಲ್ಲಿ ಅಂತಹ ಯಾವುದೇ ಆಸಕ್ತಿಯಿಲ್ಲ. ಅನ್ಯಗ್ರಹ ಜೀವಿಗಳು ಈಗಾಗಲೇ ಸಾಕಷ್ಟು ಮುಂದುವರಿದಿದ್ದು, ಭೂಮಿಯಂತಹ ಸಾಮಾನ್ಯ ಗ್ರಹಗಳ ಸಂಪರ್ಕ ಸಾಧಿಸುವ ವಿಷಯದಲ್ಲಿ ಅವರು ಬೇಸರಗೊಂಡಿದ್ದಾರೆ ಅಥವಾ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಕಾರ್ಬೆಟ್ ವಿವರಿಸುತ್ತಾರೆ. ಅಂದರೆ, ವಿಶ್ವದಲ್ಲಿ ಅನ್ಯಗ್ರಹ ಜೀವಿಗಳ ಅಸ್ತಿತ್ವವಿದ್ದರೂ ಸಹ, ಮಾನವ ನಾಗರಿಕತೆಯು ಅವರಿಗೆ ಕುತೂಹಲಕಾರಿಯಾಗಿ ಕಾಣಿಸದಿರುವುದೇ ಅವರು ನಮ್ಮನ್ನು ಸಂಪರ್ಕಿಸದಿರಲು ಮುಖ್ಯ ಕಾರಣವಾಗಿದೆ ಅನ್ನೋದು ಈ ಸಿದ್ಧಾಂತದ ವಾದವಾಗಿದೆ.