ಮಾತನಾಡಿದ್ರೆ ಬೀಳುತ್ತೆ ಕೇಸ್!...ಅಯೋಧ್ಯೆ ರಾಮಮಂದಿರದಲ್ಲಿ ಕಳ್ಳತನ ತಡೆಯಲು ಜಾರಿಯಾದ ಹೊಸ ನಿಯಮಗಳು ಇಲ್ಲಿವೆ | Ayodhya Ram Mandir

Ayodhya Ram Mandir | ಮಾತನಾಡಿದ್ರೆ ಬೀಳುತ್ತೆ ಕೇಸ್!...ಅಯೋಧ್ಯೆ ರಾಮಮಂದಿರದಲ್ಲಿ ಕಳ್ಳತನ ತಡೆಯಲು ಜಾರಿಯಾದ ಹೊಸ ನಿಯಮಗಳು ಇಲ್ಲಿವೆ
Ayodhya Ram Mandir | ಮಾತನಾಡಿದ್ರೆ ಬೀಳುತ್ತೆ ಕೇಸ್!...ಅಯೋಧ್ಯೆ ರಾಮಮಂದಿರದಲ್ಲಿ ಕಳ್ಳತನ ತಡೆಯಲು ಜಾರಿಯಾದ ಹೊಸ ನಿಯಮಗಳು ಇಲ್ಲಿವೆ
Published on
Ayodhya Ram Mandir: ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಕಾಣಿಕೆ ಹಣ ಎಣಿಕೆ ಮಾಡುವ ಸಮಯದಲ್ಲಿಯೇ ಲಕ್ಷಾಂತರ ರೂಪಾಯಿಗಳ ಲೂಟಿ ನಡೆದಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಇನ್ಮುಂದೆ ಕಳ್ಳತನ ತಡೆಯಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಎಣಿಕೆ ಕೊಠಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಇವೇ ನೋಡಿ ಹೊಸ ರೂಲ್ಸ್!...

ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಜಾರಿಗೆ ತಂದಿರುವ ಕಠಿಣ ನಿಯಮಗಳು ಹೀಗಿವೆ.
ನೆಲದ ಮೇಲೆ ಎಣಿಕೆ: ಇನ್ಮುಂದೆ ನೋಟುಗಳ ಎಣಿಕೆಯನ್ನು ಟೇಬಲ್ ಮತ್ತು ಕುರ್ಚಿಗಳ ಮೇಲೆ ಮಾಡುವಂತಿಲ್ಲ. ಬದಲಾಗಿ, ಪ್ಲೈವುಡ್‌ನಿಂದ ಮುಚ್ಚಿದ ನೆಲದ ಮೇಲೆಯೇ ಕುಳಿತು ಎಣಿಕೆ ಮಾಡಬೇಕು. ಇದರಿಂದ ಎಲ್ಲರೂ ಸ್ಪಷ್ಟವಾಗಿ ಕಾಣಿಸುತ್ತಾರೆ ಮತ್ತು ಹಣವನ್ನು ಕಣ್ಣಿಗೆ ತಪ್ಪಿಸಿ ಎಲ್ಲಿಯೂ ಬಚ್ಚಿಡಲು ಸಾಧ್ಯವಾಗುವುದಿಲ್ಲ.
ಮಾತನಾಡುವಂತಿಲ್ಲ: ಕಾಣಿಕೆ ಎಣಿಕೆ ಕಾರ್ಯದಲ್ಲಿ ತೊಡಗಿರುವ ಮಂದಿರದ ಸಿಬ್ಬಂದಿ ಕೆಲಸದ ಸಮಯದಲ್ಲಿ ಪರಸ್ಪರ ಮಾತನಾಡುವಂತಿಲ್ಲ.
ಕಟ್ಟುನಿಟ್ಟಿನ ನಿಗಾ: ಶೌಚಾಲಯ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಪದೇ ಪದೇ ಬ್ರೇಕ್ ತೆಗೆದುಕೊಳ್ಳುವ ಉದ್ಯೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಎಣಿಕೆ ಕಾರ್ಯದಲ್ಲಿ ತೊಡಗಿರುವವರು ಕ್ಯಾಂಟೀನ್‌ನಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ.
ಸಿಸಿಟಿವಿ ಕಣ್ಗಾವಲು: ಕಾಣಿಕೆ ಎಣಿಕೆ ಕೊಠಡಿಯ ಪ್ರತಿಯೊಂದು ಇಂಚು ಜಾಗವೂ ಈಗ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರಲಿದೆ.
ಮಾನಿಟರಿಂಗ್ ರೂಮ್ ನಿಯಮ: ಮಾನಿಟರಿಂಗ್ ಕೊಠಡಿಯಲ್ಲಿ ಕುಳಿತು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುವ ಮತ್ತು ಕಣ್ಗಾವಲು ಇಡುವ ಸಿಬ್ಬಂದಿ ತಮ್ಮ ಕರ್ತವ್ಯದ ಸಮಯದಲ್ಲಿ ಆಸನ ಬಿಟ್ಟು ಎಲ್ಲೂ ಹೋಗುವಂತಿಲ್ಲ.

ಪ್ರಕರಣದ ಹಿನ್ನೆಲೆ

ರಾಮಮಂದಿರದ ಕಾಣಿಕೆ ಹಣ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಜುಲೈ 3 ರಂದು ಮಂದಿರದ ಆವರಣಕ್ಕೆ ಭೇಟಿ ನೀಡಿ ಮುಂದಿನ ಮಹತ್ವದ ತನಿಖೆ ಕೈಗೊಂಡಿದೆ. ಜೂನ್ 23 ರಂದು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ನಂತರ, ಜೂನ್ 25 ರಂದು ಎಫ್‌ಐಆರ್ ದಾಖಲಿಸಿಕೊಂಡು ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಯಿತು. ಈ ಪ್ರಕರಣದ ಸಮಗ್ರ ತನಿಖೆಗಾಗಿ, ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಎಲ್ಲಾ ಆಯಾಮಗಳಿಂದಲೂ ಪೂರ್ಣ ವಿಚಾರಣೆ ನಡೆಸಲು ಉತ್ತರ ಪ್ರದೇಶ ರಾಜ್ಯ ಸರ್ಕಾರವು ಜುಲೈ 1 ರಂದು ಎಸ್‌ಐಟಿಗೆ ಇನ್ನೂ 15 ದಿನಗಳ ಕಾಲಾವಕಾಶವನ್ನು ವಿಸ್ತರಿಸಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಎಲ್ಲಾ ಎಂಟು ಜನರನ್ನು ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ, ರಾಮಮಂದಿರ ಟ್ರಸ್ಟ್‌ನ ಪ್ರಮುಖರಾದ ಚಂಪತ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಕಾಣಿಕೆ ಹಣ ದುರುಪಯೋಗದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಮ ಜನ್ಮಭೂಮಿ ಮಂದಿರದ ಕಾಣಿಕೆ ಹಣದ ಈ ಹಗರಣವು ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಪ್ರತಿಪಕ್ಷಗಳು ಆಡಳಿತಾರೂಢ ಸಿಎಂ ಯೋಗಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರೆ, ಸರ್ಕಾರವು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದೆ.

ಬಿಜೆಪಿ ನಾಯಕರುಗಳು ಹೇಳಿದ್ದೇನು..?

ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಬಿಜೆಪಿ ಸಂಸದ ದಿನೇಶ್ ಶರ್ಮಾ, ಮುಖ್ಯಮಂತ್ರಿಗಳು ತಕ್ಷಣವೇ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಎಸ್‌ಐಟಿ ತನಿಖೆ ಪ್ರಸ್ತುತ ಚಾಲ್ತಿಯಲ್ಲಿದ್ದು, ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ಜನರು ಸ್ವಲ್ಪ ಸಮಯ ಕಾಯಬೇಕು ಮತ್ತು ತನಿಖೆಯ ಮೇಲೆ ನಂಬಿಕೆಯಿಡಬೇಕು ಎಂದು ತಿಳಿಸಿದ್ದಾರೆ. ಇದೇ ವಿಷಯವಾಗಿ ಸಚಿವ ಸಂಜಯ್ ನಿಶಾದ್ ಪ್ರತಿಕ್ರಿಯೆ ನೀಡಿದ್ದು, ಹಿಂದಿನ ಸರ್ಕಾರಗಳ ಆಡಳಿತಾವಧಿಯಂತೆ ನಮ್ಮ ಪ್ರಸ್ತುತ ಸರ್ಕಾರವು ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿಲ್ಲ, ಬದಲಾಗಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net