ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಹಯಾಬುಸಾ ಬೈಕ್: ಸ್ಥಳದಲ್ಲೇ ಐವರು ದುರಂತ ಸಾವು! Hayabusa

ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಹಯಾಬುಸಾ ಬೈಕ್: ಸ್ಥಳದಲ್ಲೇ ಐವರು ದುರಂತ ಸಾವು! Hayabusa
ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಹಯಾಬುಸಾ ಬೈಕ್: ಸ್ಥಳದಲ್ಲೇ ಐವರು ದುರಂತ ಸಾವು! Hayabusa
Published on

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದ ಮಹಬೂಬ್‌ನಗರದಲ್ಲಿ ಹಯಾಬುಸಾ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಐವರು ದುರ್ಮರಣ
  • ಸುಮಾರು 140 ಕಿ.ಮೀ. ವೇಗದಲ್ಲಿ ಬಂದ ಸ್ಪೋರ್ಟ್ಸ್ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ
  • ಮೃತರಲ್ಲಿ ಕಾರಿನಲ್ಲಿದ್ದ ಮಹಿಳೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರು ಒಂದೇ ಕುಟುಂಬದವರು
  • ಬೈಪಾಸ್ ರಸ್ತೆಯಲ್ಲಿ ಅಕ್ರಮ ಬೈಕ್ ರೇಸಿಂಗ್ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹ
Hayabusa : ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪಾಲಕೊಂಡ ಬೈಪಾಸ್ ರಸ್ತೆಯಲ್ಲಿ ಭಾನುವಾರ (ಮೇ 10) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಸಾವಿಗೀಡಾಗಿದ್ದಾರೆ. 
ಹೈದರಾಬಾದ್‌ನಿಂದ ಅತೀ ವೇಗದಲ್ಲಿ ಬಂದ ಹಯಾಬುಸಾ ಸ್ಪೋರ್ಟ್ಸ್ ಬೈಕ್, ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಒಂದೇ ಕುಟುಂಬದ ಮಹಿಳೆ ಮತ್ತು ಇಬ್ಬರು ಮಕ್ಕಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೈಕ್ ರೇಸಿಂಗ್ ಈ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಈ ಬೈಪಾಸ್ ರಸ್ತೆಯು ಇತ್ತೀಚಿನ ದಿನಗಳಲ್ಲಿ ಅಕ್ರಮ ರೇಸಿಂಗ್ ಅಡ್ಡೆಯಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 140 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಹಯಾಬುಸಾ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅರ್ಶಿಯಾ ಬೇಗಂ (30), ಏಳು ವರ್ಷದ ಉಜೆಪಾ ಮತ್ತು ಎರಡು ವರ್ಷದ ಅಮರ್ ಎಂದು ಗುರುತಿಸಲಾಗಿದೆ. ಅತೀ ವೇಗದ ಚಾಲನೆಯೇ ಈ ಭೀಕರ ದುರಂತಕ್ಕೆ ಕಾರಣವಾಗಿದ್ದು, ಬೈಕ್ ಸವಾರರಿಬ್ಬರು ಸಹ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ಬೆನ್ನಲ್ಲೇ ಬೈಕ್‌ನಲ್ಲಿದ್ದ ಇಬ್ಬರು ಸವಾರರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವ ಮುನ್ನವೇ ಅವರಿಬ್ಬರು ಮೃತಪಟ್ಟಿರುವುದಾಗಿ ಘೋಷಿಸಿದರು. ಇವರಲ್ಲಿ ಒಬ್ಬರನ್ನು 25 ವರ್ಷದ ಯಾಕೂಬ್ ಅಫ್ಜಲ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಸವಾರನ ಗುರುತು ಇನ್ನು ಪತ್ತೆಯಾಗಬೇಕಿದೆ. ಅಪಘಾತದ ಸಮಯದಲ್ಲಿ ಬೈಕ್ ಅನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಹಯಾಬುಸಾ ಬೈಕ್ ಪ್ರಪಂಚದ ವೇಗದ ಮೋಟಾರ್‌ ಸೈಕಲ್‌ಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಗಂಟೆಗೆ 300 ಕಿ.ಮೀ. ವೇಗವನ್ನು ತಲುಪಿದ ಮೊದಲ ಬೈಕ್‌ಗಳಲ್ಲಿ ಇದು ಪ್ರಮುಖವಾಗಿದ್ದು, ಒಂದು ಕಾಲದಲ್ಲಿ ವಿಶ್ವದ ಅತಿ ವೇಗದ ಬೈಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇಂತಹ ಅತೀ ವೇಗದ ಬೈಕ್ ಅತಿರೇಕದ ವೇಗದಲ್ಲಿದ್ದಾಗ ನಿಯಂತ್ರಣ ತಪ್ಪಿದ್ದೇ ಈ ಭೀಕರ ದುರಂತಕ್ಕೆ ಕಾರಣವಾಗಿದೆ.
ಪಾಲಕೊಂಡ ಬೈಪಾಸ್ ರಸ್ತೆಯು ರಾತ್ರಿ ವೇಳೆ ಅಪಾಯಕಾರಿ ರೇಸಿಂಗ್ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಯುವಕರ ಗುಂಪುಗಳು ನಿಯಮಿತವಾಗಿ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಅತಿ ವೇಗವಾಗಿ ಚಲಿಸುತ್ತಾ ಸ್ಟಂಟ್‌ಗಳನ್ನು ಮಾಡುತ್ತಾರೆ, ಇದರಿಂದಾಗಿ ಸಾರ್ವಜನಿಕರ ಜೀವಕ್ಕೆ ಸಂಚಕಾರ ಬಂದಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಜೀವಗಳು ಬಲಿಯಾಗುವ ಮೊದಲು ಅಕ್ರಮ ಬೈಕ್ ರೇಸಿಂಗ್ ಅನ್ನು ತಡೆಯಲು ತಕ್ಷಣದ ಕ್ರಮಕ್ಕೆ ನಿವಾಸಿಗಳು ಒತ್ತಾಯಿಸಿದ್ದಾರೆ. ಹೆದ್ದಾರಿಗಳಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ವೇಗ ಮಾಪಕಗಳನ್ನು ಬಳಸುವ ಮೂಲಕ ಅತಿ ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net