ಇದು ನಡೆದಿರುವುದು ಇದೇ ಮೊದಲು... ತಮಿಳುನಾಡು ಜನತೆಯನ್ನು ಬೆಚ್ಚಿಬೀಳಿಸಿದ ಅಪರೂಪದ ವಿದ್ಯಾಮಾನ! Rare Phenomenon

ಇದು ನಡೆದಿರುವುದು ಇದೇ ಮೊದಲು... ತಮಿಳುನಾಡು ಜನತೆಯನ್ನು ಬೆಚ್ಚಿಬೀಳಿಸಿದ ಅಪರೂಪದ ವಿದ್ಯಾಮಾನ! Rare Phenomenon
ಇದು ನಡೆದಿರುವುದು ಇದೇ ಮೊದಲು... ತಮಿಳುನಾಡು ಜನತೆಯನ್ನು ಬೆಚ್ಚಿಬೀಳಿಸಿದ ಅಪರೂಪದ ವಿದ್ಯಾಮಾನ! Rare Phenomenon
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ತೂತುಕುಡಿಯಲ್ಲಿ ಅಪರೂಪದ ಸುಂಟರಗಾಳಿ ವಿಸ್ಮಯ
  • ತೂತುಕುಡಿಯಲ್ಲಿ ಜನರನ್ನು ಬೆರಗುಗೊಳಿಸಿದ ಪ್ರಕೃತಿ ವಿಸ್ಮಯ
  • ಹವಾಮಾನ ತಜ್ಞರನ್ನೇ ಆಶ್ಚರ್ಯಚಕಿತಗೊಳಿಸಿದ ಅಪರೂಪದ ದೃಶ್ಯ
  • ಅಪರೂಪದ 'ಲ್ಯಾಂಡ್‌ಸ್ಪೌಟ್‌' ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Rare Phenomenon : ಭಾನುವಾರ ( ಜೂನ್​ 21 ) ತಮಿಳುನಾಡಿನ ಕರಾವಳಿ ನಗರಿ ತೂತುಕುಡಿಯಲ್ಲಿ ಸಂಭವಿಸಿದ ಅಪರೂಪದ ಸುಂಟರಗಾಳಿಯು ಹವಾಮಾನ ತಜ್ಞರು ಹಾಗೂ ಸ್ಥಳೀಯರಲ್ಲಿ ತೀವ್ರ ಆಶ್ಚರ್ಯ ಮೂಡಿಸಿತು. ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಇಂತಹ ನೈಸರ್ಗಿಕ ವಿದ್ಯಮಾನವೊಂದು ಇಷ್ಟು ಸ್ಪಷ್ಟವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಇದೇ ಮೊದಲು. ದಟ್ಟ ಕತ್ತಲೆಯಿಂದ ಕೂಡಿದ ಆಕಾಶದಿಂದ ಭೂಮಿಯವರೆಗೆ ಬೃಹತ್ ಹೊಗೆಯ ರಾಶಿಯಂತೆ ಚಾಚಿಕೊಂಡಿದ್ದ ಸುರುಳಿಯಾಕಾರದ ಮೋಡಗಳ ರಚನೆಯು, ಸ್ಥಳೀಯ ಜನರಲ್ಲಿ ತೀವ್ರ ಕುತೂಹಲದ ಜೊತೆಗೆ ಸಣ್ಣ ಮಟ್ಟದ ಆತಂಕವನ್ನು ಸೃಷ್ಟಿಸಿತ್ತು.
ಪ್ರಖ್ಯಾತ ಹವಾಮಾನ ಮುನ್ಸೂಚನೆಗಾರ ವೆದರ್‌ಮ್ಯಾನ್ ನವದೀಪ್​ ದಹಿಯಾ ಹಂಚಿಕೊಂಡಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ತೂತುಕುಡಿಯಲ್ಲಿ ಸಂಭವಿಸಿದ ಈ ಸುಂಟರಗಾಳಿಯು ದೊಡ್ಡ ಮತ್ತು ಶಕ್ತಿಶಾಲಿ ಸುಂಟರಗಾಳಿಗಳಂತೆ ವಿನಾಶಕಾರಿಯಾಗಿರಲಿಲ್ಲ. ಅತ್ಯಂತ ಸೀಮಿತ ಪ್ರದೇಶಕ್ಕೆ ಒಳಪಟ್ಟಿತ್ತು ಮತ್ತು ಕೆಲವೇ ನಿಮಿಷಗಳ ಕಾಲ ಮಾತ್ರ ಇತ್ತು. ನೆಲದಿಂದ ಧೂಳು ಮತ್ತು ಸಣ್ಣಪುಟ್ಟ ಕಸದ ಅವಶೇಷಗಳನ್ನು ಮೇಲಕ್ಕೆ ಹಾರಿಸುತ್ತಾ ಅಲ್ಪಾವಧಿಯಲ್ಲೇ ಮರೆಯಾಗಿದ್ದರಿಂದ ಯಾವುದೇ ಆತಂಕದ ವಾತಾವರಣ ನಿರ್ಮಾಣವಾಗಲಿಲ್ಲ. ಅಲ್ಲದೆ, ಯಾವುದೇ ದೊಡ್ಡ ಮಟ್ಟದ ಹಾನಿ ಅಥವಾ ಸಾವು-ನೋವುಗಳು ಸಂಭವಿಸದೇ ಇರುವುದು ದೊಡ್ಡ ಸಮಾಧಾನದ ಸಂಗತಿಯಾಗಿದೆ. ಆದಾಗ್ಯೂ, ವೈಜ್ಞಾನಿಕ ವಲಯವು ಇಂತಹ ಅಪರೂಪದ ವಿದ್ಯಮಾನಗಳನ್ನು ಅತ್ಯಂತ ಮಹತ್ವದ ದೃಷ್ಟಿಕೋನದಿಂದ ನೋಡುತ್ತಿದೆ.
ಪ್ರಾಥಮಿಕ ತೀರ್ಮಾನಗಳ ಪ್ರಕಾರ, ಹವಾಮಾನ ತಜ್ಞರು ಇದನ್ನು 'ಲ್ಯಾಂಡ್‌ಸ್ಪೌಟ್' ಇರಬಹುದು ಎಂದು ಅಂದಾಜಿಸಿದ್ದಾರೆ. ಸಾಮಾನ್ಯವಾಗಿ ದೊಡ್ಡ ಸುಂಟರಗಾಳಿಗಳು ಬೃಹತ್ ಗುಡುಗು ಸಹಿತ ಮೋಡಗಳಿಂದ ಸೃಷ್ಟಿಯಾಗುತ್ತವೆ. ಆದರೆ, ಈ ಲ್ಯಾಂಡ್‌ಸ್ಪೌಟ್‌ಗಳು ನೆಲಮಟ್ಟದಲ್ಲಿ ಉಂಟಾಗುವ ಸಣ್ಣ ಗಾಳಿಯ ಸುರುಳಿಗಳು, ಗುಡುಗು ಸಹಿತ ಮೋಡಗಳ ಬಲವಾದ ಗಾಳಿಯ ಪ್ರವಾಹದಿಂದ ಮೇಲಕ್ಕೆ ಎಳೆಯಲ್ಪಟ್ಟಾಗ ಸೃಷ್ಟಿಯಾಗುತ್ತವೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಸರಳವಾಗಿ ಹೇಳುವುದಾದರೆ, ಸುಂಟರಗಾಳಿ ಎಂಬುದು ವಾತಾವರಣದಲ್ಲಿನ ಗುಡುಗು ಸಹಿತ ಮೋಡಗಳಿಗೆ ಸಂಬಂಧಿಸಿದ್ದಾಗಿದ್ದು, ಆಕಾಶದಿಂದ ಭೂಮಿಯವರೆಗೆ ಚಾಚಿಕೊಂಡು ಅತ್ಯಂತ ವೇಗವಾಗಿ ಸುತ್ತುವ ಗಾಳಿಯ ಒಂದು ಬೃಹತ್ ಕಂಬವಾಗಿದೆ. ಇವುಗಳ ಸೃಷ್ಟಿಗೆ ಪ್ರಮುಖವಾಗಿ ಮೂರು ಅಂಶಗಳು ಬೇಕಾಗುತ್ತವೆ. ಮೊದಲನೆಯದಾಗಿ, ಸುಂಟರಗಾಳಿಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುವ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ ಗಾಳಿ. ಪ್ರಸ್ತುತ ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿಯು ಇಂತಹ ತೇವಾಂಶ ಭರಿತ ಗಾಳಿಯನ್ನು ಹೇರಳವಾಗಿ ಪೂರೈಸುತ್ತಿದೆ. ಎರಡನೆಯದಾಗಿ, ಗಾಳಿಯು ಅತ್ಯಂತ ವೇಗವಾಗಿ ಗುಡುಗು ಮೋಡಗಳ ಕಡೆಗೆ ಮೇಲಕ್ಕೆ ಚಿಮ್ಮುವ ಬಲವಾದ ಪ್ರವಾಹ ಹಾಗೂ ಮೂರನೆಯದಾಗಿ, ನೆಲಮಟ್ಟದಲ್ಲಿ ಉಂಟಾಗುವ ಗಾಳಿಯ ಸುರುಳಿ ಚಲನೆ.
ನೆಲಮಟ್ಟದ ಈ ಸಣ್ಣ ಸುರುಳಿ ಚಲನೆಯನ್ನು ಮೋಡಗಳ ಕಡೆಗೆ ಚಿಮ್ಮುವ ಬಲವಾದ ಗಾಳಿಯ ಪ್ರವಾಹವು ತೀವ್ರವಾಗಿ ಮೇಲಕ್ಕೆ ಎಳೆದು ವಿಸ್ತರಿಸುತ್ತದೆ. ಐಸ್ ಸ್ಕೇಟಿಂಗ್ ಮಾಡುವವರು ತಮ್ಮ ಕೈಗಳನ್ನು ದೇಹದ ಹತ್ತಿರ ತಂದುಕೊಂಡಾಗ ಅವರ ಸುತ್ತುವ ವೇಗ ಹೆಚ್ಚಾಗುವಂತೆಯೇ, ಈ ಗಾಳಿಯ ಕಂಬದ ಉದ್ದ ಹೆಚ್ಚಾದಂತೆ ಅದರ ವೇಗ ಮತ್ತು ಶಕ್ತಿಯೂ ಮಿತಿಮೀರುತ್ತದೆ. ಈ ಗಾಳಿಯ ಕಂಬದ ಒಳಗಿನ ಒತ್ತಡವು ಕಡಿಮೆಯಾಗಿ, ತೇವಾಂಶವು ತಂಪಾಗಿ ಮೋಡದ ಹನಿಗಳಾಗಿ ಬದಲಾದಾಗ ಮತ್ತು ಭೂಮಿಯ ಮೇಲಿನ ಧೂಳು ಹಾಗೂ ಕಸದ ಅವಶೇಷಗಳು ಇದರೊಳಗೆ ಎಳೆಯಲ್ಪಟ್ಟಾಗ, ಇದು ನಮಗೆ ಭಯಾನಕ ಕಪ್ಪು ಕೊಳವೆಯ ಆಕಾರದಲ್ಲಿ ದೃಶ್ಯಮಾನವಾಗುತ್ತದೆ.
ಸಾಮಾನ್ಯವಾಗಿ ಭಾರತದಲ್ಲಿ ಸುಂಟರಗಾಳಿಗಳು ಸಂಭವಿಸುವುದು ಅತ್ಯಂತ ಅಪರೂಪ. ದೇಶದಲ್ಲಿ ವರದಿಯಾಗುವ ಒಟ್ಟು ಸುಂಟರಗಾಳಿಗಳ ಪೈಕಿ ಶೇ. 72 ರಷ್ಟು ಭಾಗ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲೇ ಕಂಡುಬರುತ್ತವೆ. ಅಮೆರಿಕಾದ ಪ್ರಸಿದ್ಧ 'ಟೊರ್ನಾಡೋ ಅಲಿ' ಮಾದರಿಯ ಭೌಗೋಳಿಕ ಲಕ್ಷಣಗಳಾಗಲಿ ಅಥವಾ ಬೃಹತ್ ಪ್ರಮಾಣದ ಗಾಳಿಯ ವೈಪರೀತ್ಯವನ್ನು ಉಂಟುಮಾಡುವ ವಾತಾವರಣದ ಪರಿಸ್ಥಿತಿಯಾಗಲಿ ತಮಿಳುನಾಡಿನಲ್ಲಿಲ್ಲ. ಇಲ್ಲಿನ ಮುಂಗಾರು ಮೋಡಗಳು ಸಾಮಾನ್ಯವಾಗಿ ಇಂತಹ ಚಂಡಮಾರುತ ಅಥವಾ ಸುಂಟರಗಾಳಿಗಳನ್ನು ಸೃಷ್ಟಿಸುವಷ್ಟು ದೊಡ್ಡ ಮಟ್ಟದಲ್ಲಿ ಸಂಘಟಿತವಾಗುವುದಿಲ್ಲ. ಹೀಗಾಗಿಯೇ, ತೂತುಕುಡಿಯಲ್ಲಿ ನಡೆದಿರುವ ಈ ವಿದ್ಯಮಾನವು ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಗಳಲ್ಲಿ ಒಂದಾಗಿದೆ.
ತೂತುಕುಡಿಯಲ್ಲಿ ಕಂಡುಬಂದ ಈ ಅಪರೂಪದ ವಿದ್ಯಮಾನವು ಇದು ಕೇವಲ ಸ್ಥಳೀಯ ಹವಾಮಾನ ಬದಲಾವಣೆಯೋ ಅಥವಾ ಜಾಗತಿಕ ಹವಾಮಾನ ವೈಪರೀತ್ಯದ ಪ್ರತಿಬಿಂಬವೋ ಎಂಬ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಸಮುದ್ರದ ಮೇಲ್ಮೈ ತಾಪಮಾನದಲ್ಲಿನ ಏರಿಕೆ ಮತ್ತು ವಾತಾವರಣದಲ್ಲಿನ ಅನಿರೀಕ್ಷಿತ ಬದಲಾವಣೆಗಳು ದಕ್ಷಿಣ ಭಾರತದ ಕರಾವಳಿ ತೀರಗಳನ್ನು ಹೆಚ್ಚು ಅಸ್ಥಿರಗೊಳಿಸುತ್ತಿವೆ ಎಂಬುದಕ್ಕೆ ಇದು ಸಂಕೇತ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏನೇ ಆದರೂ, ತೂತುಕುಡಿಯ ಆಕಾಶದಲ್ಲಿ ಕೆಲವೇ ನಿಮಿಷಗಳ ಕಾಲ ವಿಸ್ಮಯ ಮೂಡಿಸಿದ ಈ 'ಮಿನಿ ಸುಂಟರಗಾಳಿ'ಯು ದಕ್ಷಿಣ ಭಾರತದ ಹವಾಮಾನ ಅಧ್ಯಯನದಲ್ಲಿ ಮುಂದಿನ ದಿನಗಳಲ್ಲಿ ಒಂದು ಪ್ರಮುಖ ಚರ್ಚಾ ವಿಷಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net