ಭೀಕರ ಪ್ರವಾಹದಲ್ಲಿ 300 ಭಾರತೀಯರು ನಾಪತ್ತೆ: ನೇಪಾಳ ವಿದೇಶಾಂಗ ಸಚಿವರಿಂದ ಅಧಿಕೃತ ಮಾಹಿತಿ! Nepal Flood

ಭೀಕರ ಪ್ರವಾಹದಲ್ಲಿ 300 ಭಾರತೀಯರು ನಾಪತ್ತೆ: ನೇಪಾಳ ವಿದೇಶಾಂಗ ಸಚಿವರಿಂದ ಅಧಿಕೃತ ಮಾಹಿತಿ! Nepal Flood
ಭೀಕರ ಪ್ರವಾಹದಲ್ಲಿ 300 ಭಾರತೀಯರು ನಾಪತ್ತೆ: ನೇಪಾಳ ವಿದೇಶಾಂಗ ಸಚಿವರಿಂದ ಅಧಿಕೃತ ಮಾಹಿತಿ! Nepal Flood
Published on

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಭೀಕರ ಪ್ರವಾಹದಿಂದ ಪಟ್ಟಣಗಳು ಧ್ವಂಸ
  • ರಸುವಾ ದುರಂತದಲ್ಲಿ 160 ಜನರ ಸಾವು 300 ಭಾರತೀಯರು ನಾಪತ್ತೆ
  • ರಕ್ಷಣೆ ಮತ್ತು ತುರ್ತು ಪರಿಹಾರ ಕಾರ್ಯಗಳಿಗೆ ಭಾರತದಿಂದ ನೆರವು
  • ಪ್ರವಾಸಿ ತಾಣಗಳು ಸುರಕ್ಷಿತವಾಗಿದ್ದು ನೇಪಾಳಕ್ಕೆ ಭೇಟಿ ನೀಡಲು ವಿದೇಶಾಂಗ ಸಚಿವರ ಮನವಿ
ಕಾಠ್ಮಂಡು: ನಿನ್ನೆ (ಆಗಸ್ಟ್​ 26) ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದಾಗಿ ( Nepal Flood ) ಕೆಲವೇ ಗಂಟೆಗಳ ಅಂತರದಲ್ಲಿ ಪರ್ವತಗಳ ನಾಡಿನ ಹಲವಾರು ಪಟ್ಟಣಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್​ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್, ರಸುವಾ ಪ್ರದೇಶದಲ್ಲಿ ಸಂಭವಿಸಿದ ಈ ಭೀಕರ ದುರಂತದಲ್ಲಿ ಇಲ್ಲಿಯವರೆಗೆ 160 ಜನರು ಸಾವಿಗೀಡಾಗಿದ್ದಾರೆ ಮತ್ತು ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ಈ ದುರಂತದ ಸಂಪೂರ್ಣ ಹಾನಿ ಪ್ರಮಾಣವನ್ನು ಅರಿಯಲು ಸರ್ಕಾರ ಇನ್ನೂ ಪ್ರಯತ್ನಿಸುತ್ತಿದೆ ಎಂದು ಖನಾಲ್​ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರವಾಹದಲ್ಲಿ ಕೈಲಾಶ್ ಮಾನಸಸರೋವರ ಯಾತ್ರಾರ್ಥಿಗಳು ಸೇರಿದಂತೆ ಕನಿಷ್ಠ 300 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಪ್ರವಾಹದ ಪ್ರದೇಶದಲ್ಲಿ ಸಾಗುವ ವಿದೇಶಿ ಪ್ರಜೆಗಳನ್ನು ಸಂಪರ್ಕಿಸಲು ಸರ್ಕಾರ ಯತ್ನಿಸುತ್ತಿದ್ದು, ಒಟ್ಟು 500ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಕುರಿತು ಆಯಾ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೇಪಾಳಿ ನಾಗರಿಕರಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ವಿದೇಶಿ ಪ್ರಜೆಗಳ ರಕ್ಷಣೆಗೂ ನೀಡಲಾಗುತ್ತಿದೆ ಎಂದು ಖನಾಲ್​ ಅವರು ಭರವಸೆ ನೀಡಿದ್ದಾರೆ.
ನೇಪಾಳದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಪತ್ತುಗಳಲ್ಲಿ ಇದೂ ಒಂದಾಗಿದೆ ಎಂದಿರುವ ಖನಾಲ್, ಭಾರತ ಸರ್ಕಾರವು ತ್ವರಿತವಾಗಿ ಕಳುಹಿಸುತ್ತಿರುವ ಪರಿಹಾರ ಕಾರ್ಯಗಳಿಗೆ  ಧನ್ಯವಾದ ಅರ್ಪಿಸಿದ್ದಾರೆ.
ಸದ್ಯದ ಗಮನವು ಸಂಪೂರ್ಣವಾಗಿ ರಕ್ಷಣೆ ಮತ್ತು ತುರ್ತು ಪರಿಹಾರ ಕಾರ್ಯಗಳ ಮೇಲಿದೆ ಎಂದು ತಿಳಿಸಿರುವ ಸಚಿವ ಶಿಶಿರ್ ಖನಾಲ್, ಈ ಬಿಕ್ಕಟ್ಟಿನ ಸಮಯದಲ್ಲಿ ನೇಪಾಳದ ಬೆಂಬಲಕ್ಕೆ ನಿಲ್ಲುವಂತೆ ಮತ್ತು ದೇಶದ ಪುನರ್‌ನಿರ್ಮಾಣಕ್ಕೆ ಸಹಾಯ ಮಾಡಲು ಪ್ರಪಂಚದಾದ್ಯಂತದ ಜನರಿಗೆ ಮನವಿ ಮಾಡಿದ್ದಾರೆ. ಭಾರತ ಸರ್ಕಾರ ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಇಂತಹ ಕಷ್ಟದ ಸಮಯದಲ್ಲಿ ಜಾಗತಿಕ ಸಮುದಾಯದಿಂದ ಸಿಗುತ್ತಿರುವ ಬೆಂಬಲ ಮತ್ತು ಒಡನಾಟಕ್ಕೆ ಖನಾಲ್​ ಅವರು ಧನ್ಯವಾದ ಅರ್ಪಿಸಿದ್ದಾರೆ. ಕೇವಲ ಪರಿಹಾರ ಮಾತ್ರವಲ್ಲದೆ, ಮುಂದಿನ ತಿಂಗಳುಗಳಲ್ಲಿ ದೇಶವನ್ನು ಮರು ನಿರ್ಮಿಸಲು ಮತ್ತು ಆರ್ಥಿಕತೆಯನ್ನು ಸುಧಾರಿಸಲು ಪ್ರವಾಸೋದ್ಯಮವು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.
ಪ್ರವಾಹದಿಂದ ನೇಪಾಳದ ಬಹುಪಾಲು ಪ್ರದೇಶಗಳು ಬಾಧಿತವಾಗಿಲ್ಲ ಮತ್ತು ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿವೆ ಎಂದು ಖನಾಲ್ ಸ್ಪಷ್ಟಪಡಿಸಿದ್ದಾರೆ. ಪೋಖರಾದಂತಹ ಜನಪ್ರಿಯ ಸ್ಥಳಗಳು ಹಾಗೂ ಮೌಂಟ್ ಎವರೆಸ್ಟ್ ಪ್ರದೇಶಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಪ್ರವಾಸಿಗರಿಗೆ ತೆರೆದಿವೆ. ಪ್ರಯಾಣಿಕರು ನೇಪಾಳಕ್ಕೆ ಭೇಟಿ ನೀಡಿ ತಮ್ಮ ಪ್ರವಾಸೋದ್ಯಮ ಖರ್ಚಿನ ಮೂಲಕ ದೇಶದ ಪುನರ್‌ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಖನಾಲ್​ ಅವರು ಕೋರಿದ್ದಾರೆ. 
ಅಂದಹಾಗೆ, 2015ರ ದೊಡ್ಡ ಭೂಕಂಪದಂತಹ ಹಿಂದಿನ ದುರಂತಗಳ ನಂತರವೂ ನೇಪಾಳವು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿ ಹೊರಹೊಮ್ಮಿದೆ ಮತ್ತು ಈ ಬಾರಿಯೂ ದೇಶವು ತನ್ನಷ್ಟಕ್ಕೇ ತಾನು ಮರು ನಿರ್ಮಾಣವಾಗಲಿದೆ ಎಂದು ಖನಾಲ್​ ಅವರು ಭಾವುಕವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net