ನಕಲಿ ಪೇಸ್​ಬುಕ್ ಐಡಿ ಮೂಲಕ IAS​ ಅಧಿಕಾರಿ ಎಂದು ಹೇಳಿ ಯುವಕನನ್ನು ಮದುವೆಯಾಗಿ ವಂಚಿಸಿದ ಯುವತಿ; ಬಂಧಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಲಖನೌ: ಇಷ್ಟು ವರ್ಷ ನಾನು ಐಪಿಎಸ್ ಅಧಿಕಾರಿ, ಐಎಎಸ್ ಅಧಿಕಾರಿ ಎಂದು ಹೇಳಿ ಮಹಿಳೆಯರನ್ನು ಮದುವೆಯಾಗುವುದಾಗಿ ಗಂಡಸರು ವಂಚಿಸಿದ ಆರೋಪದ ಸುದ್ದಿಗಳನ್ನು ಕೇಳಿದ್ದೆವು, ಆದರೆ ಅದಕ್ಕೆ ವ್ಯತಿರಿಕ್ತವಾಗಿ ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ತಾನೂ ಐಎಎಸ್ ಅಧಿಕಾರಿ ಎಂದು ಹೇಳಿ ಯುವಕನೊಬ್ಬನನ್ನು ವಂಚಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಎಸ್ಸಿ ಓದುತ್ತಿರುವ ಯುವತಿ ಸಾಧನಾ, ಪೇಸ್​ಬುಕ್​ನಲ್ಲಿ ನಕಲಿ ಖಾತೆಯೊಂದನ್ನು ಸೃಷ್ಟಿಸಿ, ಆಗಾಗ ನಕಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ತಾನು ಹಿರಿಯ ಐಎಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದಾಳೆ.
ಈ ಪ್ರಕ್ರಿಯೆಯಲ್ಲಿ ಆಕೆಯ ಪ್ರೊಫೈಲ್ ನೋಡಿದ ಅಭಿಷೇಕ್ ಎಂಬ ಯುವಕ, ಆಕೆಯನ್ನು ಸಂಪರ್ಕಿಸಿ ಮೊದಲು ಸ್ನೇಹ ಮಾಡಿಕೊಂಡು ಬಳಿಕ ಮದುವೆ ಮಾಡಿಕೊಂಡಿದ್ದಾನೆ. ಮದುವೆ ಮಾಡಿಕೊಂಡ ಬಳಿಕ ಸಾಧನಾಳ ನಿಜವಾದ ರೂಪ ಬಹಿರಂಗವಾಗಿದ್ದು, ಆಸ್ಪತ್ರೆ ನಿರ್ಮಾಣಕ್ಕೆ 40 ಲಕ್ಷ ರೂ. ಕೊಡು, ಅಗತ್ಯವಿದ್ರೆ ಜಮೀನು ಮಾರುವಂತೆ ಪತಿ ಮೇಲೆ ಒತ್ತಡ ಹೇರಿದ್ದಾಳೆ.
ಇದರಿಂದ ಬೇಸತ್ತ ಪತಿ ಅಭಿಷೇಕ್ ಠಾಣೆಗೆ ದೂರು ನೀಡಿದ್ದಾನೆ. ಹಣ ನೀಡದಿದ್ದಕ್ಕೆ ಅವಳು ತನಗೆ ಬೆದರಿಕೆ ಹಾಕಿದಳು ಮತ್ತು ದೈಹಿಕವಾಗಿ ಹಲ್ಲೆ ಮಾಡಿದಳು. ಮತ್ತು ಒಂದು ಹಂತದಲ್ಲಿ ತನ್ನ ಕತ್ತು ಹಿಸಕಲು ಪ್ರಯತ್ನಿಸಿದಳು ಎಂದು ದೂರಿನಲ್ಲಿ ಆರೋಪಿಸಿದ್ದಾನೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸಾಧನಾ ಅವರು ತಾನು ಐಎಎಸ್ ಅಧಿಕಾರಿ ಅಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಗುರುತನ್ನು ಬಳಸುತ್ತಿದ್ದೇನೆ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ. ಬಳಿಕ ಪೊಲೀಸರು ಅವಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ವಂಚನೆಗೆ ಸಹಾಯ ಮಾಡಿದ ಆಕೆಯ ತಂದೆ, ಸಹೋದರ ಮತ್ತು ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net