ಮಹಿಳಾ ಮೀಸಲಾತಿ ಬಿಲ್​; ವಿಶೇಷ ಸಂಸತ್ ಅಧಿವೇಶನ; ಕಲಾಪಕ್ಕೆ ಗೈರಾಗದಂತೆ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದ ಬಿಜೆಪಿ | BJP

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಮಹಿಳಾ ಮೀಸಲಾತಿ ಬಿಲ್ ಜಾರಿಗೆ ಸಂಬಂಧಿಸಿದಂತೆ ಏ. 16ರಿಂದ ಆರಂಭವಾಗುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಿರುವಂತೆ ಮತ್ತು ಯಾವುದೇ ಕಾರಣಕ್ಕೂ ಗೈರಾಗದಂತೆ ನಿರ್ದೇಶಿಸಿ ಬಿಜೆಪಿ(BJP) ತನ್ನ ಉಭಯ ಸದನಗಳ ಸದಸ್ಯರಿಗೆ ಭಾನುವಾರ(ಏ. 12) ಮೂರು ಸಾಲಿನ ವಿಪ್ ಜಾರಿ ಮಾಡಿದೆ.
ಏಪ್ರಿಲ್ 16ರಿಂದ 18ರವರೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಬಿಜೆಪಿ ಸದಸ್ಯರಿಗೆ ಮೂರು ಸಾಲಿನ ವಿಪ್ ನೀಡಲಾಗುತ್ತಿದೆ. ಕೇಂದ್ರ ಸಚಿವರು ಸೇರಿದಂತೆ ಎಲ್ಲಾ ಸಂಸದರು ಮೂರು ದಿನಗಳ ಕಲಾಪದುದ್ದಕ್ಕೂ ಸದನದಲ್ಲಿ ಹಾಜರಿರಬೇಕು. ಹಾಜರಾತಿ ಕಡ್ಡಾಯ ಮತ್ತು ಈ ಅವಧಿಯಲ್ಲಿ ಯಾವುದೇ ರಜೆ ನೀಡಲಾಗುವುದಿಲ್ಲ. ಸದಸ್ಯರು ನಿರ್ದೇಶನವನ್ನು ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಪ್‌ನಲ್ಲಿ ಹೇಳಲಾಗಿದೆ.
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯ ಮೇಲೆ ಕೇಂದ್ರೀಕರಿಸಿ, ಕೇಂದ್ರ ಸರ್ಕಾರವು ಅನುಷ್ಠಾನದ ಸಮಯಕ್ಕೆ ಸಂಬಂಧಿಸಿದ ಪ್ರಮುಖ ತಿದ್ದುಪಡಿಗಳನ್ನು ಮಾಡಲು ಯೋಜಿಸಿದೆ. 2023ರ ನಾರಿ ಶಕ್ತಿ ವಂದನ ಕಾಯ್ದೆಯು ಮಹಿಳಾ ಮೀಸಲಾತಿಯನ್ನು ಮುಂದಿನ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಜೋಡಿಸಿತ್ತು, ಆದರೆ ಜನಗಣತಿಯಲ್ಲಿನ ವಿಳಂಬವು 2011ರ ಡೇಟಾವನ್ನು ಬಳಸಿಕೊಂಡು ಮುಂದುವರಿಯಲು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗುತ್ತಿದೆ ಎನ್ನಲಾಗಿದೆ.
ಇನ್ನೂ ಈ ಐತಿಹಾಸಿಕ ಮಸೂದೆಗೆ ಮೂರು ದಿನಗಳ ಅಧಿವೇಶನದಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಪ್ರಧಾನಿ ಮೋದಿ, ಲೋಕಸಭೆ ಮತ್ತು ರಾಜ್ಯಸಭೆಯ ರಾಜಕೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದರೆ ಪ್ರಧಾನಿ ಮೋದಿಯವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆ ಬಗ್ಗೆ ಸರ್ಕಾರ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಅದರ ಅಂಶಗಳಿಗೆ ಯಾವುದೇ ಉಪಯುಕ್ತಕರ ಚರ್ಚೆ ಅಸಾಧ್ಯ. ಅಧಿವೇಶನಕ್ಕೂ ಮುನ್ನ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net