ದಶಕಗಳ ಪಾಲುದಾರಿಕೆ ಬಲವರ್ಧನೆ ; ಈಗಾಗಲೇ 300 ಟ್ರಕ್ ಪೂರೈಕೆ : ವಿಆರ್​ಎಲ್ ಸಂಸ್ಥೆಯಿಂದ ಅಶೋಕ್ ಲೇಲ್ಯಾಂಡ್​ಗೆ 715 ವಾಹನ ಆರ್ಡರ್

VRL to Ashok Leyland
VRL to Ashok Leyland
Published on
ಚೆನ್ನೈ: ದೇಶದ ಪ್ರಮುಖ ಸಾರಿಗೆ ಸಂಸ್ಥೆಯಾದ ವಿಆರ್​ಎಲ್ ಲಾಜಿಸ್ಟಿಕ್ಸ್ 715 ವಾಣಿಜ್ಯ ವಾಹನಗಳ ಪೂರೈಕೆಗಾಗಿ ಚೆನ್ನೈ ಮೂಲದ ಅಶೋಕ್ ಲೇಲ್ಯಾಂಡ್​ಗೆ ಬೃಹತ್ ಆರ್ಡರ್ ನೀಡಿದೆ. ಈ ಆರ್ಡರ್​ನಲ್ಲಿ ಎವಿಟಿಆರ್ 3120 ಸರಕು ಸಾಗಣೆ ಟ್ರಕ್​ಗಳು, ಬಾಸ್ 1615 ಟ್ರಕ್​ಗಳು ಮತ್ತು ಆಯ್ಸ್ಟರ್ ಸಿಬ್ಬಂದಿ ಸಾರಿಗೆ ಬಸ್​ಗಳು ಸೇರಿವೆ.
ಅಶೋಕ್ ಲೇಲ್ಯಾಂಡ್ ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿ, ವಿಆರ್​ಎಲ್ ಲಾಜಿಸ್ಟಿಕ್ಸ್ ಸಂಸ್ಥೆಯೊಂದಿಗೆ ತನಗಿರುವ ದಶಕಗಳ ಸುದೀರ್ಘ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಒಪ್ಪಂದ ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಿದೆ. ಒಪ್ಪಂದದ ಪ್ರಕಾರ ವಾಹನಗಳ ಪೂರೈಕೆ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದ್ದು, ಒಟ್ಟು ವಾಹನಗಳ ಪೈಕಿ 300 ಟ್ರಕ್​ಗಳನ್ನು ಈಗಾಗಲೇ ವಿಆರ್​ಎಲ್ ಸಂಸ್ಥೆಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದೆ. ಇನ್ನುಳಿದ 415 ವಾಹನಗಳನ್ನು ಪ್ರಸಕ್ತ ವರ್ಷದ ಒಳಗಾಗಿ ಪೂರೈಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದೆ.
ಅಶೋಕ್ ಲೇಲ್ಯಾಂಡ್​ನ ಮೀಡಿಯಂ ಆಂಡ್ ಹೆವಿ ಕಮರ್ಷಿಯಲ್ ವೆಹಿಕಲ್ಸ್ (ಎಂಎಚ್​ಸಿವಿ) ವಿಭಾಗದ ರಾಷ್ಟ್ರೀಯ ಮಾರಾಟ ಮುಖ್ಯಸ್ಥೆ ಮಾಧವಿ ದೇಶ್​ವುುಖ್ ಪ್ರತಿಕ್ರಿಯಿಸಿದ್ದು, ‘ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಗ್ರಾಹಕರ ಉದಯೋನ್ಮುಖ ಅಗತ್ಯಗಳಿಗೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಆರ್​ಎಲ್ ಸಂಸ್ಥೆ ಹಲವಾರು ವರ್ಷಗಳಿಂದ ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಈ ಬೃಹತ್ ಆರ್ಡರ್ ಲಭಿಸಿರುವುದು ಅಶೋಕ್ ಲೇಲ್ಯಾಂಡ್​ನ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಮೇಲೆ ವಿಆರ್​ಎಲ್ ಲಾಜಿಸ್ಟಿಕ್ಸ್ ಇಟ್ಟಿರುವ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.
ಈ ಹೊಸ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ನಿರ್ವಹಣಾ ವೆಚ್ಚ ಹಾಗೂ ರಿಪೇರಿ ಸಮಯ (ಡೌನ್​ಟೈಮ್ ಗಣನೀಯವಾಗಿ ಕಡಿಮೆ ಇರಲಿದೆ. ಇದು ಸಾರಿಗೆ ಸಂಸ್ಥೆಯ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಕಾರ್ಯಾಚರಣೆಯ ಲಾಭದಾಯಕತೆಯನ್ನು ಉತ್ತಮ ಪಡಿಸಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಶೋಕ್ ಲೇಲ್ಯಾಂಡ್ ತಿಳಿಸಿದೆ.
"

ನಮ್ಮ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 715 ಹೊಸ ವಾಹನಗಳ ಈ ಆರ್ಡರ್ ಎರಡೂ ಕಂಪನಿಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಿದೆ. 

 - ಡಾ. ವಿಜಯ ಸಂಕೇಶ್ವರ 

 - ಡಾ. ಆನಂದ ಸಂಕೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net