ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧವು ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಬುಧವಾರ ಮುಂಜಾನೆ ಟೆಹ್ರಾನ್ ಆಕಾಶದಲ್ಲಿ ನಡೆದ ಭೀಕರ ಕಾಳಗದಲ್ಲಿ ಇಸ್ರೇಲ್ ರಕ್ಷಣಾ ಪಡೆ, ಇರಾನ್ನ YAK-130 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಅಮೆರಿಕ ನಿರ್ಮಿತ ಅತ್ಯಾಧುನಿಕ F-35I ಅದಿರ್ ಫೈಟರ್ ಜೆಟ್ ಮೂಲಕ ಈ ಸಾಧನೆ ಮಾಡಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಎಫ್-35 ವಿಮಾನವೊಂದು ಶತ್ರು ರಾಷ್ಟ್ರದ ಮಾನವಚಾಲಿತ ವಿಮಾನವನ್ನು ಯುದ್ಧದಲ್ಲಿ ಧ್ವಂಸಗೊಳಿಸಿದಂತಾಗಿದೆ.