19 ರಾಜ್ಯಗಳು, ಕೇಂದ್ರ ಸರ್ಕಾರ, ಈ ಒಂಟಿ ಮಹಿಳೆ... ಚುನಾವಣಾ ಅಖಾಡದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಓಪನ್​ ಚಾಲೆಂಜ್​

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
Published on

ಪ್ರಮುಖ ಮುಖ್ಯಾಂಶಗಳು

  • ಪಂಚರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ
  • 19 ರಾಜ್ಯಗಳು ಮತ್ತು ಕೇಂದ್ರವು ಈ ಒಂಟಿ ಮಹಿಳೆಯನ್ನು ಮಣಿಸಲು ಕೆಲಸ ಮಾಡುತ್ತಿವೆ
  • ವಾರಿಯರ್​ನಂತೆ ಹೋರಾಡುವೆ ಎಂದ ಪಶ್ಚಿಮ ಬಂಗಾಳ ಸಿಎಂ
ಪ.ಬಂಗಾಳ: ಪಂಚರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎದುರಾಳಿಗಳಿಗೆ ಖಡಕ್ ಸವಾಲು ಹಾಕಿದ್ದಾರೆ. ಚುನಾವಣಾ ಕಣದಲ್ಲಿ ಗೆಲುವಿಗಾಗಿ ಪಣತೊಟ್ಟು ನಿಂತಿರುವ ಮಮತಾ, ಯಾರಿಗೂ ಬಗ್ಗುವ ಮಾತೇ ಇಲ್ಲ ಎಂದಿರುವುದು ವಿಪಕ್ಷಗಳಿಗೆ ಓಪನ್ ಚಾಲೆಂಜ್​ ಕೊಟ್ಟಂತಾಗಿದೆ. 
ಚುನಾವಣಾ ಪ್ರಚಾರದ ಭಾಗವಾಗಿ ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ನನ್ನ ವಿರುದ್ಧ ಕೆಲಸ ಮಾಡುತ್ತಿವೆ. ಆದರೆ, ನಾನಿಲ್ಲಿ ಏಕಾಂಗಿಯಾಗಿ, ವಾರಿಯರ್​ನಂತೆ ಹೋರಾಡುವೆ. ದೆಹಲಿಯ ಬಲದಿಂದ ಬಂಗಾಳದ ಜನರ ಮೇಲೆ ಪ್ರಭಾವ ಬೀರಲು ಮತ್ತು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಮ್ಮನ್ನು ಮಣಿಸಲು ಸಜ್ಜಾಗಿರುವ ಎದುರಾಳಿಗೆ ಪರೋಕ್ಷವಾಗಿ ಕುಟುಕಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ನನ್ನನ್ನು ಸೋಲಿಸಲು ಒಗ್ಗೂಡಿದೆ. ಆದರೆ, ಸಾಮಾನ್ಯ ಜನರ ಹಕ್ಕುಗಳಿಗಾಗಿ ನಾನು ಏಕಾಂಗಿಯಾಗಿ ಹೋರಾಡುತ್ತೇನೆ. ಬಂಗಾಳವನ್ನು ವಿಷಪೂರಿತ ಕಣ್ಣುಗಳಿಂದ ನೋಡಿದರೆ, ನೀವು ನಿಮ್ಮ ಕಣ್ಣುಗಳನ್ನು ಕಳೆದುಕೊಳ್ಳುವುದು ಖಚಿತ ಎಂದು ಎಚ್ಚರಿಸಿದ್ದಾರೆ. 

'ಮನ್ ಕಿ ಬಾತ್' ಟೀಕೆ

ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಕಾರ್ಯಕ್ರಮವನ್ನು ಯುವಕರ ಮನಸ್ಸಿನ ಮೇಲೆ ಪ್ರಭಾವ ಬೀರಲು ಬಳಸಲಾಗುತ್ತಿದೆ. 'ಮನ್ ಕಿ ಬಾತ್ ಮೂಲಕ ಯುವಕರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಎಗ್ಗಿಲ್ಲದೆ ಸಾಗುತ್ತಿದೆ. ಆದರೆ, ಬಂಗಾಳದ ಯುವಕರಿಗೆ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿದೆ. ಇದರ ಕುರಿತು ಅವರು ಹೆಚ್ಚು ಜಾಗೃತರಾಗಿದ್ದಾರೆ ಎಂದರು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net