ಬಿರಿಯಾನಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತಿಯನ್ನೇ ಕೊಂದ ಪತ್ನಿ: ಶವದ ಪಕ್ಕ ಕುಳಿತು ಅಶ್ಲೀಲ ವಿಡಿಯೋ ನೋಡಿದ ಕಿರಾತಕಿ!

Wife kills husband
Wife kills husband
Published on
ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಲೋಕಂ ಶಿವನಾಗರಾಜು ಎಂದು ಗುರುತಿಸಲಾಗಿದೆ. ಈತನ ಪತ್ನಿ ಲಕ್ಷ್ಮಿ ಮಾಧುರಿ ಎಂಬಾಕೆ ಗೋಪಿ ಎಂಬುವವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಪತಿಗೆ ತಿಳಿದರೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಇಬ್ಬರೂ ಸೇರಿ ಶಿವನಾಗರಾಜು ಹತ್ಯೆಗೆ ಸ್ಕೆಚ್ ಹಾಕಿದ್ದರು.
ಯಾರಿಗೂ ಅನುಮಾನ ಬಾರದಂತೆ ಕೃತ್ಯ ಎಸಗಲು ಪ್ಲ್ಯಾನ್ ಮಾಡಿದ್ದ ಮಾಧುರಿ, ರಾತ್ರಿ ಮನೆಯಲ್ಲಿ ರುಚಿಯಾದ ಬಿರಿಯಾನಿ ತಯಾರಿಸಿದ್ದಳು. ಆದರೆ ಅದರಲ್ಲಿ ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸಿದ್ದಳು. ಬಿರಿಯಾನಿ ತಿಂದ ಶಿವನಾಗರಾಜು ಗಾಢ ನಿದ್ದೆಗೆ ಜಾರುತ್ತಿದ್ದಂತೆ, ಮಾಧುರಿ ತನ್ನ ಪ್ರಿಯಕರ ಗೋಪಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ನಂತರ ಇಬ್ಬರೂ ಸೇರಿ ಮಲಗಿದ್ದ ವ್ಯಕ್ತಿಯ ಮುಖಕ್ಕೆ ದಿಂಬು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಹೃದಯಾಘಾತದ ನಾಟಕ

ಕೊಲೆಯ ನಂತರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಮಾಧುರಿ ಗ್ರಾಮಸ್ಥರಲ್ಲಿ ಮತ್ತು ಸಂಬಂಧಿಕರಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾಳೆ. ಆದರೆ ಮೃತನ ತಂದೆ ಮತ್ತು ಸ್ನೇಹಿತರು ದೇಹದ ಮೇಲಿದ್ದ ಗಾಯದ ಗುರುತುಗಳು ಹಾಗೂ ರಕ್ತದ ಕಲೆಗಳನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ

ಪೊಲೀಸರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಶಿವನಾಗರಾಜು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಪೊಲೀಸರು ಲಕ್ಷ್ಮಿ ಮಾಧುರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ತನಿಖೆಯ ವೇಳೆ ಮತ್ತೊಂದು ಆಘಾತಕಾರಿ ವಿಷಯವೇನೆಂದರೆ, ಪತಿಯನ್ನು ಕೊಂದ ನಂತರ ಮಾಧುರಿ ಶವದ ಪಕ್ಕದಲ್ಲೇ ಕುಳಿತು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ್ದಳು ಎಂಬುದು ಫೋರೆನ್ಸಿಕ್ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net