ಇದು ವಿಶ್ವದ 4ನೇ ಅತ್ಯಂತ ದುಬಾರಿ ವಿಚ್ಛೇದನ! 15,000 ಕೋಟಿ ರೂ. ಜೀವನಾಂಶ ಕೊಡ್ತಾರಾ? ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು...Sridhar Vembu

Sridhar Vembu
Sridhar Vembu
Published on
ನವದೆಹಲಿ:  ಜೋಹೋ (Zoho) ಸಂಸ್ಥಾಪಕ ಶ್ರೀಧರ್ ವೆಂಬು ( Sridhar Vembu) ಮತ್ತು ಅವರ ಪತ್ನಿ ಪ್ರಮೀಳಾ ಶ್ರೀನಿವಾಸನ್ ಅವರ ನಡುವಿನ $1.7 ಬಿಲಿಯನ್ ಮೊತ್ತದ ವಿಚ್ಛೇದನ ಜಾಗತಿಕವಾಗಿ ನಾಲ್ಕು ಅತ್ಯಂತ ದುಬಾರಿ ವಿಚ್ಛೇದನಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ. 
ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯವೊಂದು ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದಂತೆ 1.7 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂ.) ಬಾಂಡ್ ಠೇವಣಿ ಇಡುವಂತೆ ನಿರ್ದೇಶಿಸಿದ ನಂತರ ಜೊಹೊ ಸಂಸ್ಥಾಪಕ ಮತ್ತು ಸಿಇಒ ಶ್ರೀಧರ್ ವೆಂಬು ಜಾಗತಿಕ ಸುದ್ದಿಗಳ ಕೇಂದ್ರಬಿಂದುವಾಗಿದ್ದಾರೆ.
ಜೊಹೊ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರ  ವಿಚ್ಛೇದನವು ಸುಮಾರು 15,000 ಕೋಟಿ ($1.7 ಬಿಲಿಯನ್) ಮೊತ್ತದ ಆಸ್ತಿಗೆ ಸಂಬಂಧಿಸಿದ್ದಾಗಿದ್ದು, ಇದು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ 27 ವರ್ಷಗಳ ದಾಂಪತ್ಯದ ನಂತರ, ದಂಪತಿ  ಮೇ 2021 ರಲ್ಲಿ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. ಮೆಲಿಂಡಾ ಗೇಟ್ಸ್ ಷೇರುಗಳು, ಹೂಡಿಕೆಗಳು ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಸುಮಾರು $73 ಬಿಲಿಯನ್ ಮೌಲ್ಯದ ಆಸ್ತಿಯನ್ನು ಪಡೆದಿದ್ದಾರೆ. ಇದು ದಾಖಲಾದ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿಚ್ಛೇದನವಾಗಿದೆ.
ಎರಡನೆಯದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೆಕೆಂಜಿ ಸ್ಕಾಟ್ ಅವರ 2019 ರ ವಿಚ್ಛೇದನ. ಈ ಇತ್ಯರ್ಥದ ಭಾಗವಾಗಿ ಸ್ಕಾಟ್ ಸುಮಾರು $38 ಬಿಲಿಯನ್ ಪಡೆದಿದ್ದಾರೆ ಎಂದು ವರದಿಯಾಗಿದೆ. 
ಮೂರನೇ ಅತ್ಯಂತ ದುಬಾರಿ ವಿಚ್ಛೇದನವೆಂದರೆ ಫ್ರೆಂಚ್-ಅಮೇರಿಕನ್ ಕಲಾ ವ್ಯಾಪಾರಿ ಅಲೆಕ್ ವೈಲ್ಡೆನ್‌ಸ್ಟೈನ್ ಮತ್ತು ಜೋಸೆಲಿನ್ ವೈಲ್ಡೆನ್‌ಸ್ಟೈನ್. ಅವರ ವಿವಾಹವು 21 ವರ್ಷಗಳ ನಂತರ 1999 ರಲ್ಲಿ ಕೊನೆಗೊಂಡಿತು, ಜೋಸೆಲಿನ್ ಸುಮಾರು $3.8 ಬಿಲಿಯನ್ ಪಡೆದಿದ್ದರು. ಜೋಹೋ (Zoho) ಸಂಸ್ಥಾಪಕ ಶ್ರೀಧರ್ ವೆಂಬು ಅವರದ್ದು,  ಭಾರತೀಯ ಮೂಲದ ವ್ಯಕ್ತಿಯೊಬ್ಬರ ಅತ್ಯಂತ ದುಬಾರಿ ವಿಚ್ಛೇದನ ಇದಾಗಬಹುದು.  
ಅಮೆರಿಕಾದ ಕ್ಯಾಲಿಫೋರ್ನಿಯಾ ನ್ಯಾಯಾಲಯವು ಶ್ರೀಧರ್ ವೆಂಬು ಅವರಿಗೆ 1.7 ಬಿಲಿಯನ್ (ಅಂದಾಜು 15,278 ಕೋಟಿ) ಮೊತ್ತದ ಬಾಂಡ್ ಅನ್ನು ಸಲ್ಲಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.  ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ ಹಣದ ಅಂತಿಮ ಮೊತ್ತ ಇನ್ನೂ ನಿರ್ಧಾರವಾಗಿಲ್ಲ. ಆದರೆ, ಕೇಳಿಬರುತ್ತಿರುವ $1.7 ಬಿಲಿಯನ್ ಮೊತ್ತವು ಈ ವಿಚ್ಛೇದನವನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದೆ.
ಶ್ರೀಧರ್ ವೆಂಬು ಅವರು ತಮ್ಮ ಬಳಿಯಿದ್ದ ಜೋಹೋ ಕಂಪನಿಯ ಬಹುಪಾಲು ಷೇರುಗಳನ್ನು ತಮ್ಮ ಕುಟುಂಬದ ಇತರ ಸದಸ್ಯರಿಗೆ (ಸಹೋದರ ಮತ್ತು ಸೋದರಸಂಬಂಧಿಗಳಿಗೆ) ಗುಟ್ಟಾಗಿ ವರ್ಗಾಯಿಸಿದ್ದಾರೆ. ಇದರಿಂದ ಬರಬೇಕಾದ ಆಸ್ತಿಯ ಪಾಲನ್ನು ವಂಚಿಸಿದ್ದಾರೆ ಎಂಬುದು ಪ್ರಮೀಳಾ ಅವರ ವಾದ. ಕ್ಯಾಲಿಫೋರ್ನಿಯಾ ಕಾನೂನಿನ ಪ್ರಕಾರ, ಮದುವೆಯ ನಂತರ ಗಳಿಸಿದ ಆಸ್ತಿಯಲ್ಲಿ ಪತ್ನಿಗೂ ಸಮಾನ ಪಾಲು ಇರಬೇಕು. 2020ರಲ್ಲಿ ಕೋವಿಡ್ ಸಮಯದಲ್ಲಿ ಭಾರತಕ್ಕೆ ಬಂದ ಶ್ರೀಧರ್ ಅವರು, ನಂತರ ಅಮೆರಿಕಾಗೆ ಹಿಂತಿರುಗದೆ ಪತ್ನಿ ಮತ್ತು ಮಗನನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಸುದ್ದಿಯ ಬಗ್ಗೆ ಶ್ರೀಧರ್ ವೆಂಬು ಅವರ ವಕೀಲರು ಸ್ಪಷ್ಟನೆ ನೀಡಿದ್ದು, ನ್ಯಾಯಾಲಯದ ಈ ಆದೇಶದ ವಿರುದ್ಧ ತಾವು ಮೇಲ್ಮನವಿ (Appeal) ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಈ ಆರೋಪಗಳು ಸತ್ಯಕ್ಕೆ ದೂರವಾದವು ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಅವರು ವಾದಿಸಿದ್ದಾರೆ.
ಈ ಪ್ರಕರಣವು ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿದೆ. ಇದು ಕೇವಲ ಹಣಕಾಸಿನ ವಿವಾದವಲ್ಲದೆ, ಇಬ್ಬರ ನಡುವಿನ ಕಹಿ ಸಂಬಂಧ ಮತ್ತು ಮಗನ ಭವಿಷ್ಯದ ಕುರಿತಾದ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ.
ಜೋಹೋ ಕಂಪನಿಯ ಮೌಲ್ಯವು ಶತಕೋಟಿ ಡಾಲರ್‌ಗಳಷ್ಟಿರುವುದರಿಂದ, ಈ ವಿಚ್ಛೇದನವು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net