ನನಗೆ ಬುಲೆಟ್‌ಪ್ರೂಫ್ ಜಾಕೆಟ್ ತಲುಪಿಲ್ಲ, ಬಂದ್ರೂ 'ಆ ಜನರಿಗೆ' ಕೊಡ್ತೀನಿ!...ಯೋಗಿ ಸರ್ಕಾರದ ಭದ್ರತಾ ಆಫರ್‌ಗೆ ಅಖಿಲೇಶ್ ತಿರುಗೇಟು | Bulletproof Jacket

Bulletproof Jacket | ಯೋಗಿ ಸರ್ಕಾರದ ಭದ್ರತಾ ಆಫರ್‌ಗೆ ಅಖಿಲೇಶ್ ತಿರುಗೇಟು
Bulletproof Jacket | ಯೋಗಿ ಸರ್ಕಾರದ ಭದ್ರತಾ ಆಫರ್‌ಗೆ ಅಖಿಲೇಶ್ ತಿರುಗೇಟು
Published on

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸೇರಿದಂತೆ 44 ಪ್ರಮುಖ ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು (Bulletproof Jacket) ಒದಗಿಸಲು ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್, ತಮಗೆ ಇದುವರೆಗೆ ಯಾವುದೇ ಬುಲೆಟ್‌ಪ್ರೂಫ್ ಜಾಕೆಟ್ ತಲುಪಿಲ್ಲ ಮತ್ತು ಒಂದು ವೇಳೆ ಸರ್ಕಾರ ನೀಡಿದರೆ ಅದನ್ನು ತಾವು ಧರಿಸುವುದಿಲ್ಲ, ಬದಲಿಗೆ ಪತ್ರಕರ್ತರಿಗೆ ಕೊಡುವುದಾಗಿ ತಿಳಿಸಿದ್ದಾರೆ.

ಒಟ್ಟು 44 ಪ್ರಮುಖ ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ತಮ್ಮ ಸುರಕ್ಷತೆಗಾಗಿ ಜಾಕೆಟ್ ನೀಡಿದರೂ ಸಹ ಅದನ್ನು ಧರಿಸುವುದಿಲ್ಲ ಎಂಬುದನ್ನು ಅಖಿಲೇಶ್ ಯಾದವ್​ ಸ್ಪಷ್ಟಪಡಿಸಿದ್ದಾರೆ.

11 ಹಾಲಿ ಸಚಿವರಿಗೂ ಬುಲೆಟ್‌ಪ್ರೂಫ್ ಜಾಕೆಟ್‌!

ಸುರಕ್ಷತಾ ಪ್ರಧಾನ ಕಚೇರಿಯು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿದ್ದು, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತಾ ಕಾಳಜಿ ಮತ್ತು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಸರ್ಕಾರದ 11 ಸಚಿವರಿಗೂ ಬುಲೆಟ್‌ಪ್ರೂಫ್ ಜಾಕೆಟ್ ನೀಡಲಾಗುತ್ತಿದ್ದು, ಈ ಪಟ್ಟಿಯಲ್ಲಿ ಸಂಜಯ್ ನಿಷಾದ್, ನಂದ ಗೋಪಾಲ್ ನಂದಿ ಸೇರಿದಂತೆ ಹಲವು ನಾಯಕರಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಭದ್ರತಾ ವ್ಯವಸ್ಥೆಯು ಕೇವಲ ಸಚಿವರು ಮತ್ತು ಶಾಸಕರಿಗೆ ಮಾತ್ರ ಸೀಮಿತವಾಗಿಲ್ಲ. ಭದ್ರತಾ ಬೆದರಿಕೆ ಎದುರಿಸುತ್ತಿರುವ ಇತರ ಪ್ರಮುಖ ನಾಯಕರನ್ನೂ ಈ ಯೋಜನೆಯಲ್ಲಿ ಸೇರಿಸಲಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆಯಿರುವುದರಿಂದ ರಾಜ್ಯ ಸರ್ಕಾರದ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಹೆಚ್ಚಿನ ಭದ್ರತಾ ವಿಭಾಗದಲ್ಲಿರುವ ನಾಯಕರ ಬೆದರಿಕೆ ಮಟ್ಟವನ್ನು ಗುಪ್ತಚರ ವರದಿಗಳ ಆಧಾರದ ಮೇಲೆ ಪರಿಶೀಲಿಸಲಾಗುತ್ತಿದೆ.

ಜಪಾನ್ ವಿದ್ಯಾರ್ಥಿಗಳ ಸೆಲ್ಫಿ ವಿರುದ್ಧ ವಾಗ್ದಾಳಿ

ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಜಪಾನ್‌ನ 13 ಶಾಲಾ ಮಕ್ಕಳ ಕುರಿತು ಮಾತನಾಡಿದ ಅಖಿಲೇಶ್ ಯಾದವ್, ಆ ಮಕ್ಕಳು ಸರಿಯಾದ ಸಂಶೋಧನೆ ಮಾಡಿರಲಿಕ್ಕಿಲ್ಲ. ಮಾಡಿದ್ದರೆ ಅವರು ಸೆಲ್ಫಿ ತೆಗೆದುಕೊಳ್ಳುತ್ತಿರಲಿಲ್ಲ. ಅವರಿಗೆ ಇವೆಲ್ಲವನ್ನೂ ಮಾಡಲು ಮುಂದೆ ಹಲವು ಅವಕಾಶಗಳು ಸಿಗಲಿವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಪಕ್ಷಕ್ಕೆ ರನ್ ಅವೇ ಟು ಪಾಕಿಸ್ತಾನ್ ಎಂದು ಹೊಸ ವ್ಯಾಖ್ಯಾನ ನೀಡಿದರು.
ಮೀರತ್‌ನ ಅಧಿಕಾರಿಯೊಬ್ಬರು ತಮ್ಮ ಕಚೇರಿಗೆ ಬಂದ ಸಾರ್ವಜನಿಕರಿಗೆ ಗದರಿದ ಘಟನೆಯನ್ನು ಪ್ರಸ್ತಾಪಿಸಿದ ಯಾದವ್, ಅವರು ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಸಮುದಾಯಕ್ಕೆ ಸೇರಿದವರಾಗಿದ್ದರಿಂದಲೇ ಅಧಿಕಾರಿ ನನ್ನ ಕಚೇರಿಗೆ ಹೇಗೆ ಬಂದಿರಿ ಎಂದು ಆ ರೀತಿ ವ್ಯವಹರಿಸಿದ್ದಾರೆ ಎಂದು ಆರೋಪಿಸುತ್ತಾ, ರಾಜ್ಯಾದ್ಯಂತ ಪೋಲಿಸರ ದೌರ್ಜನ್ಯ ಮಿತಿ ಮೀರಿದೆ ಎಂದು ಕಿಡಿಕಾರಿದರು.

ಮೈತ್ರಿ ಮುರಿಯುವುದಿಲ್ಲ ಎಂದ ಎಸ್​ಪಿ ಅಧ್ಯಕ್ಷ

ತಮ್ಮ ಪಕ್ಷವು ಯಾವುದೇ ಕಾರಣಕ್ಕೂ ಮಿತ್ರಪಕ್ಷಗಳೊಂದಿಗಿನ ಮೈತ್ರಿಯನ್ನು ಮುರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅಖಿಲೇಶ್ ಯಾದವ್, ಸಮಾಜವಾದಿ ಪಾರ್ಟಿಯು ಸದಾ ಕೊಟ್ಟ ಮಾತಿಗೆ ಬದ್ಧವಾಗಿರುತ್ತದೆ ಎಂದಿದ್ದಾರೆ. ಬೃಹತ್ ಉದ್ಯಮ ಸಮೂಹಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಬಿಜೆಪಿಯ ವಿರುದ್ಧವೇ ತಮ್ಮ ಹೋರಾಟವಾಗಿದ್ದು, ಸಮಾಜವಾದಿ ಸಿದ್ಧಾಂತ ಮತ್ತು ಪಿಡಿಎ ಒಗ್ಗಟ್ಟಿನ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಸರ್ಕಾರ ರಚಿಸುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net