ಸಂಜು, ರಿಂಕು ಔಟ್... ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಈ 11 ಆಟಗಾರರೇ ಫೈನಲ್! ಸೂರ್ಯ ಪಡೆಗೆ ಆನೆಬಲ | IND vs PAK
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಸನ್ನದ್ಧ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
2026 ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮುನ್ನಡೆ
ಯುಎಸ್ಎ, ನಮೀಬಿಯಾ ವಿರುದ್ಧ ಭರ್ಜರಿ ಜಯ ಗಳಿಸಿದ ಭಾರತ
ಫೆ.15ರ ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಸೂರ್ಯ ಪಡೆ ಸನ್ನದ್ಧ
ನವದೆಹಲಿ: ಇದೇ ಭಾನುವಾರ (ಫೆ.15) ಕೊಲೊಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ (IND vs PAK) ಟಿ20 ವಿಶ್ವಕಪ್ ಪಂದ್ಯದ ಮೇಲೆ ಸದ್ಯ ಇಡೀ ಜಗತ್ತಿನ ಕಣ್ಣು ಬಿದ್ದಿದೆ. ಅದರಲ್ಲೂ ಕ್ರಿಕೆಟ್ ಪ್ರಿಯರಲ್ಲಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ. ಟೂರ್ನಿಯ ಆರಂಭಕ್ಕೂ ಮೊದಲಿನಿಂದಲೂ ಭಾರೀ ಹೈಡ್ರಾಮಾ ಸೃಷ್ಟಿಸಿದ್ದ ಪಾಕಿಸ್ತಾನ, ಕಡೆಗೂ ಟೀಮ್ ಇಂಡಿಯಾ ಆಡುವುದಾಗಿ ಹೇಳಿದೆ. ಈ ನಿಟ್ಟಿನಲ್ಲಿ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ಪಡೆ ಮೇಲಿನ ಭರವಸೆ ದುಪ್ಪಟ್ಟಾಗಿದೆ.
ಆ ಕಿಕ್ ಬೇರೆ...
ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಸೂರ್ಯ ಪಡೆ, ಯುಎಸ್ಎ ಮತ್ತು ನಮೀಬಿಯಾ ವಿರುದ್ಧ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಗೆಲುವಿನ ಲಯದಲ್ಲಿದೆ. ಆದರೆ, ಭಾನುವಾರ ಭಾರತದ ವೈರಿ ರಾಷ್ಟ್ರದ ಎದುರು ಆಡುತ್ತಿರುವ ಪಂದ್ಯದಲ್ಲಿ ಕೇವಲ ವಿಜಯವಲ್ಲ, ಭಾರೀ ಅಂತರದ ಹಾಗೂ ರೋಚಕ ಗೆಲುವು ಸಾಧಿಸಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ಆಶಯವಾಗಿದೆ. ಟೀಮ್ ಇಂಡಿಯಾ ಯಾವ ತಂಡದ ಮೇಲೆ ಗೆದ್ದರೂ, ಪಾಕಿಸ್ತಾನ ವಿರುದ್ಧ ಗೆದ್ದಾಗ ಸಿಗುವ ಕಿಕ್, ಆನಂದವೇ ಬೇರೆ ಎಂಬುದರಲ್ಲಿ ಎರಡನೇ ಮಾತಿಲ್ಲ.
ಕಳೆದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯಬೇಕಿದ್ದ ಅಭಿಷೇಕ್ ಶರ್ಮ, ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದರು. ಅನಾರೋಗ್ಯ ಸಮಸ್ಯೆಯಿಂದ ಸದ್ಯದ ಮಟ್ಟಿಗೆ ತಂಡದಿಂದ ಹೊರಗುಳಿದಿರುವ ಅಭಿಷೇಕ್, ಪಾಕ್ ವಿರುದ್ಧದ ಪಂದ್ಯಕ್ಕೆ ಕಮ್ಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡತೊಡಗಿದೆ. ಮತ್ತೊಂದೆಡೆ, ಅವರ ಸ್ಥಾನದಲ್ಲಿ ಬಂದ ಸಂಜು ಸ್ಯಾಮ್ಸನ್, ಉತ್ತಮ ಶುರು ನೀಡಿದ್ದೇ ಆದರೂ ಬಹುಬೇಗನೇ ವಿಕೆಟ್ ಒಪ್ಪಿಸಿದ್ದು ಮತ್ತೊಮ್ಮೆ ಅವರ ಅವಕಾಶಕ್ಕೆ ಕುತ್ತು ತಂದಿಟ್ಟಿದೆ.
ಈಗ ಪಾಕ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯ ಕಾರಣ, ಟೀಮ್ ಮ್ಯಾನೇಜ್ಮೆಂಟ್ ತಂಡದಲ್ಲಿ ಒಂದಷ್ಟು ಮಹತ್ವದ ಬದಲಾವಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಪೈಕಿ ಯಾರಿಗೆಲ್ಲ ಗೇಟ್ಪಾಸ್ ಸಿಗಬಹುದು ಮತ್ತು ಯಾರಿಗೆ ಪಾಕಿಸ್ತಾನ ವಿರುದ್ಧ ಆಡುವ ಜವಾಬ್ದಾರಿಯನ್ನು ನೀಡಬಹುದು ಎಂಬ ಕೌತುಕ ಹೆಚ್ಚಾಗಿದೆ. ಟೀಮ್ ಇಂಡಿಯಾದ ಪ್ಲೇಯಿಂಗ್ ಎಲೆವನ್ ಹೇಗಿರುತ್ತದೆ ಎಂಬುದರ ಸುಳಿವು ಇಲ್ಲಿದೆ ನೋಡಿ.
ಸ್ಫೋಟಕ ಓಪನರ್ಸ್
ಆರಂಭಿಕರಾಗಿ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್ರನ್ನೇ ಕಳಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸಂಜು ಸ್ಯಾಮ್ಸನ್ರನ್ನು ಮುಂದಿನ ಪಂದ್ಯದಿಂದ ಕೈಬಿಡಲಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಹೈವೋಲ್ಟೇಜ್ ಪಂದ್ಯದಿಂದ ಪವರ್ ಹಿಟ್ಟರ್ ರಿಂಕು ಸಿಂಗ್ರನ್ನು ಕೈಬಿಡುವ ಮುನ್ಸೂಚನೆಗಳು ಲಭಿಸಿವೆ. ಅವರ ಸ್ಥಾನದಲ್ಲಿ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ ಎನ್ನಲಾಗಿದೆ.
ಟೀಮ್ ಇಂಡಿಯಾಗೆ ಆನೆ ಬಲ
ಬ್ಯಾಟಿಂಗ್ ಯೂನಿಟ್ನಲ್ಲಿ ಇಶಾನ್ ಕಿಶನ್, ಅಭಿಷೇಕ್ ಶರ್ಮ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇವರಿಬ್ಬರ ಕಾಂಬೋ ಒಳ್ಳೆಯ ಓಪನಿಂಗ್ ಥ್ರಿಲ್ ನೀಡಿದರೆ, ನಂತರದಲ್ಲಿ ಬರುವ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಈಗಾಗಲೇ ಅರ್ಧಶತಕಗಳನ್ನು ಗಳಿಸಿ, ಉತ್ತಮ ಕೊಡುಗೆ ನೀಡುವಲ್ಲಿ ಜವಾಬ್ದಾರಿ ವಹಿಸಿದ್ದಾರೆ. ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಆಲ್ ರೌಂಡರ್ ಪ್ರದರ್ಶನ ತಂಡಕ್ಕೆ ಇನ್ನಷ್ಟು ಬಲ ನೀಡಲಿದೆ. ವರುಣ್ ಚಕ್ರವರ್ತಿ ಸ್ಪಿನ್ ಮೋಡಿ ಜತೆಗೆ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ವಿಕೆಟ್ ಕೀಳುವ ವೇಗ ಇಡೀ ಬೌಲಿಂಗ್ ಯೂನಿಟ್ಗೆ ಶಕ್ತಿ ತುಂಬಿದೆ. ಹೀಗಿರುವಾಗ, ಪಾಕ್ ವಿರುದ್ಧ ಟೀಮ್ ಇಂಡಿಯಾ ಹೇಗೆ ಆಡಲಿದೆ ಎಂಬುದನ್ನು ಸದ್ಯ ಕಾತರದಿಂದ ಕಾದು ನೋಡಬೇಕಿದೆ.