ಅಜಿತ್ ಪವಾರ್ ಪರ್ವ ಅಂತ್ಯ: ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣವಚನ..! Sunetra Pawar

ಅಜಿತ್ ಪವಾರ್ ಪರ್ವ ಅಂತ್ಯ: ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣವಚನ..!
ಅಜಿತ್ ಪವಾರ್ ಪರ್ವ ಅಂತ್ಯ: ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣವಚನ..!
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ಎನ್‌ಸಿಪಿ ಸಾರಥಿ ಅಜಿತ್ ಪವಾರ್​ರ ಅಕಾಲಿಕ ನಿಧನದ ನಂತರ, ರಾಜ್ಯ ರಾಜಕೀಯವು ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ತಿರುವಿಗೆ ಸಾಕ್ಷಿಯಾಗುತ್ತಿದೆ. ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಮೂರೇ ದಿನಗಳಲ್ಲಿ, ಅವರ ಪತ್ನಿ ಸುನೇತ್ರಾ ಪವಾರ್(Sunetra Pawar) ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.

ಇಂದು ಸಂಜೆ 5ಕ್ಕೆ ಪಟ್ಟಾಭಿಷೇಕ

ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಈ ಉನ್ನತ ಹುದ್ದೆ ಅಲಂಕರಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬೆಳಿಗ್ಗೆ ನಡೆದ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರಂತಹ ಹಿರಿಯ ನಾಯಕರು ಈಗಾಗಲೇ ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಹಸ್ತಾಂತರಿಸಿದ್ದಾರೆ.

ವಿಲೀನದತ್ತ ಎನ್‌ಸಿಪಿ ಬಣಗಳು..?

ಅಜಿತ್ ಪವಾರ್ ಅವರ ಸಾವು ಎರಡು ಎನ್‌ಸಿಪಿ ಬಣಗಳ (ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣ) ನಡುವಿನ ಕಂದಕವನ್ನು ಮುಚ್ಚುವ ಮುನ್ಸೂಚನೆ ನೀಡುತ್ತಿದೆ. ಅಜಿತ್ ಪವಾರ್ ಅವರ ಅಂತಿಮ ಸಂಸ್ಕಾರದಲ್ಲಿ ಶರದ್ ಪವಾರ್ ಕುಟುಂಬವು ಭಾಗಿಯಾಗಿರುವುದು ಮತ್ತು ಹಿರಿಯ ನಾಯಕ ಜಯಂತ್ ಪಾಟೀಲ್ ಅವರು ವಿಲೀನದ ಮಾತುಕತೆಗಳು ಅಜಿತ್ ಪವಾರ್ ಬದುಕಿದ್ದಾಗಲೇ ಅಂತಿಮ ಹಂತಕ್ಕೆ ತಲುಪಿದ್ದವು ಎಂದು ಬಹಿರಂಗಪಡಿಸಿರುವುದು ರಾಜಕೀಯ ಸಂಚಲನ ಮೂಡಿಸಿದೆ.
ಫೆಬ್ರವರಿ 12ರಂದು ಅಧಿಕೃತವಾಗಿ ಎರಡು ಬಣಗಳು ಒಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಸಂಭವಿಸಿದರೆ, ಸುನೇತ್ರಾ ಪವಾರ್ ಅವರ ನೇತೃತ್ವದಲ್ಲಿ ಪವಾರ್ ಕುಟುಂಬವು ಮತ್ತೆ ಒಂದೇ ಛತ್ರಿಯಡಿ ಬರುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ಜನರು ಈಗ ಕುತೂಹಲದಿಂದ ರಾಜಭವನದತ್ತ ಕಣ್ಣಿಟ್ಟಿದ್ದಾರೆ. ಸುನೇತ್ರಾ ಪವಾರ್ ಅವರು ತಮ್ಮ ಪತಿಯ ರಾಜಕೀಯ ಪರಂಪರೆಯನ್ನು ಹೇಗೆ ಮುಂದುವರಿಸುತ್ತಾರೆ ಮತ್ತು ಶರದ್ ಪವಾರ್ ಅವರೊಂದಿಗೆ ಹೇಗೆ ಕೈಜೋಡಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಣಾಯಕವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net